Thursday, 12th December 2024

ರಾಜ್ಯದಲ್ಲಿ ಕರೋನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಕೇಂದ್ರ  ಒಪ್ಪಿಗೆ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು
ಕರೋನಾ ಸೋಂಕು ಚಿಕಿತ್ಸೆಯಲ್ಲಿ ಗಮನಾರ್ಹ ಯಶಸ್ಸುಗಳಿಸಿರುವ ಪ್ಲಾಸ್ಮಾ ಚಿಕಿತ್ಸೆಗೆ ಅನುಮತಿ ನೀಡಬೇಕೆಂದು ಕೋರಿ ಸಲ್ಲಿಸಿದ್ದ ರಾಜ್ಯ ಸರ್ಕಾರದ ಮನವಿಯನ್ನುಕೇಂದ್ರ ಸರಕಾರದ ಸಾರ್ವಜನಿಕ ಆರೋಗ್ಯ ನಿರ್ದೇಶನಾಲಯ ಅನುಮೋದಿಸಿದೆ.
ಕರೋನಾ ವೈರಾಣುವಿನ ವಿರುದ್ಧ ಗೆಲುವು ಸಾಧಿಸಲು ರಾಜ್ಯ ಸರಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಇದೇ ನಿಟ್ಟಿನಲ್ಲಿ ಕೋವಿಡ್ ಸೋಂಕಿತರಿಗೆ ಬೆಂಗಳೂರಿನ ಎಚ್.ಸಿ.ಜಿ ಆಸ್ಪತ್ರೆಯ ಡಾ.ವಿಶಾಲ್ ರಾವ್ ರವರಿಗೆ ಪ್ಲಾಸ್ಮಾ ಟ್ರೀಟ್ಮೆಂಟ್ ಮಾಡಲು ಅನುಮತಿ ನೀಡುವಂತೆ ರಾಜ್ಯ ಸರಕಾರದ ಕೋರಿಕೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಕರೋನಾ ವಿರುದ್ಧದ ಹೋರಾಟದಲ್ಲಿ ಇದೊಂದು ಮಹತ್ವದ ಅಸ್ತ್ರ ಎಂದೇ ಪರಿಗಣಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಕೆಲದಿನಗಳ ಹಿಂದಷ್ಟೇ ಕೋವಿಡ್ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡುವ ಪರವಾಗಿ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಒಬ್ಬ ವೈದ್ಯರಾಗಿ ಪ್ಲಾಸ್ಮಾ ಚಿಕಿತ್ಸೆಯಿಂದ ಕೋವಿಡ್ ವಿರುದ್ಧ ಉತ್ತಮ ಯಶಸ್ಸು ಸಾಧಿಸಬಹುದೆಂದು ನನಗೆ ಅನ್ನಿಸುತ್ತದೆ ಎಂದು ಅವರು ಹೇಳಿದ್ದಾರೆ. ಈಗಾಗಲೇ ಕೇರಳ ರಾಜ್ಯದಲ್ಲಿ ಈ ಚಿಕಿತ್ಸೆ ಫಲಕಾರಿಯಾಗಿದ್ದು ಕರ್ನಾಟಕದಲ್ಲೂ ಇದು ಉತ್ತಮ ಫಲಿತಾಂಶ ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಕೇಂದ್ರ ಸಾರ್ವಜನಿಕ ಆರೋಗ್ಯ ಇಲಾಖೆಯ ಕೇಂದ್ರ ಔಷಧಿ ನಿಯಂತ್ರಣ ಸಂಸ್ಥೆಯು ಈ ಕುರಿತು ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಮುಖ್ಯಸ್ಥರಾದ ಡಾ.ವಿಶಾಲ್ ರಾವ್ ಅವರಿಗೆ ಪತ್ರ ಮುಖೇಣ ಅನುಮತಿ ನೀಡಿದೆ. ನ್ಯೂ ಡ್ರಗ್ಸ್ ಅಂಡ್ ಕ್ಲಿನಿಕಲ್ ಟ್ರಯಲ್ ರೂಲ್ಸ್ 2019 ಅನ್ವಯ ಈ ಅನುಮತಿ ನೀಡಲಾಗಿದೆ.