Sunday, 27th October 2024

ರೈತರಿಗೆ ಸರಕಾರ ವಿಶೇಷ  ಪ್ಯಾಕೇಜ್ ಘೋಷಿಸಲ್ಲಿ: ಎಚ್. ಡಿ. ದೇವೇಗೌಡ

ಬೆಂಗಳೂರು:
ಲಾಕ್ ಡೌನ್‌ನಿಂದಾಗಿ‌ ಹಣ್ಣು ತರಕಾರಿ ಹೂವು ಬೆಳೆದು ನಷ್ಟಗೊಂಡಿರುವ ರೈತರಿಗೆ ಸರಕಾರ ವಿಶೇಷ
ಪ್ಯಾಕೇಜ್ ಘೋಷಿಸಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಜೆಡಿಎಸ್  ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ  ಎಚ್. ಡಿ. ದೇವೇಗೌಡ ಅವರು ಸೋಮವಾರ ಪತ್ರ ಬರೆದಿದ್ದು, ಪತ್ರದಲ್ಲಿ
ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಾಗಿ ಒಂದು ತಿಂಗಳು ಮುಟ್ಟಿದೆ. ಈ ಸಂದರ್ಭದಲ್ಲಿ ಸಂಘಟಿತ ಹಾಗೂ ಅಸಂಘಟಿತ ವಲಯದ
ಕೂಲಿ ಕಾರ್ಮಿಕರು ಸಾಕಷ್ಟು ತೊಂದರೆಗೊಳಗಾಗಿದ್ದಾರೆ. ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು ರೈತಾಪಿ ಸಮುದಾಯ.
ಅದರಲ್ಲೂ ಹಣ್ಣು ತರಕಾರಿ ಹೂವು ಬೆಳೆದವರು ಕಣ್ಣೀರಿಡುವಂತಾಗಿದೆ. ಇತ್ತ ಸ್ಥಳೀಯ ಮಾರುಕಟ್ಟೆಯೂ ಇಲ್ಲ, ಅತ್ತ ಬೇರೆ ರಾಜ್ಯ ಹಾಗೂ ದೇಶಗಳಿಗೆ ರಫ್ತು ಸಾಧ್ಯವಾಗಿಲ್ಲ.
ಹಳೆ ಮೈಸೂರು, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿಯೂ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹಣ್ಣು ತರಕಾರಿ ಹೂವು ಬೇಡಿಕೆ ಇಲ್ಲದೆ, ಲಕ್ಷಾಂತರ ಟನ್ ಹೊಲ ತೋಟಗಳಲ್ಲೇ ಬಿಟ್ಟು ಕೊಳೆಯುವಂತಾಗಿದೆ.
ಕೆಲವೆಡೆ ಅಲ್ಪ ಸ್ವಲ್ಪ ಅನಿವಾರ್ಯವಾಗಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ಬೆಳೆಗೆ ಮಾಡಿದ ವೆಚ್ಚವೂ ಗಿಟ್ಟಿಲ್ಲ.
ಅದೇ ರೀತಿಯಾಗಿ ಲಕ್ಷಾಂತರ ಎಕರೆಯಲ್ಲಿ ಬೆಳೆದ ಟೊಮ್ಯಾಟೋ. ಆಲೂಗೆಡ್ಡೆ, ಬೀಟ್ ರೋಟ್ ಹೂ ಕೋಸು, ಎಲೆ ಕೋಸು, ದಪ್ಪಮೆಣಸಿನ ಕಾಯಿ, ನವಿಲು ಕೋಸು, ಗೆಣಸು ಬೆಳೆದ ರೈತರು ಕಂಗಾಲಾಗಿದ್ದಾರೆ.
 ಆದ್ದರಿಂದ ಸಮೀಕ್ಷೆ ನಡೆಸಿ ಲಾಕ್ ಡೌನ್ ನಿಂದಾಗಿ ನಷ್ಟಹೊಂದಿರುವ ರೈತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಬಜೆಟ್‌‌ನಲ್ಲಿ ಘೋಷಿಸಿರುವ ಹಲವು ಯೋಜನೆ ಕೈ ಬಿಟ್ಟರೂ ಸರಿಯೇ ಅನ್ನದಾತನ ಕೈ ಬಿಡಬೇಡಿ. ಹಾಲು ಖರೀದಿಸಿ ಬಡವರಿಗೆ ಉಚಿತವಾಗಿ ಹಂಚುವ ಮೂಲಕ ಹಾಲು ಉತ್ಪಾದಕರ ನೆರವಿಗೆ ಬಂದಿರಿ. ಇದಕ್ಕಾಗಿ ತಮಗೆ ಧನ್ಯವಾದ ಅರ್ಪಿಸುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಸರಕಾರ ರೈತರ ನೆರವಿಗೆ ಬರದಿದ್ದರೆ, ಜಮೀನು ಮಾರಿ ಕೃಷಿ ಬಿಡುವ ಸ್ಥಿತಿಗೆ ರೈತರು ಬರಬೇಕಾಗುತ್ತದೆ. ಮಾವು ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಟ್ಟು, ರಫ್ತಿಗೆ ಕ್ರಮ ಕೈಗೊಳ್ಳುವ ಮೂಲಕ ರಾಜ್ಯಸರ್ಕಾರ ಮಾವು ಬೆಳೆಗಾರರು ಸಂಕಷ್ಟಕ್ಕೆ ಈಡಾಗುವುದನ್ನು ತಪ್ಪಿಸಲು ಮುಂದಾಗಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.