Saturday, 26th October 2024

ಮೈಸೂರಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ: ಕಠಿಣ ಕ್ರಮಕ್ಕೆ ತೀರ್ಮಾನ

ಮೈಸೂರು:

ಕೋವಿಡ್‌–19 ಪ್ರಕರಣಗಳು ದಿನೇದಿನೇ ಹೆಚ್ಚುತ್ತಿರುವ ಕಾರಣ ಮೈಸೂರು ನಗರದಲ್ಲಿ ಏಪ್ರಿಲ್ 5ರಿಂದ 14ರವರೆಗೆ ನಿತ್ಯ ಸಂಜೆ 6ರಿಂದ ಯಾವುದೇ ಅಂಗಡಿ ತೆರೆಯಬಾರದು ಎಂದು ಪೊಲೀಸ್‌ ಕಮಿಷನರ್‌ ಡಾ.ಚಂದ್ರಗುಪ್ತ ಸೂಚನೆ ನೀಡಿದ್ದಾರೆ.

ಔಷಧ ಅಂಗಡಿ, ಆಸ್ಪತ್ರೆ, ಹೋಂ ಡೆಲಿವರಿ ಹೊರತುಪಡಿಸಿ ದಿನಸಿ ಅಂಗಡಿ, ತರಕಾರಿ, ಹಣ್ಣು ಮಾರುವ ಅಂಗಡಿ ಸೇರಿದಂತೆ ಯಾವುದೇ ಅಂಗಡಿ ತೆರೆಯುವಂತಿಲ್ಲ. ಆಕಸ್ಮಾತ್‌ ತೆರೆದಿರುವುದು ಕಂಡುಬಂದರೆ ಪ್ರಕರಣ ದಾಖಲಿಸಲಾಗುವುದು ಎಂದು ಶನಿವಾರ ಹೇಳಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲಾ ಅವಧಿಯಲ್ಲೂ ದಿನಸಿ ಅಂಗಡಿ, ತರಕಾರಿ ಮಳಿಗೆಗಳು ಹಾಗೂ ತಳ್ಳು ಗಾಡಿಗೆ ಅನುಮತಿ ನೀಡಲಾಗಿತ್ತು. ಈಗಾಗಲೇ 500ಕ್ಕೂ ಹೆಚ್ಚು ವಾಹನ ವಶಪಡಿಸಿಕೊಳ್ಳಲಾಗಿದೆ. ಇಷ್ಟಾದರೂ ಜನರು ರಸ್ತೆಗೆ ಬರುತ್ತಿದ್ದಾರೆ. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದರೂ ಜನರಿಗೆ ಸಮಸ್ಯೆಯ ಗಂಭೀರತೆ ಅರ್ಥವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲವರು ‌ಅನವಶ್ಯಕವಾಗಿ ಪಾಸ್‌ ಕೇಳಿಕೊಂಡು ಬರುತ್ತಿದ್ದಾರೆ. ವಾಟ್ಸ್‌ಆ್ಯಪ್‌ಗೆ ಪದೇಪದೇ ಸಂದೇಶ ಕಳಿಸುತ್ತಿದ್ದಾರೆ. ತುಂಬಾ ಅಗತ್ಯವಿದ್ದರೆ ಮಾತ್ರ ಪಾಸ್‌ ಕೊಡಲಾಗುವುದು ಎಂದರು