Friday, 13th December 2024

ಲಾಕ್‌ಡೌನ್ ಮೇ.3ರವರೆಗೆ ಯತಾಸ್ಥಿತಿ ಮುಂದುವರಿಕೆ

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು:

ಲಾಕ್‌ಡೌನ್ ಮೇ.3ರವರೆಗೆ ಯತಾಸ್ಥಿತಿ ಮುಂದುವರಿಯಲಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಸುಖಾಸುಮ್ಮನೆ ಹೊರಗಡೆ ಸುತ್ತುವಂತಿಲ್ಲ. ಪಾಸುಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ಕಂಡುಬಂದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಸಿದ್ದಾರೆ.

ಕರೋನಾ ಸೊಂಕು ಹಬ್ಬುತ್ತಿರುವ ಹಿನ್ನೆೆಲೆಯಲ್ಲಿ ಕೇಂದ್ರ ಸರಕಾರ ಮೇ.3ರವರೆಗೆ ಲಾಕ್ಡೌನ್ ಮುಂದುವರಿಸಿದ್ದು, ರಾಜ್ಯ ಸರಕಾರ ಏ.20ರ ನಂತರ ಪರಿಸ್ಥಿತಿ ಗಮನಿಸಿ ಕೆಲವೊಂದು ಪ್ರದೇಶಗಳಿಗೆ ಲಾಕ್‌ಡೌನ್ ಸಡಿಲಿಕೆ ನೀಡಬಹುದು ಎಂದು ಹೇಳಿತ್ತು.
ಆದರೆ, ಸೊಂಕು ಹತೋಟಿಗೆ ಬರದೆ ಸೋಂಕಿತರ ಸಂಖ್ಯೆೆ ಹೆಚ್ಚಾಗುತ್ತಿದ್ದು, ರಾಜ್ಯಸರಕಾರ ಲಾಕ್‌ಡೌನ್ ಅನ್ನು ಮೇ.3ರವರೆಗೆ ಯತಾಸ್ಥಿತಿ ಮುಂದುವರಿಸುವಂತೆ ಸೂಚಿಸಿದೆ. ಮಾತ್ರವಲ್ಲದೆ ಲಾಕ್ಡೌನ್ ನಿಯಾಮಾವಳಿಗಳನ್ನು ಇನ್ನಷ್ಟು ಕಠಿಣಗೊಳಿಸಿದೆ.
ಪೊಲೀಸರು ಅಗತ್ಯ ಬಿದ್ದಲ್ಲಿ ಲಾಠಿ ಹಿಡಿಯುತ್ತೇವೆ. ಅದಕ್ಕೆೆ ಮಾಧ್ಯಮದವರು ಪದೇಪದೆ ಲಾಠಿ ವಿಷಯದ ಬಗ್ಗೆ ಮಾತನಾಡುವುದು ಬೇಡ. ನಮ್ಮ ಕರ್ತವ್ಯ ಹೇಗೆ ಮಾಡಬೇಕೆಂಬುದು ಗೊತ್ತಿದೆ. ಈ ರೀತಿಯ ಕಠಿಣ ಸಂದರ್ಭಗಳು ಬಂದರೆ ಲಾಠಿನೂ ಹಿಡಿಯುತ್ತೇವೆ. ಅಗತ್ಯವಿದ್ದರೆ ಆಯುಧಗಳನ್ನು ಬಳಸುತ್ತೇವೆ ಎಂದರು.

ಆದ್ದರಿಂದ ಸಾರ್ವಜನಿಕರು ಮನೆಯಲ್ಲಿಯೇ ಇರಬೇಕು. ಯಾರು ಕೂಡ ಅನಗತ್ಯವಾಗಿ ಮನೆಯಿಂದ ಹೊರಬಂದು ಸುತ್ತಾಡುವುದು ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಮಾತ್ರವಲ್ಲದೆ ವಾಹನ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗುತ್ತದೆ ಎಂದರು. ಈ ಹಿಂದೆ ಸರಕಾರ ಪೊಲೀಸರು ಲಾಠಿ ಬಿಟ್ಟು ಜನರ ಮನವೋಲಿಸಿ ಮನೆಯಿಂದ ಹೊರಬರದಂತೆ ನೋಡಿಕೊಳ್ಳಿ ಎಂದು ಹೇಳಿತ್ತು. ಆದರೆ, ಯಾವುದೇ ಕಾರಣಕ್ಕೂ ಪೊಲೀಸರು ಲಾಠಿ ಬಿಟ್ಟಿಲ್ಲ. ಅನಗತ್ಯವಾಗಿ ಜನರು ಮನೆಯಿಂದ ಹೊರಬಂದರೆ ಲಾಠಿ ಎತ್ತುತ್ತೇವೆ. ಇದರೊಂದಿಗೆ ಸರಕಾರ ನೀಡಿದ ಎಲ್ಲಾ ಅಸ್ತ್ರಗಳನ್ನು ಬಳಸುತ್ತೇವೆ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು.