ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ರಾಜ್ಯದಲ್ಲಿ ಭಾನುವಾರ 54 ಕೋವಿಡ್-19 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮಂಡ್ಯದ ಕೆ.ಆರ್ ಪೇಟೆಯೊಂದರಲ್ಲೇ 22 ಮಂದಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 55 ಮಂದಿಗೆ ಕರೋನಾ ಕಾಣಿಸಿಕೊಂಡ ಪರಿಣಾಮ ಸೋಂಕಿತರ ಸಂಖ್ಯೆ 1147ಕ್ಕೆ ಏರಿಕೆಯಾಗಿದೆ.
ಸದ್ಯ, ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಮಂಡ್ಯ 22, ಕಲಬುರಗಿ 10, ಧಾರವಾಡ 4, ಹಾಸನ 6, ಕೋಲಾರ 3, ದಕ್ಷಿಣ ಕನ್ನಡ 2, ಯಾದಗಿರಿ 3, ಉಡುಪಿ 1, ಶಿವಮೊಗ್ಗ 2, ವಿಜಯಪುರ ಒಂದು ಕೇಸ್ ಪತ್ತೆಯಾಗಿದೆ. ಒಟ್ಟು 55 ಕೇಸುಗಳ ಪೈಕಿ 36 ಪುರುಷರು, 18 ಮಹಿಳೆಯರು ಇದ್ದಾರೆ.
ಇನ್ನು, ಉಡುಪಿ ಮೂಲದ ವ್ಯಕ್ತಿಯೋರ್ವ ಕರೋನಾ ಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಮೃತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ಜತೆಗೆ 1147 ಸೋಂಕಿತರಲ್ಲಿ 497 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ 611 ಆ್ಯಕ್ಟೀವ್ ಕೇಸುಗಳಿವೆ.
ಕರೋನಾ ವೈರಸ್ ಭಾರತಕ್ಕೆ ಕಾಲಿಟ್ಟ ಕೆಲ ದಿನಗಳವರೆಗೂ ದೇಶದಲ್ಲಿ ಅತಿಹೆಚ್ಚು ಕರೋನಾ ಪ್ರಕರಣ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿತ್ತು. ಆದರೆ ಸರ್ಕಾರದ ಕಟ್ಟುನಿಟ್ಟಿನ ಕ್ರಮ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳ ಶ್ರಮ ಭಾನುವಾರ ಎರಡನೇ ಸ್ಥಾನದಿಂದ 13ನೇ ಸ್ಥಾನಕ್ಕಿಳಿದಿದೆ.
ಹೀಗಾಗಿ ಬೇರೆ ರಾಜ್ಯಗಳಿಗೆ ಕರ್ನಾಟಕವನ್ನು ಹೋಲಿಕೆ ಮಾಡಿದರೆ ನಮ್ಮಲ್ಲಿ ಸಾಕಷ್ಟು ಸಮಾಧಾನಕರ ಸ್ಥಿತಿ ಇದೆ. ಎಲ್ಲರೂ ಅಂದುಕೊಂಡಂತೆ ವ್ಯಾಧಿ ವ್ಯಾಪಕವಾಗದೆ ನಿಯಂತ್ರಣದಲ್ಲಿದೆ. ಅಂತೆಯೇ ಸೃಷ್ಟಿಯಾಗಿದ್ದ ಭೀತಿ ಹುಸಿಯಾಗುವಂತೆಯೂ ಆಗಿದೆ. ಎಲ್ಲ ವರ್ಗದ ಜನರ ಸಂವೇದನೆಗಳಿಗೆ ಅನುಗಣವಾಗಿ ಸೂಕ್ಷ್ಮ ಗ್ರಾಹಿಯಾಗಿ ವರ್ತಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು