Saturday, 14th December 2024

ರಾಜ್ಯದಲ್ಲಿ ಒಂದೇ ದಿನ 45 ಕೋಟಿ ರು. ಮೌಲ್ಯದ ಮದ್ಯ ಮಾರಾಟ

3.9 ಲಕ್ಷ ಲೀಟರ್ ಬಿಯರ್, 8.5 ಲಕ್ಷ ಲೀಟರ್ ಭಾರತೀಯ ಮದ್ಯ ಮಾರಾಟ
ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಬರೋಬ್ಬರಿ 41 ದಿನಗಳಿಂದ ಮದ್ಯ ಸಿಗದೆ ಕಂಗಾಲಾಗಿದ್ದ ಮದ್ಯ ಪ್ರಿಯರಿಗೆ ಲಾಕ್‍ಡಾನ್ ಸಡಿಲಿಕೆಯಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮದ್ಯ ಲಭ್ಯವಾಗಿದೆ. ರಾಜ್ಯಾದ್ಯಂತ ಒಂದೇ ದಿನ ಇಂದು 45 ಕೋಟಿ ರು. ಮೌಲ್ಯದ ಮದ್ಯ ಮಾರಾಟವಾಗಿದೆ.
ನಿರ್ಬಂಧಿತ ವಲಯ ಹೊರತು ಪಡಿಸಿ ರಾಜ್ಯದ ಎಲ್ಲ ಕಡೆ ಮದ್ಯದಂಗಡಿಗಳು ತೆರೆದಿದ್ದವು. ಪರಿಣಾಮ ಬಹುತೇಕ ಮದ್ಯದಂಗಡಿಗಳಲ್ಲಿದ್ದ ಸ್ಟಾಕ್ ಖಾಲಿಯಾಗಿದೆ. ಸಾಮಾನ್ಯ ದಿನಗಳಲ್ಲಿ ನಿತ್ಯ 60 ಕೋಟಿ ರು. ಮೌಲ್ಯದ ಮದ್ಯ ಮಾರಾಟ ಆಗುತ್ತಿತ್ತು. ಬಹು ದಿನಗಳ ಬಳಿಕ ಮತ್ತೆ ವಹಿವಾಟು ಆರಂಭವಾದ ಕಾರಣ ನಿರೀಕ್ಷೆಯಂತೆಯೇ ಇಂದು ಮದ್ಯ ಮಾರಾಟ ಜೋರಾಗಿದೆ. ಇದನ್ನು ಓದಿ: ರಾಯಚೂರಿನಲ್ಲಿ ಹೈ ಬ್ರಾಂಡ್ ಮದ್ಯ ಖಾಲಿ- ಕ್ಯೂ ನಿಂತವರಿಗೆ ನಿರಾಸೆ
ಇಂದು ಒಟ್ಟಾರೆ 3.9 ಲಕ್ಷ ಲೀಟರ್ ಬಿಯರ್ ಹಾಗೂ 8.5 ಲಕ್ಷ ಲೀಟರ್ ಭಾರತೀಯ ಮದ್ಯ ಮಾರಾಟವಾಗಿದೆ. ಸರ್ಕಾರ ಹಲವು ಷರತ್ತುಗಳ ಅನ್ವಯ ಇಂದು ಮದ್ಯದಂಗಡಿ ತೆರಯಲು ಅನುಮತಿ ನೀಡಿತ್ತು. ಮೊದಲ ದಿನವಾದ ಕಾರಣ ಬಹುತೇಕ ಭಾಗಗಳಲ್ಲಿ ಮದ್ಯದಂಗಡಿಗಳ ಎದುರು ದೂರದವರೆಗೆ ಸಾಲು ಕಂಡು ಬಂದಿತ್ತು.
ಉಳಿದಂತೆ ಮದ್ಯದ ದಾಸ್ತಾನಿನ ಬಗ್ಗೆ ಸ್ಪಷ್ಟನೆ ನೀಡಿರುವ ಅಬಕಾರಿ ಇಲಾಖೆ, ಈಗಾಗಲೇ ಕೆ.ಎಸ್.ಬಿ.ಸಿ.ಎಲ್ ಡಿಪೋಗಳಲ್ಲಿ ಸಾಕಷ್ಟು ಮದ್ಯ ದಾಸ್ತಾನು ಮಾಡಲಾಗಿದೆ. ಡಿಸ್ಟಿಲರಿ ಮತ್ತು ಬ್ರೀವರಿಗಳನ್ನು ನಡೆಸಲು ಅನುಮತಿಯನ್ನು ನೀಡಲಾಗಿರುತ್ತದೆ. ಅಬಕಾರಿ ಆಯುಕ್ತರ ಸೂಚನೆಯ ಮೇರೆಗೆ ಜಿಲ್ಲಾ ಮಟ್ಟದಲ್ಲಿ ಅಬಕಾರಿ ಅಧಿಕಾರಿಗಳು ಸಿಎಲ್-2 ಮತ್ತು ಸಿಎಲ್-11(ಸಿ) ಸನ್ನದುದಾರರ ಸಭೆಯನ್ನು ಕರೆದು ಈಗಾಗಲೇ ತಿಳುವಳಿಕೆಯನ್ನು ನೀಡಿದ್ದಾರೆ ಎಂದು ತಿಳಿಸಿದೆ.
ಹಲವು ಸ್ಥಳಗಳಲ್ಲಿ ಸಾಮಾಜಿಕ ಅಂತರ ಮರೆತು ಮದ್ಯದಂಗಡಿಗಳ ಎದುರು ಜನರು ಸೇರಿದ್ದರು. ಈ ಕುರಿತು ಕ್ರಮಕೈಗೊಳ್ಳುವ ಕುರಿತು ಇಲಾಖೆ ತಿಳಿಸಿದೆ. ಅಲ್ಲದೇ ಎಂ.ಆರ್.ಪಿ ಬೆಲೆಯನ್ನು ಉಲ್ಲಂಘಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಕೆಲವು ದೂರುಗಳು ಬಂದರೆ ಪರಿಶೀಲನೆ ನಡೆಸಿ ಕಾನೂನಿ ಅನ್ವಯ ಅಮಾನತು ಮಾಡುವ ಕುರಿತು ಕ್ರಮಕೈಗೊಳ್ಳಲಾಗಿದೆ. ಅಬಕಾರಿ ಆಯುಕ್ತರು ಆಗಿಂದಾಗೆ ಬೇಕಾದ ಕ್ರಮಗಳ ಬಗ್ಗೆ ವಿಮರ್ಶೆ ಮಾಡುತ್ತಾರೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.