Saturday, 26th October 2024

ಲಾಕ್‌ಡೌನ್ ಮತ್ತಷ್ಟು ಬಿಗಿಯಾಗಿರಲಿ: ಪೊಲೀಸ್ ಆಯುಕ್ತ

ವಿಶ್ವವಾಣಿ ಸುದ್ದಿಮನೆ  ಬೆಂಗಳೂರು:
ಲಾಕ್ ಡೌನ್ ಆದೇಶ ಉಲ್ಲಂಘಿಸಿದವರ ವಾಹನಗಳನ್ನು ಜಪ್ತಿ ಮಾಡುತ್ತಿದ್ದ ಸ್ಥಳಕ್ಕೆ ನಗರ ಪೋಲಿಸ್ ಆಯುಕ್ತ ಭಾಸ್ಕರ್ ಖುದ್ದು ಭೇಟಿ ನೀಡಿ ತಪಾಸಣೆ ನಡೆಸಿದರು.
ನಗರದ ಪುರಭವನದ ಬಳಿ ಬುಧವಾರ ಬೆಳಿಗ್ಗೆ  ವಾಯವಿಹಾರದ ಉಡುಪಿನಲ್ಲಿ ಭಾಸ್ಕರ್ ರಾವ್ ಸಿಬ್ಬಂದಿಯೊಂದಿಗೆ ವಾಹನ ತಪಾಸಣೆ ನಡೆಸಿದ್ದು, ವಾಹನ ಚಾಲಕರು ದ್ವಿಚಕ್ರ ವಾಹನ ಸವಾರರನ್ನು ತಡೆದು ಎಲ್ಲಿಂದ ಬರ್ತಾ ಇರೋದು,ಗಾಡಿ ಪಕ್ಕಕ್ಕೆ ಹಾಕು ,ಪಾಸ್ ಇದೆಯಾ,ಗಾಡಿನಿಲ್ಲಿಸು, ದೂರ ನಿಲ್ಲಪ್ಪ ನೀನು ಎಂದು ಹೇಳುತ್ತಲೇ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ವೇಳೆ ಅನಗತ್ಯವಾಗಿ ಸಂಚರಿಸುತ್ತಿದ್ದ ಇನ್ನೋವ ಕಾರನ್ನು ಮುಲಾಜಿಲ್ಲದೆ ವಶಪಡಿಸಿಕೊಂಡು ಚಾಲಕನಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಆಯುಕ್ತರ ಎದುರೇ ಪಾಸ್ ಇಲ್ಲದೆ ವಾಹನಗಳ ಓಡಾಟ ಹೆಚ್ಚಾಗಿದ್ದು , ಹಲವು ಬೈಕ್,ಕಾರುಗಳನ್ನು ಜಪ್ತಿ ಮಾಡಿಸಿದ್ದಾರೆ. ಕೆಎಸ್ಆರ್ ಟಿಸಿ ಸಿಬ್ಬಂದಿ , ಸೇನಾ ಪ್ಲೇಟ್ ಹಾಕಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಬೈಕ್ ನಲ್ಲಿ ದೇವಸ್ಥಾನಕ್ಕೆ ಹೊರಟವರು, ಅಂತ್ಯಕ್ರಿಯೆಗೆ ಹೊರಟವರು, ತರಕಾರಿಗೆ ಹೊರಟವರು, ನೆಂಟರ ಮನೆಗೆ ಹೊರಟವರು ಕಮೀಷನರ್ ಅವರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಕಮಿಷನರ್ ಸಾರ್ವಜನಿಕರ ಓಡಾಟ ಹೆಚ್ಚಾಗಿದೆ. ವಾಹನ ತಪಾಸಣೆ ಸರಿಯಾಗಿ ಆಗುತ್ತಿಲ್ಲ. ಮತ್ತಷ್ಟು ಬಿಗಿಗೊಳಿಸಿ ತಪಾಸಣೆ ಮಾಡಬೇಕು ಎಂದು ಕಂಟ್ರೋಲ್‌ ರೂಂ ಮೂಲಕ ವಾಹನಗಳನ್ನು ಸರಿಯಾಗಿ ತಪಾಸಣೆ ಮಾಡಿ ಬಹುತೇಕ ಮಂದಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದಾರೆ. ಆದರೂ ತಪಾಸಣೆ ಸರಿಯಾಗಿ ಆಗುತ್ತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.