Thursday, 12th December 2024

ವಿದೇಶದಿಂದ ಬಂದವರ ಕ್ವಾರಂಟೈನ್‌ಗೆ ವಿರೋಧ

– ದೇವನಹಳ್ಳಿ ಬಳಿ ಕ್ವಾರಂಟೈನ್‌ಗೆ ಸ್ಥಳೀಯರ ವಿರೋಧ
– ಏ.7ರ ನಂತರ ಏರ್‌ಲಿಫ್‌ಟ್‌ ಆಗಲಿದ್ದಾರೆ 12 ಸಾವಿರ ಕನ್ನಡಿಗರು

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:

ಮೇ.7ರಿಂದ ವಿದೇಶದಲ್ಲಿರುವವರನ್ನು ವಾಪಸ್ ಕರೆತರಲು ತೀರ್ಮಾನಿಸಿರುವ ಸರಕಾರಕ್ಕೆ ಇದೀಗ ಕ್ವಾರಂಟೈನ್ ಮಾಡುವುದೆಲ್ಲಿ ಎಂಬ ಸಮಸ್ಯೆ ಎದುರಾಗಿದೆ.

ನಿಗದಿಯಂತೆ ವಿಮಾನ ನಿಲ್ದಾಣದಿಂದ ಬಂದವರನ್ನು ಪಕ್ಕದ ದೇವನಹಳ್ಳಿ, ದೊಡ್ಡಬಳ್ಳಾರ ಪ್ರದೇಶದ ರೆಸಾರ್ಟ್‌ಗಳಲ್ಲಿ, ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಬೇಕಾಗಿತ್ತು. ಇದಕ್ಕಾಗಿ ಸರಕಾರ ಈಗಾಗಲೇ ಸಿದ್ಧತೆಯನ್ನು ಮಾಡಿಕೊಂಡಿತ್ತು. ಆದರೆ, ಈ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ವಿರೋಧ ಶುರುವಾಗಿದ್ದು, ಸರಕಾಕ್ಕೆ ಇವರನ್ನು ಕ್ವಾರಂಟೈನ್ ಮಾಡುವುದು ಎಲ್ಲಿ ಎಂಬ ತಲೆನೋವು ಶುರುವಾಗಿದೆ.

ಕರೋನಾ ಮಹಾಮಾರಿ ವ್ಯಾಪಿಸುತ್ತಿರುವುದರಿಂದ ಜನ ಭಯಭೀತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ವಿದೇಶಿಗರನ್ನು ದೇವನಹಳ್ಳಿಯಲ್ಲಿ ಕ್ವಾರಂಟೈನ್ ಮಾಡುತ್ತಿರುವುದರಿಂದ ಈ ಭಾಗದಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಈ ಭಾಗದ ಜನಪ್ರತಿನಿಧಿಗಳು ತಗಾದೆ ತೆಗೆದಿದ್ದಾರೆ. ವಿದೇಶದಲ್ಲಿರುವವರನ್ನು ಕರೆತಂದ ಸರಕಾರ ಕರೋನಾ ಹರಡುವಿಕೆಯನ್ನು ಹೆಚ್ಚಿಸಿತ್ತು. ಆನಂತರ ಆದ ಲಾಕ್‌ಡೌನ್‌ನಿಂದಾಗಿ ಬಡವರ ಬದುಕು ಬೀದಿಗೆ ಬಂದಿದೆ. ಆದರೆ, ಮತ್ತೊಮ್ಮೆ ವಿದೇಶದಲ್ಲಿರುವವರನ್ನು ಕರೆತರಲು ಹೊರಟ ಸರಕಾರ ಈ ಭಾಗದ ಜನರ ಜೀವನದ ಜತೆ ಆಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ವಾರಂಟೈನ್‌ಗೆ ಸದಾ ಸಮಸ್ಯೆೆ:

ಕ್ವಾರಂಟೈನ್ ಮಾಡುವ ವಿಚಾರದಲ್ಲಿ ಆಯಾ ಜಿಲ್ಲೆಗಳಲ್ಲಿ ಸಮಸ್ಯೆಯಾಗುತ್ತಲೇ ಬಂದಿದೆ. ಪಾದರಾಯನಪುರದಲ್ಲಿ ಆರೋಗ್ಯ ಕಾರ್ಯಕರ್ತರ ಮೇಲೆ ಗಲಾಟೆ ಮಾಡಿದವರನ್ನು ರಾಮನಗರ ಜೈಲಿಗೆ ಸೇರಿಸುವ ವೇಳೆ ಅಲ್ಲಿನ ರಾಜಕಾರಣಿಗಳು ವಿರೋಧ ವ್ಯಕ್ತಪಡಿಸಿದ್ದರು. ಆರೋಪಿಗಳ ಪೈಕಿ ಮೂವರಿಗೆ ಕರೋನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಸ್ಥಳಾಂತರ ಮಾಡಲಾಯಿತು. ರಾಜಸ್ಥಾನದಿಂದ ಬಂದ ವಿದ್ಯಾರ್ಥಿಗಳನ್ನು ಸುಂಕದಕಟ್ಟೆ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡುವ ಸಂಬಂಧ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಯಲಹಂಕ ಬಳಿಯ ರೆಸಾರ್ಟ್‌ಗಳಲ್ಲಿ ಕ್ವಾರಂಟೈನ್‌ಗೂ ವಿರೋಧ ವ್ಯಕ್ತವಾಗಿತ್ತು. ಇದೀಗ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಕ್ವಾರಂಟೈನ್‌ಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರಕರಣವಿಲ್ಲದಿದ್ದರೂ ರೆಡ್ ಜೋನ್
ವಿದೇಶದಿಂದ ಕರೆತರುವ ಭಾರತೀಯರನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ, ದೊಡ್ಡಬಳ್ಳಾಪುರ ಗಳಲ್ಲಿ ಕ್ವಾರೆಂಟೈನ್ ಮಾಡಲು ತೆಗೆದುಕೊಂಡಿರುವ ನಿರ್ಧಾರಕ್ಕೆ ತೀವ್ರ ಅಸಮಧಾನ ವ್ಯಕ್ತವಾಗುವ ಜತೆಗೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ 22 ದಿನಗಳಲ್ಲಿ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ. ಇದ್ದ 5 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ಪ್ರಕರಣ ಇಲ್ಲವಾದರೂ ರೆಡ್ ಜೋನ್‌ಗೆ ಸೇರ್ಪಡೆ ಮಾಡಲಾಗಿದೆ. ಈ ಕುರಿತು ಕೂಡ ಬೆಂಗಳೂರು ಗ್ರಾಮಾಂತರ ಜಿಲ್ಲೆೆಯ ಶಾಸಕರು ಅತೃಪ್ತಿ ಹೊರಹಾಕಿದ್ದಾರೆ. ಕಟ್ಟುನಿಟ್ಟಿನ ನಿಯಮದ ಮೂಲಕ ಸೋಂಕು ಹರಡದ ಹಾಗೆ ಕ್ರಮ ಕೈಗೊಂಡಿರುವ ಹಾಗೂ ನಿಯಮ ಪಾಲಿಸಿರುವ ಜಿಲ್ಲೆಯ ಆರೋಗ್ಯ ಹಾಳು ಮಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಮುಂದಾಗಿದೆ ಎಂದು ಗಂಬೀರ ಆರೋಪ ಮಾಡಿದ್ದಾರೆ.

ನಾಡಿಗೆ ಬರಲಿದ್ದಾರೆ 12 ಸಾವಿರ ಪ್ರಯಾಣಿಕರು
ದುಬೈ ಸೇರಿದಂತೆ ವಿದೇಶಗಳಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಜನರು ಸಿಲುಕಿದ್ದು, ಇವರೆಲ್ಲರೂ ತಾಯ್ನಾಡಿಗೆ ವಾಪಸ್ ಬರುವ ಕುರಿತಂತೆ ಅರ್ಜಿ ಸಲ್ಲಿಸಿದ್ದಾರೆ. ದೇಶಕ್ಕೆ ವಾಪಸ್ ಬರುವ ಸಂಬಂಧ ಆನ್‌ಲೈನ್ ಮೂಲಕ ಮನವಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಹೀಗಾಗಿ, ವಿದೇಶದಲ್ಲಿರುವ ಸುಮಾರು 12 ಸಾವಿರಕ್ಕೂ ಹೆಚ್ಚು ಕರ್ನಾಟಕ ಮೂಲದವರು ಏ.7ರ ನಂತರ ರಾಜ್ಯಕ್ಕೆ ಬರಲಿದ್ದಾರೆ. ಇವರನ್ನೆಲ್ಲ ಒಂದೆಡೆ ಕ್ವಾರಂಟೈನ್ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿರುವ ರಾಜ್ಯ ವಿಮಾನ ನಿಲ್ದಾಣ ಸಮೀಪದ ಸ್ಥಳಗಳಲ್ಲಿ ಜಾಗ ನಿಗದಿಗೊಳಿಸಿತ್ತು. ಈಗ ಈ ತೀರ್ಮಾನದ ವಿರುದ್ಧ ಆಕ್ರೋಶ ವ್ಯಕ್ತಪಡಸಿದ್ದಾರೆ. ಏರ್‌ಲಿಫ್‌ಟ್‌ ಮೂಲಕ ಇದೇ 7ರಿಂದ ದೇಶಕ್ಕೆ ಮರಳಿ ತರುವವರನ್ನ ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲೇ ಕ್ವಾರೆಂಟೈನ್ ಮಾಡಬೇಕೆಂಬ ಒತ್ತಾಯವೂ ಕೇಳಿಬಂದಿದೆ.