ಧಾರವಾಡ
ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆ ಘೋಷಿಸಲಾಗಿರುವ ಲಾಕ್‍ಡೌನ್ ವೇಳೆ ಜನತೆಗೆ ಅಗತ್ಯವಸ್ತುಗಳು, ಕೃಷಿ, ಮಾರುಕಟ್ಟೆ ಸೇರಿದಂತೆ ಎಲ್ಲ ವ್ಯವಸ್ಥೆಗಳ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಮತೋಲನ ಸಾಧಿಸಬೇಕು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ ರವರು ತಿಳಿಸಿದರು.
ಇಂದು ಎಲ್ಲಾ ಜಿಲ್ಲೆಗಳ ಡಿಸಿ, ಎಸ್‍ಪಿ ಮತ್ತು ಸಿಇಓ ಗಳೊಂದಿಗೆ ವಿಡಿಯೋ ಕಾನ್ಫರೆನ್ಸನಲ್ಲಿ ಅವರು ಮಾತನಾಡಿ, ಕೊರೊನಾ ಲಾಕ್‍ಡೌನ್ ಹಿನ್ನೆಲೆ ದೇಶಾದ್ಯಂತ ಬಡಜನತೆ, ರೈತರು ಸೇರಿದಂತೆ ಜನರಿಗೆ ಅನೇಕ ಅನಾನುಕೂಲತೆಗಳಾಗಿದ್ದು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ವಿವಿಧ ಸೌಲಭ್ಯಗಳನ್ನು ಏಪ್ರಿಲ್ 7 ಮತ್ತು 8 ರೊಳಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಿಳಿಸಿದ್ದು ಜೊತೆಗೆ ಅನೇಕ ಸೂಚನೆಗಳನ್ನು ನೀಡಿದ್ದಾರೆಂದರು.
ಲಾಕ್‍ಡೌನ್ ಹಿನ್ನೆಲೆ ರೈತರು ಮತ್ತು ಸಾಮಾನ್ಯ ಜನತೆಯ ಹಣದ ಕೊರತೆ ನೀಗಿಸಲು ಇದೇ ಏಪ್ರಿಲ್ 7 ಮತ್ತು 8 ರೊಳಗೆ ಜನ್‍ಧನ್ ಖಾತೆಗೆ ರೂ.500 ಮತ್ತು ಕಿಸಾನ್ ಸಮ್ಮಾನ್ ಯೋಜನೆಯಡಿ ನೋಂದಾಯಿತ ರೈತರಿಗೆ ರೂ.2000 ಗಳನ್ನು ಜಮೆ ಮಾಡಲಾರುವುದು. ಈ ನಿಟ್ಟಿನಲ್ಲಿ ಬ್ಯಾಂಕುಗಳಿಗೆ ಜನರು ಬಂದು ಸಂದಣಿಯಾಗದಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಜಿಲ್ಲಾ ಬ್ಯಾಂಕರ್ಸ್ ಅಸೋಸಿಯೇಷನ್ ಜೊತೆ ಸಭೆ ನಡೆಸಿ ಸಮರ್ಪಕ ನಿರ್ವಹಣೆ ಮಾಡಬೇಕೆಂದು ಸೂಚನೆ ನೀಡಿದರು.
ಕೋವಿಡ್ ಆಸ್ಪತ್ರೆಗಳಲ್ಲಿ ಅಗತ್ಯ ಆಕ್ಸಿಜನ್ ಸಿಲಿಂಡರ್‍ಗಳು ಇರುವಂತೆ ನೋಡಿಕೊಳ್ಳಬೇಕು. ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಸಾಕಷ್ಟು ಪಿಪಿಇ ಕಿಟ್‍ಗಳು ಶೀಘ್ರದಲ್ಲಿ ಲಭ್ಯವಾಗಲಿವೆ ಎಂದರು.
ವಲಸೆ ಶಿಬಿರಗಳಲ್ಲಿರುವ ವಲಸಿಗರಿಗೆ ಜಿಲ್ಲಾಡಳಿತದ ವತಿಯಿಂದ ಉತ್ತಮ ಆಹಾರ, ಔಷಧೋಪಚಾರದೊಂದಿಗೆ ಎಸ್‍ಡಿಆರ್‍ಎಫ್ ನಿಧಿಯಿಂದ ಬಟ್ಟೆ ವ್ಯವಸ್ಥೆಯನ್ನು ಸಹ ಮಾಡಬಹುದು. ಹಾಗೂ ಹಾಲು ಕೊಡುವ ವ್ಯವಸ್ಥೆಯನ್ನು ಸಹ ಮಾಡಲಾಗುವುದು. ಇವರಿಗೆ ನೈತಿಕ ಬೆಂಬಲವಾಗಿ ಜಿಲ್ಲೆಯ ಮಾನಸಿಕ ಆರೋಗ್ಯ ವಿಭಾಗದ ಆಪ್ತ ಸಮಾಲೋಚಕರಿಂದ ಆಪ್ತಸಮಾಲೋಚನೆ ಹಾಗೂ ವಿವಿಧ ಧಾರ್ಮಿಕ ಗುರುಗಳಿಂದ ಆಪ್ತಸಮಾಲೋಚನೆ ನಡೆಸಬೇಕು ಎಂದರು.
ಹೈವೇಗಳಲ್ಲಿ ಮತ್ತು ಚೆಕ್‍ಪೋಸ್ಟ್‍ಗಳಲ್ಲಿ ಯಾವುದೇ ಅಂತರ ರಾಜ್ಯ ಮತ್ತು ರಾಜ್ಯದೊಳಗಿನ ಸರಕು ವಾಹನಗಳು ಮತ್ತು ಸರಕು ಅನ್‍ಲೋಡ್ ಮಾಡಿಬಂದ ಖಾಲಿ ವಾಹನಗಳಿಗೆ ಅಡ್ಡಿಪಡಿಸಬಾರದು ಎಂದರು.
ರೈತರು ಮತ್ತು ಗ್ರಾಹಕರ ಹಿತದೃಷ್ಟಿಯಿಮದ ಕಿರಾಣಿ ಅಂಗಡಿಗಳು, ಹಾಪ್‍ಕಾಮ್‍ಗಳನ್ನು ಎಲ್ಲ ಅವಧಿಯಲ್ಲಿ ತೆರೆದಿರಬೇಕು. ಜಿಲ್ಲೆಗಳಲ್ಲಿ ಯಾವುದಾದರೂ ಹಣ್ಣುಗಳು, ತರಕಾರಿಗಳ ಅತ್ಯಧಿಕ ಉತ್ಪನ್ನವಾಗುತ್ತಿದ್ದರೆ ಅಕ್ಕಪಕ್ಕದ ಜಿಲ್ಲೆಗಳಿಗೆ ನೀಡುವ ವ್ಯವಸ್ಥೆ ಮಾಡಬಹುದು ಎಂದರು.
*********
ನಿರಾಶ್ರಿತರ ಪರಿಹಾರ ಕೇಂದ್ರದ ನಿವಾಸಿಗಳಿಗೆ ಸಿಹಿ ವಿತರಿಸಿ
ಸಮಾಧಾನ ಹೇಳಿದ ಪೊಲೀಸ್ ಅಧಿಕಾರಿ
ಧಾರವಾಡ (ಕರ್ನಾಟಕ ವಾರ್ತೆ) ಏ.01: ಗೌರಿಶಂಕರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾಡಳಿತ ಆರಂಭಿಸಿರುವ ನಿರಾಶ್ರಿತರ ಪರಿಹಾರ ಕೇಂದ್ರದ ನಿವಾಸಿಗಳು ಎಪ್ರೀಲ್ 14 ರ ನಂತರವೂ ಲಾಕ್‍ಡೌನ್ ಮುಂದುವರೆಯುತ್ತದೆ ಎಂದು ಭಾವಿಸಿ ಚಿಂತಿತರಾಗಿದ್ದರು.
ಇದನ್ನು ತಿಳಿದ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‍ಐ ಮಹೇಂದ್ರಕುಮಾರ್ ನಾಯಕ್ ಅವರು ಗೌರಿಶಂಕರ ವಿದ್ಯಾರ್ಥಿ ನಿಲಯಕ್ಕೆ ದೌಡಾಯಿಸಿ ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು 76 ಜನರಿಗೆ ಸಿಹಿ ಹಾಗೂ ಖಾರಾ ವಿತರಿಸಿ ಸಮಾಧಾನ ಪಡಿಸಿದರು.
ಪರಿಹಾರ ಕೇಂದ್ರದ ನಿವಾಸಿಗಳಿಗೆ ಯಾವುದೇ ಕೊರತೆಯಾಗದಂತೆ ಮತ್ತು ಆರೋಗ್ಯ ಸಮಸ್ಯೆಯಾಗದಂತೆ ದಿನನಿತ್ಯ ಚಿಕಿತ್ಸೆ ಮಾಡಲು ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದ್ದು, ಅದರಂತೆ ನಡೆಯುತ್ತಿದೆ. ಆದ್ದರಿಂದ ತಾವು ಯಾವುದೇ ವದಂತಿ ಗೊಂದಲಗಳಿಗೆ ಕಿವಿಗೊಡದೆ ಜಿಲ್ಲಾಡಳಿತದ ಸೂಚನೆಗಳನ್ನು ಮಾತ್ರ ಪಾಲಿಸಬೇಕೆಂದು ಅವರು ವಿನಂತಿಸಿದರು.
*****************