Sunday, 15th December 2024

“ಮೀಸಲಾತಿ ಹಕ್ಕು ಮೂಲಭೂತ ಹಕ್ಕಲ್ಲ” ಎಂಬ ಸುಪ್ರೀಂಕೋರ್ಟ್ ಆದೇಶವೇ ಪ್ರಶ್ನಾರ್ಹ- ಎಸ್‌ಡಿಪಿಐ

ದೆಹಲಿ,

ಭಾರತದ  ಸಂವಿಧಾನ ಸರ್ವೋಚ್ಚವೋ ಅಥವಾ ದೇಶದ ಸುಪ್ರೀಂ ಕೋರ್ಟ್  ಸರ್ವೋಚ್ಚವೋ ಎಂಬ ಪ್ರಶ್ನೆಯನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ  (ಎಸ್‌ಡಿಪಿಐ) ಎತ್ತಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸಂವಿಧಾನವು ಸುಪ್ರೀಂ  ಕೋರ್ಟ್‌ಗಿಂತ ಮೇಲಿದೆಯೋ ಅಥವಾ ಸುಪ್ರೀಂ ಕೋರ್ಟ್ ಸಂವಿಧಾನಕ್ಕಿಂತ ಮೇಲಿದೆಯೋ ಎಂದು  ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಜಿ ಪ್ರಶ್ನಿಸಿದ್ದಾರೆ.

ಮೀಸಲಾತಿ  ಹಕ್ಕು ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ 2020 ರ ಜೂನ್ 11 ರಂದು ನೀಡಿದ  ತೀರ್ಪಿನ ಹಿನ್ನೆಲೆಯಲ್ಲಿ ಮತ್ತು 2020-21ನೇ ಸಾಲಿನಲ್ಲಿ ಪದವಿಪೂರ್ವ, ಸ್ನಾತಕೋತ್ತರ  ಮತ್ತು ದಂತ ಶಿಕ್ಷಣಕ್ಕಾಗಿ ಅಖಿಲ ಭಾರತ ಕೋಟಾದಲ್ಲಿ ರಾಜ್ಯದ ಪಾಲಿನ ವೈದ್ಯಕೀಯ  ಸೀಟುಗಳನ್ನು ತಮಿಳುನಾಡು ಕಾನೂನಿನ ಪ್ರಕಾರ ಒ.ಬಿ.ಸಿ.ಗಳಿಗೆ ಶೇಕಡಾ 50ರಷ್ಟು  ಸೀಟುಗಳನ್ನು ನೀಡುವುದನ್ನು ನಿರಾಕರಿಸಿದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ವಿವಿಧ  ರಾಜಕೀಯ ಪಕ್ಷಗಳು ಸಲ್ಲಿಸಿದ ಮನವಿಗಳನ್ನು ಅಂಗೀಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ  ಬಳಿಕ ಈ ಪ್ರಶ್ನೆಗಳು ಉದ್ಭವವಾಗಿವೆ.

ಭಾರತೀಯ ಸಂವಿಧಾನದ 16 (4) ವಿಧಿಯು  ಹೀಗೆ ಹೇಳುತ್ತದೆ: “ರಾಜ್ಯದ ಅಭಿಪ್ರಾಯದಲ್ಲಿ, ರಾಜ್ಯದ ಸೇವೆಯಲ್ಲಿ ಸಮರ್ಪಕ  ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಭಾವಿಸುವ ಯಾವುದಾದರು ಹಿಂದುಳಿದ ವರ್ಗದ ಜನರ  ಪರವಾಗಿ ಮೀಸಲಾತಿಯ ಸೌಲಭ್ಯ ಒದಗಿಸುವುದನ್ನು ಈ ವಿಧಿಯು ತಡೆಯುವುದಿಲ್ಲ.  ಎಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಹೇಳಿದ್ದಾರೆ.

ಸುಪ್ರೀಂ  ಕೋರ್ಟ್‌ನ ಈ ಆದೇಶವು, ಪ್ರತಿ ಭಾರತೀಯ ನಾಗರಿಕರ ಸಮಾನ ಸ್ಥಾನಮಾನ ಮತ್ತು  ಸಮಾನ  ಅವಕಾಶದ ಮೂಲಭೂತ ಸಾಂವಿಧಾನಿಕ ಹಕ್ಕನ್ನು ಕಿತ್ತುಹಾಕುತ್ತದೆ. ಪರಿಶಿಷ್ಟ ಜಾತಿ,  ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಇತರ ಹಿಂದುಳಿದ ವರ್ಗಗಳು,  ಆದಿವಾಸಿಗಳು, ಬುಡಕಟ್ಟು ಇತ್ಯಾದಿ ಜನಾಂಗದವರು ಸಾವಿರಾರು ವರ್ಷಗಳಿಂದ ಅನುಭವಿಸಿದ  ದಬ್ಬಾಳಿಕೆಯನ್ನು ಪರಿಹರಿಸಲು ಸಂವಿಧಾನದ ಅತ್ಯಂತ ನಿರ್ಣಾಯಕ ಸೌಲಭ್ಯವಾಗಿದೆ ಮೀಸಲಾತಿ.  ಭಾರತೀಯ ಸಮಾಜದಲ್ಲಿನ ಒಟ್ಟು ಅಸಮಾನತೆಗಳನ್ನು ತೊಡೆದುಹಾಕಲು 70 ವರ್ಷಗಳು ಬಹಳ ಕಡಿಮೆ  ಅವಧಿಯಾಗಿದೆ. ಪ್ರಸ್ತುತ ತನ್ನ ಅನ್ಯಾಯದ ಆದೇಶದಿಂದ ಸುಪ್ರೀಂ ಕೋರ್ಟ್, ಭಾರತೀಯ  ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ವಿಫಲಗೊಳಿಸಿದೆ ಎಂದು ಫೈಜಿರವರು  ಅಭಿಪ್ರಾಯಿಸಿದ್ದಾರೆ.