ವಿಶ್ವವಾಣಿ ಸುದ್ದಿಮನೆ
ಬಳ್ಳಾರಿ
ಕರೊನಾ ಸೊಂಕಿತರ ಸಂಖ್ಯೆ ಈಗ 6 ಪಾಸಿಟಿವ್ ಆಗಿದೆ. ಇನ್ನೂ ಆ ಪ್ರಕರಣಗಳ ಸಂಖ್ಯೆ ಹೆಚ್ಚಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೋವಿಡ್-19 ಹಿನ್ನೆಲೆ ಬಳ್ಳಾರಿ ಜಿಲ್ಲೆಯ ಕಮಲಾಪುರ ಮಯೂರ್ ಭುವನೇಶ್ವರಿ ಹೋಟಲ್ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಜಿಲ್ಲಾಡಳಿತ ಒಳ್ಳೆಯ ರೀತಿಯ ಕೆಲಸ ಮಾಡುತ್ತಿದೆ; ಆದರೂ ಪ್ರಕರಣಗಳು ದೃಢಪಟ್ಟಿರುವುದು ತಮ್ಮೆಲ್ಲರಿಗೂ ಪರೀಕ್ಷೆಯ ಕಾಲವಿದ್ದಂತೆ. ಆದ ಕಾರಣ ತಾವು ಸಾಮಾಜಿಕ ಅಂತರ,ಜನರು ಶಾಂತರೀತಿಯಿಂದ ಇರುವ ನಿಟ್ಟಿನಲ್ಲಿ ಕ್ರಮವಹಿಸುವುದು,ಜನರು ಗುಂಪುಗೂಡದಂತೆ ಕ್ರಮ ಸೇರಿದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
ಲಾಕ್ ಡೌನ್ ಮುಂದುವರಿಸುವಿಕೆ ತೀರ್ಮಾನ ರಾಜ್ಯಮಟ್ಟದಲ್ಲಿ:
ರಾಜ್ಯದಲ್ಲಿ ಏ.14ರ ನಂತರವೂ ಲಾಕ್ ಡೌನ್ ಮುಂದುವರಿಸಬೇಕೇ ಅಥವಾ ಬೇಡವೇ ಅಥವಾ ಹಂತಹಂತವಾಗಿ ಲಾಕ್ ಡೌನ್ ಕೈಬಿಡಬೇಕೇ ಎಂಬುದಕ್ಕೆ ಸಂಬಂಧಿಸಿದಂತೆ ರಾಜ್ಯಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ತಾವು ಕೂಡ ತಮ್ಮ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದಕ್ಕೆ ಸಂಬಂಧಿಸಿದಂತೆ ಸಲಹೆ ನೀಡಿ ಎಂದು ಶಾಸಕರಲ್ಲಿ ಮನವಿ ಮಾಡಿದ ಅವರು ಬಳ್ಳಾರಿ, ಕೊಪ್ಪಳ, ಬೆಳಗಾವಿಯಲ್ಲಿ ಪ್ರಕರಣಗಳ ಕುರಿತ ವರದಿ ಹಾಗೂ ಲಾಕ್ ಡೌನ್ ಮುಂದುವರಿಸುವುದೇ ಅಥವಾ ಬೇಡ್ವೇ ಎಂಬುದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ತನಗೆ ಅಭಿಪ್ರಾಯ ಕೇಳಿರುವುದನ್ನು ಸಭೆಯಲ್ಲಿ ಡಿಸಿಎಂ ಸವದಿ ಬಿಚ್ಚಿಟ್ಟರು.
ಡಿಎಂಎಫ್ ಅನುದಾನ ಬಳಕೆ ಚರ್ಚೆ:
ಜಿಲ್ಲಾ ಖನಿಜ ನಿ್ಧಿಧಿಯನ್ನು ಈ ಕೋವಿಡ್-19 ಸಂದರ್ಭದಲ್ಲಿ ಯಾವ ರೀತಿ ಬಳಸಿಕೊಳ್ಳಬೇಕು ಮತ್ತು ಈಗ ಖರ್ಚು ಮಾಡಲಾಗಿರುವುದನ್ನು ಯಾವ ರೀತಿ ಪರಿವರ್ತಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಹಾಗೂ ಇದಕ್ಕಿರುವ ಕಾನೂನಿನ ತೊಡಕುಗಳು ಮತ್ತು ಪರಿಹಾರ ಕುರಿತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಡಿಸಿಎಂ ಸವದಿ ತಿಳಿಸಿದರು.
ಡಿಎಂಎಫ್ ನಿಧಿ ಅಡಿ ಶೇ.10ರಷ್ಟು ಅನುದಾನವನ್ನು ಕೋವಿಡ್-19 ಗಾಗಿ ಖರ್ಚು ಮಾಡಲು ಮಾ.28ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ತಿಳಿಸಲಾಗಿದ್ದು, ಅದರಂತೆ ಅತ್ಯವಶ್ಯಕ ವೈದ್ಯಕೀಯ ಪರಿಕರಗಳು ಹಾಗೂ ಮಾಸ್ಕ್ ಖರೀದಿ ಮಾಡಲು ತೀರ್ಮಾನಿಸಲಾಗಿರುವುದನ್ನು ಡಿಸಿ ನಕುಲ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಆನಂದಸಿಂಗ್, ಡಿಎಂಎಫ್ ಅಡಿ 62 ಕೋಟಿ ಉಳಿದಿದ್ದು, ಅದನ್ನು ಈ ಕೋವಿಡ್-19 ಸಂದರ್ಭದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿರುವ ನಿರಾಶ್ರಿತರು, ನಿರ್ಗತಿಕರು ಮತ್ತು ಬಡವರಿಗೆ ರೇಷನ್ ಒದಗಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿಗೆ 5ಕೋಟಿ ರೂ. ಒದಗಿಸುವಂತೆ ಕೋರಿದರು. ನಿಯಮಾವಳಿಯಲ್ಲಿ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ನಕುಲ್ ತಿಳಿಸಿದಕ್ಕೆ, ಬಡವರು ತೀವ್ರ ತೊಂದರೆ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ನಾವು ಅವರಿಗೆ ನೆರವಾಗುವುದು ನಮ್ಮ ಕರ್ತವ್ಯ; ಅದಾಗದಿದ್ದರೇ ಇದ್ದರೇ ಅಷ್ಟೇ ಎಂಬ ಧಾಟಿಯಲ್ಲಿ ಮಾತನಾಡಿದರು.ಇದಕ್ಕೆ ಶಾಸಕ ಸೋಮಶೇಖರ್ ರೆಡ್ಡಿ, ನಾಗೇಂದ್ರ ಸೇರಿ ಕೆಲ ಶಾಸಕರು ದನಿಗೂಡಿಸಿದರು.
ಮಧ್ಯಪ್ರವೇಶಿಸಿದ ಡಿಸಿಎಂ ಲಕ್ಷ್ಮಣ ಸವದಿ ಅವರು ನಿಯಮಾವಳಿಗಳ ತಿದ್ದುಪಡಿ ಮತ್ತು ಕೋವಿಡ್-19 ಅಗತ್ಯ ಕಾಲದಲ್ಲಿ ರೇಶನ್ ಒದಗಿಸುವ ನಿಟ್ಟಿನಲ್ಲಿ ಈ ಡಿಎಂಎಫ್ ಹಣ ಬಳಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಹತ್ತಿರ ನಾನು ಮತ್ತು ಆನಂದಸಿಂಗ್ ಅವರು ಚರ್ಚಿಸಲಾಗುವುದು ಹಾಗೂ ಪ್ರಧಾನಮಂತ್ರಿ ಖನಿಜ ಕಲ್ಯಾಣ ನಿಧಿ ಅಡಿ ನಿಯಮಾವಳಿ ತಿದ್ದುಪಡಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಮನೆಮನೆಗೆ ಪಡಿತರಕ್ಕೆ ಸೂಚನೆ:
ಹೊಸಪೇಟೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ನಗರದಲ್ಲಿರುವ 29 ನ್ಯಾಯಬೆಲೆ ಅಂಗಡಿಗಳು ತಮ್ಮ ಉಪಕೇಂದ್ರಗಳು ಹೆಚ್ಚಿಸಬೇಕು ಮತ್ತು ಮನೆ-ಮನೆಗೆ ಪಡಿತರ ಒದಗಿಸುವ ನಿಟ್ಟಿನಲ್ಲಿ ವಾಹನಗಳಲ್ಲಿ ಎಲ್ಲ ಪಡಿತರಗಳನ್ನು ಹಾಕಿಕೊಂಡು ಪಡಿತರದಾರರ ಪಟ್ಟಿ ಅನುಸಾರ ಅವರ ಮನೆ-ಮನೆಗೆ ತಲುಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಿ ಎಂದು ಡಿಸಿಎಂ ಸವದಿ ಜಿಲ್ಲಾಡಳಿತಕ್ಕೆ ಸೂಚಿಸಿದರು.
ಉಪಕೇಂದ್ರಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಜರುಗಿಸಿ ಎಂದು ಹೇಳಿದ ಅವರು ನಿರ್ವಹಣೆ ಮತ್ತು ಸಾರಿಗೆ ವೆಚ್ಚವನ್ನು ಜಿಲ್ಲಾಡಳಿತದ ವೆಚ್ಚದಡಿ ಭರಿಸಿ ಎಂದು ಡಿಸಿ ನಕುಲ್ ಅವರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಕೋವಿಡ್-19 ಹಿ್ಙೆನ್ನೆಲೆ ಇದುವರೆಗೆ ಜಿಲ್ಲಾಡಳಿತ ವತಿಯಿಂದ ಕೈಗೊಳ್ಳಲಾದ ಕ್ರಮಗಳನ್ನು ಸಭೆಗೆ ವಿವರಿಸಿದರು.
ಡಿಎಚ್ಒ ಡಾ.ಜನಾರ್ಧನ್ ಅವರು ಆರೋಗ್ಯ ಇಲಾಖೆ ಇದುವರೆಗೆ ನಡೆಸಲಾಗಿರುವ ತಪಾಸಣೆ, ನೀಡಲಾಗುತ್ತಿರುವ ಚಿಕಿತ್ಸೆ, ಅಗತ್ಯ ಸಿದ್ಧತೆ ಸೇರಿದಂತೆ ವಿವಿಧ ವಿಷಯಗಳನ್ನು ಸಭೆಗೆ ವಿವರಿಸಿದರು.
ಆಹಾರ ಇಲಾಖೆಯ ಜಂಟಿ ನಿರ್ದೇಶಕ ರಾಮೇಶ್ವರಪ್ಪ ಅವರು ಜಿಲ್ಲೆಯಲ್ಲಿ ಇದುವರೆಗೆ ವಿತರಿಸಲಾದ ಪಡಿತರ ಪ್ರಮಾಣ ಹಾಗೂ ಇನ್ನೂ ವಿತರಿಸಬೇಕಾದ ವಿಷಯಗಳನ್ನು ಡಿಸಿಎಂ ಗಮನಕ್ಕೆ ತಂದರು.
ಸಂಸದ ಸಂಗಣ್ಣ ಕರಡಿ, ವೈ. ದೇವೇಂದ್ರಪ್ಪ, ಶಾಸಕ ಸೋಮಶೇಖರ್ ರೆಡ್ಡಿ, ನಾಗೇಂದ್ರ, ಈ. ತುಕಾರಾಂ, ಸೋಮಲಿಂಗಪ್ಪ, ಎಸ್ಪಿ ಸಿ.ಕೆ. ಬಾಬಾ, ಜಿಪಂ ಸಿಇಒ ನಿತೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.