Sunday, 15th December 2024

ಯಲಹಂಕದಲ್ಲಿ ಅಧಿಕಾರಿಗಳೇ ಪ್ಯಾಕಿಂಗ್ ಕಾರ್ಯ ನಿರ್ವಹಿಸಿ ಮಾದರಿ

ಯಲಹಂಕ :
ಕೋವಿಡ್-19 ಸಂಕಷ್ಟಿತರಿಗೆ ಸರ್ಕಾರ ನೀಡಿರುವ ದಿನಸಿ ಪದಾರ್ಥಗಳ ಪ್ಯಾಕಿಂಗ್ ಕಾರ್ಯವನ್ನು  ಯಲಹಂಕದ ಮಿನಿ ವಿಧಾನ ಸೌಧದ ಕೆಳ ಮಹಡಿಯಲ್ಲಿ ತಹಶೀಲ್ದಾರ್ ಕಚೇರಿ, ತಾಲ್ಲೂಕು ಪಂಚಾಯಿತಿ ಕಚೇರಿ, ಗ್ರಾಮ ಪಂಚಾಯತಿ ಪಿಡಿಒ ಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೇ ನಿರ್ವಹಿಸುತ್ತಿದ್ದಾರೆ.
ಯಥಾ ರಾಜ ತಥಾ ಪ್ರಜಾ ಎಂಬಂತೆ ಈ ಕಾರ್ಯಕ್ಕೆ ತಹಶೀಲ್ದಾರ್ ಎನ್ ರಘುಮೂರ್ತಿ ಮತ್ತು ಇಓ ಕಿಶೋರ್ ರವರೇ ಅಧಿಕಾರಿಗಳಿಗೆ ಸ್ಪೂರ್ತಿ ನೀಡಿರುವುದು ವಿಶೇಷವೆನಿಸಿದೆ. ಯಲಹಂಕ ತಾಲ್ಲೂಕು ಕೋವಿಡ್-19 ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ಸುಮಾರು 13 ಸಾವಿರ ಕೂಲಿ ಕಾರ್ಮಿಕರಿದ್ದು, ಸುಮಾರು 10 ಸಾವಿರ ಕಾರ್ಮಿಕರಿಗೆ ಸಾಕಾಗುವಷ್ಟು ದಿನಸಿ ಪದಾರ್ಥಗಳನ್ನು ಸರ್ಕಾರ ನೀಡಿದೆ. ಉಳಿದ 3 ಸಾವಿರ ಕೂಲಿ ಕಾರ್ಮಿಕರಿಗೆ ತಹಶೀಲ್ದಾರ್ ಎನ್ ರಘುಮೂರ್ತಿ ಯವರು ಪರಿಶ್ರಮ ವಹಿಸಿ ವಿವಿಧ ದಾನಿಗಳಿಂದ ದಿನಸಿ ಪದಾರ್ಥಗಳನ್ನು ಸಂಗ್ರಹಿಸಿ ನೀಡಲು ವ್ಯವಸ್ಥೆ ಕಲ್ಪಿಸಿದ್ದಾರೆ.
13 ಸಾವಿರ ದಿನಸಿ ಕಿಟ್ ಗಳ ಪ್ಯಾಕಿಂಗ್ ಕಾರ್ಯವನ್ನು ತಹಶೀಲ್ದಾರ್ ಕಚೇರಿ, ತಾಲ್ಲೂಕು ಪಂಚಾಯಿತಿ ಕಚೇರಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಕೈಗೊಂಡಿರುವುದು ಪ್ರಶಂಸೆಗೆ ಪಾತ್ರವಾಗಿದೆ. ಎಲ್ಲಾ ಕೆಲಸಕ್ಕೂ ಇತರರನ್ನು ಅವಲಂಬಿಸುವ ಇಂತಹ ಕಾಲಘಟ್ಟದಲ್ಲಿ ಅಧಿಕಾರಿಗಳು ಮತ್ತು ಅವರ ಸಿಬ್ಬಂದಿಗಳೇ ಒಟ್ಟಿಗೆ ಸೇರಿ ಆತ್ಮಸಂತೋಷ ಪೂರ್ವಕವಾಗಿ ಪ್ಯಾಕಿಂಗ್ ಕಾರ್ಯವನ್ನು ಕೈಗೊಂಡಿರುವುದು ನಿಜಕ್ಕೂ ಮಾದರಿ ಎನಿಸುತ್ತದೆ.