Sunday, 15th December 2024

ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ಭದ್ರಾ ಮೇಲ್ದಂಡೆ

ಚಿತ್ರದುರ್ಗ:

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ತರಲು ಅಗತ್ಯ ಕ್ರಮಕೈಗೊಂಡಿದ್ದು, ಈಗ ಅಂತಿಮ ಹಂತದಲ್ಲಿದ್ದು, ಇನ್ನೂ ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಯೋಜನೆಯಾಗಲಿದೆ ಎಂದು ಜಲಸಂಪನ್ಮೂಲ ಸಚಿವರಾದ ರಮೇಶ್ ಲ ಜಾರಕಿಹೊಳಿ ತಿಳಿಸಿದರು.

ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿ ಟನಲ್ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಗೂಳಿಹೊಸಹಳ್ಳಿಯಲ್ಲಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಶಾಖಾ ಕಾಲುವೆ ವಿಭಾಗ ನಂ 7ರ ಪ್ಯಾಕೇಜ್-8 ಮತ್ತು ಪ್ಯಾಕೇಜ್-9ರ ಕಾಮಗಾರಿ ಪ್ರಗತಿಯ ಸ್ಥಳ ಪರಿವೀಕ್ಷಣೆ ಮಾಡಿ ನಂತರ ಅವರು ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಾದರೆ ಕೇಂದ್ರದಿಂದ ಅನುದಾನ ಬರಲಿದ್ದು ಕಾಮಗಾರಿಯ ವೆಗ ಇನ್ನಷ್ಟು ಹೆಚ್ಚಲಿದೆ. ತ್ವರಿತಗತಿಯಲ್ಲಿ ಯೋಜನೆ ಪೂರ್ಣಗೊಳ್ಳಲು ಸಹಕಾರಿಯಾಗಲಿದ್ದು, ಜೊತೆಗೆ ಅಗತ್ಯ ಹಣಕಾಸಿನ ವ್ಯವಸ್ಥೆಯು ಆಗಲಿದೆ ಎಂದು ಹೇಳಿದರು.

2008 ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿದ್ದರು. ಮೊದಲು ಇದು 06 ಸಾವಿರ ಕೋಟಿ ಯೋಜನೆ ಇದಾಗಿತ್ತು. ಭೂಸ್ವಾಧೀನ ಪ್ರಕ್ರಿಯೆ ಹಾಗೂ ಅರಣ್ಯ ಪ್ರದೇಶದ ಅಡೆಚಣೆಯಿಂದಾಗಿ ಕಾಮಗಾರಿ ವೇಗಕ್ಕೆ ತೊಂದರೆಯಾಗಿದೆ. ಇದು 2016 ರಲ್ಲಿ ಈ ಯೋಜನೆಯು ಮುಕ್ತಾಯವಾಗಬೇಕಿತ್ತು. ಕೆಲವೊಂದು ತಾಂತ್ರಿಕ ತೊಂದರೆಯಿಂದಾಗಿ ವಿಳಂಬವಾಗಿದೆ. ಇರುವ ಎಲ್ಲಾ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿ ವೇಗ ಹೆಚ್ಚಿಸಲಾಗಿದೆ.

ಪ್ಯಾಕೇಜ್ 8, 9 ರಲ್ಲಿ 7.5 ಕಿ.ಮೀ ಟನಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದು ಮೂರು ಕಡೆಇದ್ದ್ದು, ಮುಕ್ತಾಯದ ಹಂತದಲ್ಲಿದೆ. ಇನ್ನೂ 300 ಮೀಟರ್ ಮಾತ್ರ ಬಾಕಿ ಉಳಿದಿದೆ. ಅದನ್ನೂ ಜುಲೈ 15ರೊಳಗೆ ಮುಗಿಸುವಂತೆ ಗುತ್ತಿಗೆದಾರರಿಗೆ ಗಡವು ನೀಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಮುಂದಿನ ಜೂನ್ ಒಳಗೆ 48 ಕೆರೆಗಳಿಗೆ ನೀರು ಭರ್ತಿ ಮಾಡಲು ಉದ್ದೇಶಿಸಲಾಗಿದ್ದು ಎಲ್ಲಾ ರೈತರಿಗೂ ನೀರಾವರಿ ಸಿಗಬೇಕೆನ್ನುವುದು ನಮ್ಮ ಗುರಿಯಾಗಿದೆ ಎಂದರು.

ಎತ್ತಿನಹೊಳೆ ಯೋಜನೆಯಿಂದ ವಿವಿ ಸಾಗರಕ್ಕೆ ನೀರು:

ಬರದ ನಾಡು ಚಿತ್ರದುರ್ಗ ಜಿಲ್ಲೆಯ ಜಲದಾಹ ತೀರಿಸುವ ಉದ್ದೇಶದಿಂದಾಗಿ ಎತ್ತಿನಹೊಳೆ ಯೋಜನೆಯಿಂದ ನೀರು ಒದಗಿಸುವ ಸಂಕಲ್ಪ ಹೊಂದಲಾಗಿದೆ. ಈ ಕುರಿತು ಈಗಾಗಲೇ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಎತ್ತಿನಹೊಳೆ ಯೋಜನೆಯಿಂದಲೂ ಜಿಲ್ಲೆಯ ವಾಣಿವಿಲಾಸ ಜಲಾಯಶಕ್ಕೆ ನೀರು ಸಿಗಲಿದೆ ಎಂದು ಹೇಳಿದರು.

ಚಿತ್ರದುರ್ಗ ಶಾಖಾ ಕಾಲುವೆ:

ಚಿತ್ರದುರ್ಗ ಶಾಖಾ ಕಾಲುವೆಯು ಭದ್ರಾ ಮೇಲ್ದಂಡೆ ಯೋಜನೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದ್ದು, ಈ ಕಾಲುವೆಯು ಅಜ್ಜಂಪುರದ ಬಳಿಯ ಉದ್ದೇಶಿತ ಸುರಂಗ ಮಾರ್ಗದ ನಂತರ ಪ್ರಾರಂಭವಾಗಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ತರೀಕೆರೆ ತಾಲ್ಲೂಕುಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಹಿರಿಯೂರು, ಚಿತ್ರದುರ್ಗ ಮತ್ತು ಚಳ್ಳಕೆರೆ ತಾಲ್ಲೂಕುಗಳಲ್ಲಿ ಮತ್ತು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಮುಖಾಂತರ ಅಂದಾಜು 135.00 ಕಿ.ಮೀ ದೂರ ಹಾದು ಹೋಗಿದ್ದು, ಸುಮಾರು 1,25,465 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದ್ದು, ಚಿತ್ರದುರ್ಗ ಜಿಲ್ಲೆಯ ಈಗಾಗಲೇ ಅಸ್ಥಿತ್ವದಲ್ಲಿರುವ ಅಚ್ಚುಕಟ್ಟು ಪ್ರದೇಶದ 37 ಕೆರೆಗಳನ್ನು ತುಂಬಿಸಲು ಯೋಜಿಸಲಾಗಿದೆ.

ಚಿತ್ರದುರ್ಗ ಶಾಖಾ ಕಾಲುವೆಯ ಕಿ.ಮೀ 61.230 ರಿಂದ 90.000 ವರೆಗೆ ಪಂಕ್ತಿಕರಣಕ್ಕೆ ಅನುಮೋದನೆ ನೀಡಲಾಗಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ವಿಭಾಗದ ವ್ಯಾಪ್ತಿಯಲ್ಲಿ ಬರುವ ಚಿತ್ರದುರ್ಗ ಶಾಖಾ ಕಾಲುವೆಯ ಕಿ.ಮೀ 61.230 ರಿಂದ 67.230 ರಿಂದ 67.416 ಕಿ.ಮೀ ವರೆಗೆ ದೊಡ್ಡಕಿಟ್ಟದಹಳ್ಳಿ, ಕೆಂಚೇನಹಳ್ಳಿ, ನಾಕೀಕೆರೆ ಗ್ರಾಮಗಳ ಮೂಲಕ ಕಿ.ಮೀ 67.419 ರಿಂದ 73.3ದ75 ವರೆಗೆ ಬೂದಿಪುರ, ಮಾಳಗೇರನಹಳ್ಳಿ, ಗೂಳಿಹೊಸಹಳ್ಳಿ, ಶಂಕರನಹಳ್ಳಿ, ಕಿ.ಮೀ 73.375 ರಿಂದ 81.ದದ820 ಕಿ.ಮೀ ವರೆಗೆ ಲಕ್ಕಿಹಳ್ಳಿ ಕಾಯ್ದಿರಿಸಿದ ಅರಣ್ಯ ಪ್ರದೇಶ ಹಾಗೂ ಹಿರಿಯೂರು ತಾಲ್ಲೂಕಿನ ಕಿ.ಮೀ 81.920 ರಿಂದ 90.00 ಕಿ.ಮೀ ವರೆಗೆ ಗೋಗುದ್ದು, ಕೊಳಾಳು ಮತ್ತು ಭರಂಪುರ ಗ್ರಾಮಗಳ ಜಮೀನುಗಳಲ್ಲಿ ಕಾಲುವೆಯು ಹಾದು ಹೋಗುತ್ತದೆ.

ಪ್ಯಾಕೇಜ್ 9;
ಪ್ಯಾಕೇಜ್-9 ರಡಿ ಚಿತ್ರದುರ್ಗ ಶಾಖಾ ಕಾಲುವೆ ಕಿ.ಮೀ 73 ರಿಂದ 90 ರವರೆಗೆ ಇದ್ದು ಇದರ ಟೆಂಡರ್ ಮೊತ್ತ 368.81 ಕೋಟಿಗಳಾಗಿದ್ದು ಈಗಾಗಲೇ 279.60 ಕೋಟಿ ವೆಚ್ಚ ಮಾಡಿದ್ದು 146.01 ಕೋಟಿಯಷ್ಟು ಬಾಕಿ ಇದೆ. ಇದರಡಿ ಮೂರು ಟನಲ್‍ಗಳು ಹಾಗೂ ತೆರೆದ ಕಾಲುವೆ ಬರಲಿದ್ದು ಟನಲ್ ಕಾಮಗಾರಿ ವೇಗವಾಗಿ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಹಾಗೂ ವಿಶ್ವೇಶ್ವರಯ್ಯ ಜಲ ನಿಮಗದ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ರಾವ್ ಪೇಶ್ವೆ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ರಾಘವನ್, ಅಧೀಕ್ಷಕ ಇಂಜಿನಿಯರ್ ವೇಣುಗೋಪಾಲ್, ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಹಾಸ್, ಶ್ರೀಧರ್, ಟಾಟಾ ಶಿವನ್ ಇದ್ದರು.