ವಿಶ್ವವಾಣೆ ಸುದ್ದಿಮನೆ ಬೆಂಗಳೂರು :
ಕೇಂದ್ರ ಸರಕಾರ ಮೇ 3 ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿದ ಬೆನ್ನಲ್ಲೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಲಾಕೌಡೌನ್ ವೇಳೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಹೀಗಾಗಿ ನಗರದಲ್ಲಿ ಜನರ ಓಡಾಟಕ್ಕೆ ಕಡಿವಾಣ ಯಾವ ರೀತಿ ಹಾಕಬಹುದು ಎಂಬುದರ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಡಿಜಿ, ಐಜಿಪಿ ಪ್ರವೀಣ್ ಸೂದ್ ಜತೆ ಚರ್ಚೆ ನಡೆಸಿದ್ದಾರೆ.
ನಗರದಲ್ಲಿ ಹೆಚ್ಚು ಕರೋನಾ ಸೋಂಕು ಪತ್ತೆಯಾದ ಪಾದರಾಯನಪುರ ಹಾಗೂ ಬಾಪುಜಿನಗರದ ಎರಡು ವಾರ್ಡ್ ಸೀಲ್ ಡೌನ್ ಮಾಡಲಾಗಿದೆ. ಅಲ್ಲದೆ, ಪ್ರಧಾನಿ ಮೋದಿ ಸಹ ಹಾಟ್ಸ್ಪಾಟ್ ಗಳಲ್ಲಿ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಈ ಹಿನ್ನೆಲೆ ನಗರದಲ್ಲಿ ಯಾವೆಲ್ಲಾ ಪ್ರದೇಶಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮಾತುಕತೆ ನಡೆಸಿದ್ದಾರೆ.
ಎಲ್ಲಾ ಹಿರಿಯ ಅಧಿಕಾರಿಗಳ ಜತೆ ಡಿಜಿ ಸಭೆ :
ಮತ್ತೊಂದೆಡೆ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರು, ಟ್ರಾಫಿಕ್ ಆಯುಕ್ತರು, ಐಜಿಪಿ ಎಸ್.ಪಿ ಗಳ ಜತೆ ವಿಡಿಯೊ ಕಾನ್ಫರೆನ್ಸ್ ಮುಖಾಂತರ ಸಭೆ ನಡೆಸಿದ್ದಾರೆ. ಕಲಬುರಗಿ, ಮೈಸೂರು, ಮಂಗಳೂರು ಕೆಲವೆಡೆ ಹೆಚ್ಚು ಕರೋನಾ ಸೋಂಕು ಪತ್ತೆಯಾದ ಕಾರಣ ಕೆಲ ಪ್ರದೆಶಗಳನ್ನ ಹಾಟ್ಸ್ಪಾಟ್ ಹಾಗೂ ಸೂಕ್ಷ್ಮ ಪ್ರದೇಶಗಳಾಗಿ ಗುರುತಿಸುವಂತೆ ತಿಳಿಸಿದ್ದಾರೆ. 19 ದಿನ ಬಹುತೇಕ ಕಡೆ ಖಾಕಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ನಿರ್ಧಾರ ಮಾಡಿದೆ.