Thursday, 12th December 2024

ಮೌಲ್ಯಮಾಪನ ಶಿಕ್ಷಕರಿಗೆ ಕಡ್ಡಾಾಯಗೊಳಿಸಬೇಡಿ

ಬೆಂಗಳೂರು

ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ವಿಚಾರದಲ್ಲಿ ರಾಜ್ಯದ ಪರಿಸ್ಥಿತಿಯನ್ನು ಆಸಾಧಾರಣವೆಂದು ಪರಿಗಣಿಸಿ, ರಾಜ್ಯ ಸರಕಾರ ಕಡ್ಡಾಯ ಮೌಲ್ಯಮಾಪನದಿಂದ ಶಿಕ್ಷರಿಗೆ ವಿನಾಯಿತಿ ನೀಡಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹಾಗೂ ಪ್ರೌಢ ಶಿಕ್ಷಣ ಮಂಡಳಿ ರಾಜ್ಯದಲ್ಲಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯಕ್ಕೆ ಚಾಲನೆ ನೀಡಿದೆ. ಕೋವಿಡ್-19 ರ ಕಾರಣಕ್ಕಾಗಿ ಮೌಲ್ಯ ಮಾಪನ ಕೇಂದ್ರಗಳನ್ನು ಜಿಲ್ಲಾ ವಿಭಾಗ ಕೇಂದ್ರಗಳನ್ನು ಹೆಚ್ಚಿಸಬೇಕು. ಮೌಲ್ಯಮಾಪನ ಕಾರ್ಯದ ಶಿಕ್ಷಕರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಪರೀಕ್ಷಾ ಕೇಂದ್ರಗಳಿಗೆ ಸಾರ್ವಜನಿಕ ಸಾರಿಗೆಯ ಕೊರತೆ, ಪರೀಕ್ಷಾ ಕೇಂದ್ರಗಳಲ್ಲಿ ಊಟೋಪಚಾರದ ಕೊರತೆ, ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳ ಕೊರತೆ , ಜಿಲ್ಲಾ ಕೇಂದ್ರಗಳಲ್ಲಿ ತಂಗಲು ಕೊಠಡಿಗಳ ಕೊರತೆ, ವಿಶಾಲವಾದ ಕೊಠಡಿಗಳ ಕೊರತೆಯಿಂದಾಗಿ ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ 55 ವರ್ಷದ ಶಿಕ್ಷಕರು ಮೌಲ್ಯಮಾಪನಕ್ಕೆ ಬಾರದೇ ಇರುವುದು ಉತ್ತಮ ಎಂದು ವೈದ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ಕರೋನಾ ಸಾಂಕ್ರಾಮಿಕ ರೋಗ ಹೆಚ್ಚುತ್ತಿದ್ದು, ಶಿಕ್ಷಕರು ಬೆಂಗಳೂರು ಕೇಂದ್ರಕ್ಕೆ ಆಗಮಿಸಿ ಮೌಲ್ಯಮಾಪನದಲ್ಲಿ ತೊಡಗಿಸಿಕೊಳ್ಳುವುದು ಸೂಕ್ತವಲ್ಲ. ಶಿಕ್ಷಕರ ಹಿತದೃಷ್ಟಿಯಿಂದ ಮೌಲ್ಯಮಾಪನ ಕೇಂದ್ರಗಳನ್ನು ಹೆಚ್ಚಿಸಿ, ಕಡ್ಡಾಯ ಮೌಲ್ಯಮಾಪನದಿಂದ ವಿನಾಯಿತಿ ನೀಡಬೇಕು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿ ಮೌಲ್ಯಮಾಪನ ಕಾರ್ಯವನ್ನು ಕಡ್ಡಾಯಗೊಳಿಸದೇ ಶಿಕ್ಷಕರಿಗೆ ಆಯ್ಕೆಯ ಅವಕಾಶವನ್ನು ಕಲ್ಪಿಸಬೇಕು ಎಂದು ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.