Sunday, 15th December 2024

ರಾಜ್ಯವೆಂದರೇ ಕೇವಲ ರಾಮನಗರ ಜಿಲ್ಲೆ ಮಾತ್ರವೇ?

ಬೆಂಗಳೂರು:
ಪಾದರಾಯನಪುರ ಗಲಾಟೆಯ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್‌ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ರಾಜ್ಯವೆಂದರೇ ಕೇವಲ ರಾಮನಗರ ಜಿಲ್ಲೆ ಮಾತ್ರವೇ ಎಂದು ವಿಪಕ್ಷ ನಾಯಕರಿಗೆ ಪ್ರಶ್ನೆ ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್‌ ಮಾಡಿರುವ ಡಾ.ಕೆ.ಸುಧಾಕರ್‌, ಕೇರಳದ ಕಾಸರಗೋಡಿನಿಂದ ಮಂಗಳೂರಿಗೆ ಜನ ಬರೋದಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ವಿರೋಧವಿಲ್ಲ. ಇದಕ್ಕಾಗಿ ಪ್ರಧಾನಿಗೆ ಪತ್ರವನ್ನು ಅವರು ಬರೆದಿದ್ದರು ಎಂದು ದೇವೇಗೌಡರು ಈ ಹಿಂದೆ ಮಾಡಿದ್ದ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಹಾಗೂ ಪ್ರಧಾನಿಗೆ ಬರೆದ ಪತ್ರಗಳನ್ನು ಹಾಕಿದ್ದಾರೆ.
ಇದರೊಂದಿಗೆ ತಮ್ಮ ಟ್ವೀಟ್‌ನಲ್ಲಿ ಸುಧಾಕರ್‌, ಆಗ ಕಾಸರಗೋಡಿನಿಂದ ಮಂಗಳೂರಿಗೆ ಜನ ಬರಬಹುದು ಎಂದಿದ್ದಾರೆ. ಆದರೆ, ಇಂದು ಪಾದರಾಯನಪುರ ಬಾಂಧವರು ರಾಮನಗರಕ್ಕೆ ಬರಬೇಡಿ ಎಂದು ಹೇಳುತ್ತಿರುವುದು ಎಷ್ಟು ಸರಿ? ರಾಜ್ಯ ಅಂದರೆ ಕೇವಲ ರಾಮನಗರ ಜಿಲ್ಲೆ ಮಾತ್ರವಾ..? ಎಂದು ಪ್ರಶ್ನೆ ಕೇಳಿದ್ದಾರೆ.ಆದರೆ, ಇದುವರೆಗೂ ಮಾಜಿ ಪ್ರಧಾನಿ ದೇವೇಗೌಡರು ರಾಮನಗರ ವಿವಾದದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
 ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ರಾಮನಗರಕ್ಕೆ ಪಾದರಾಯನಪುರ ಆರೋಪಿಗಳನ್ನು ಶಿಫ್ಟ್‌ ಮಾಡಿದ್ದರ ಬಗ್ಗೆ ಸರಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಅವರು ಮಾಡಿ ಸರಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಶಾಸಕಿ ಅನಿತಾ ಕುಮಾರಸ್ವಾಮಿ ಕೂಡ ಸರಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ