Saturday, 14th December 2024

ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ     

 ಕಾವೇರಿ ತಂತ್ರಾಂಶಕ್ಕೆ ಹೊಸ 6.8 ಪ್ಯಾಚ್ ಅಳವಡಿಕೆ ಹಿನ್ನೆಲೆ
 ಆಸ್ತಿ ನೋಂದಣಿಗೆ ಜನರ ಪರದಾಟ 
 ಕೋಟ್ಯಂತರ ರೂಪಾಯಿ ಆದಾಯ ಖೋತಾ   
ವಿಶ್ವವಾಣಿ‌ ಸುದ್ದಿಮನೆ
ಬೆಂಗಳೂರು:
ರಾಜ್ಯ ಸರಕಾರಕ್ಕೆ ಹೆಚ್ಚು ಆದಾಯ ತಂದುಕೊಡುವ ಪ್ರಮುಖ ಇಲಾಖೆಗಳಲ್ಲಿಲ್ಲೊಂದಾದ  ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸರ್ವರ್ ಸಮಸ್ಯೆಯಿಂದ ಕೋಟ್ಯಂತರ ರೂಪಾಯಿ ಆದಾಯ ಖೋತಾ ಆಗುತ್ತಿದೆ.
ಆಸ್ತಿ ನೋಂದಣಿಗಾಗಿ ಕಾವೇರಿ ತಂತ್ರಾಂಶವನ್ನು ನವೀಕರಿಸಿ ಹೊಸ 6.8 ಪ್ಯಾಚ್ (ಅಪ್ಲಿಕೇಷನ್) ಅಳವಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದ  252 ಉಪನೋಂದಣಿ ಕಚೇರಿಗಳಲ್ಲಿ ನಡೆಯುತ್ತಿದ್ದ ಆಸ್ತಿ, ಸ್ಥಿರಾಸ್ತಿ, ಕರಾರು ಪತ್ರ, ಸಾಲ ತಿರುವಳಿ, ಋಣಭಾದ್ಯತಾ ಪತ್ರ, ಸಾಗುವಳಿ ಜಮೀನು ಒಪ್ಪಂದ ನೋಂದಣಿ ಕಾರ್ಯಗಳು ಸ್ಥಗಿತಗೊಂಡಿವೆ.
6.8 ಅಪ್ಲಿಕೇಷನ್ ಏನಿದು?
ನಕಲಿ ದಾಖಲಿ ನೀಡಿ ಅಮಾಯಕರ ಬೆಲೆಬಾಳುವ ಆಸ್ತಿಯನ್ನು ಕಬಳಿಸುವ ಪ್ರಕರಣಗಳನ್ನು ತಡೆಗಟ್ಟಲು ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಇತ್ತೀಚಿಗೆ  ಓಟಿಪಿ ಆಧಾರಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದಕ್ಕಾಗಿ ಕಾವೇರಿ ತಂತ್ರಾಂಶವನ್ನು ನವೀಕರಿಸಿ ಹೊಸದಾಗಿ 6.8 ಪ್ಯಾಚ್ (ಅಪ್ಲಿಕೇಷನ್) ಅಳವಡಿಸಲಾಗಿದೆ. ಈ ಹೊಸ ವ್ಯವಸ್ಥೆಯಲ್ಲಿ ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಆಸ್ತಿ ಮಾರುವವರು, ಕೊಳ್ಳುವವರು ಹಾಗೂ ಇಬ್ಬರು ಸಾಕ್ಷಿದಾರರೂ ಆಧಾರ್, ಲೈಸೆನ್ಸ್, ಪಾಸ್‌ಪೋರ್ಟ್, ಭಾವಚಿತ್ರ ಇರುವ ಬ್ಯಾಂಕ್ ಪಾಸ್‌ಬುಕ್ ಸೇರಿ ಮತ್ತಿತರರ ದಾಖಲೆಗಳನ್ನು ನೀಡಬೇಕು ಅಲ್ಲದೆ, ದಾಖಲೆಯೊಂದಿಗೆ ಮೂವರ ಮೊಬೈಲ್ ಸಂಖ್ಯೆಯನ್ನೂ ನೀಡಬೇಕು. ನೋಂದಣಿ ಪ್ರಕ್ರಿಯೆ ನಡೆಯುವ ವೇಳೆ ಆ ಮೂವರಿಗೂ ಓಟಿಪಿ ಬರುತ್ತದೆ. ಆ  ಸಂಖ್ಯೆಯನ್ನು ನೋಂದಣಾಧಿಕಾರಿಗಳಿಗೆ ನೀಡಿದರೆ ಮಾತ್ರವೇ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಯುತ್ತದೆ.
ತಾಂತ್ರಿಕ ದೋಷ:
ಕಾವೇರಿ ತಂತ್ರಾಂಶಕ್ಕೆ ಹೊಸದಾಗಿ 6.8 ಪ್ಯಾಚ್ ಅಳವಡಿಸಿರುವ ಹಿನ್ನೆಲೆಯಲ್ಲಿ ಉಪನೋಂದಣಿ ಕಚೇರಿಗಳಲ್ಲಿ ಆರಂಭದಲ್ಲೇ ತಾಂತ್ರಿಕ ದೋಷದಿಂದಾಗಿ ಸರ್ವರ್ ಸಮಸ್ಯೆ ಉಂಟಾಗಿದೆ. ಕಚೇರಿಗಳಲ್ಲಿ ಅಳವಡಿಸಿರುವ ಕಂಪ್ಯೂಟರ್‌ಗಳು ಹಳೆಯದಾಗಿದ್ದರಿಂದ ಹೊಸ ತಂತ್ರಾಂಶಕ್ಕೆ ಹೊಂದಿಕೊಳ್ಳಲು ಆಗುತ್ತಿಲ್ಲ.  ಬೆಳಗ್ಗೆಯೇ ಕಚೇರಿಗಳಿಗೆ ಬರುವ ಆಸ್ತಿ ಮಾರಾಟ ಮಾಡುವವರು ಅಥವಾ ಖರೀದಿದಾರರಿಗೆ ಟೋಕನ್ ಕೂಡ ನೀಡಲಾಗುತ್ತದೆ. ಆದರೆ, ಈ ಸರ್ವರ್ ಸಮಸ್ಯೆಯಿಂದ ಸಮರ್ಪಕವಾಗಿ ಆಸ್ತಿ ನೋಂದಣಿ ಕಾರ್ಯ ಮಾಡುವುದಕ್ಕೆ  ಆಗುತ್ತಿಲ್ಲ.
ಸಬ್ ರಿಜಿಸ್ಟ್ರಾರ್‌ಗೂ ತಲೆನೋವು:
ಹೊಸದಾಗಿ ಓಟಿಪಿ ಆಧಾರಿತ ನೋಂದಣಿ ಪ್ರಕ್ರಿಯೆ ಜನರಿಗಷ್ಟೇ ಅಲ್ಲದೆ ಸಬ್‌ರಿಜಿಸ್ಟ್ರಾರ್‌ಗಳಿಗೂ ತಲೆನೋವಾಗಿದೆ. ಪೋಡಿ ಮಾಡಿಸಿಕೊಳ್ಳವವರಿಗೆ, ಆಸ್ತಿ ಭಾಗ ಮಾಡಿಸಿಕೊಂಡವರಿಗೆ, ಅಗ್ರಿಮೆಂಟ್ ಮಾಡಿಸಿಕೊಳ್ಳುವವರಿಗೆ ಈ ಹೊಸ ಪದ್ಧತಿಯಿಂದ ಪರದಾಡುವಂತಾಗಿದೆ.
ತಜ್ಞರ ಕೊರತೆ:
ಸರ್ವರ್ ಸಮಸ್ಯೆಗಳನ್ನು ಬಗೆಹರಿಸಲು ತಜ್ಞರ ಕೊರತೆ ಇದೆ. ಎಲ್ಲ ಸ್‌ಟಾವೇರ್ ಕಾರ್ಯಗಳನ್ನು ಬೆಂಗಳೂರಿನಲ್ಲಿ ಮಾತ್ರ ದುರಸ್ಥಿ ಕಾರ್ಯ ಮಾಡಲಾಗುತ್ತಿದೆ. ಆದರೆ, ವಿಭಾಗಮಟ್ಟದಲ್ಲಿ ಈ ಸೌಲಭ್ಯವಿಲ್ಲ. ಆದ್ದರಿಂದ ಪ್ರತಿ ಜಿಲ್ಲೆಗೆ ಒಬ್ಬರಂತೆ ತಜ್ಞ ಇಂಜಿನಿಯರ್‌ಗಳನ್ನು ನೇಮಿಸಿದರೆ ಇಂತಹ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕೆಟ್ಟು ನಿಂತಿರುವ ಉಬ್ಬಚ್ಚು ಯಂತ್ರ:
ಒಂದೆಡೆ ಸರ್ವರ್ ಸಮಸ್ಯೆ ಉಂಟಾದರೆ ಮತ್ತೊಂದೆಡೆ ಪದೇಪದೆ ಉಬ್ಬಚ್ಚು ಯಂತ್ರಗಳು ಕೆಟ್ಟು ನಿಂತಿವೆ. ಕೆಲ ಕಚೇರಿಗಳಲ್ಲಿ ಮಾತ್ರವೇ ಉಬ್ಬಚ್ಚು ಯಂತ್ರಗಳು ಕೆಲಸ ಮಾಡುತ್ತಿವೆ.  ಆದರೆ, ಕೆಲ ಕಡೆ ಅಳವಡಿಸಿರುವ ಯಂತ್ರಗಳು ಈಗಾಗಲೇ 13 ವರ್ಷಗಳ ಹಳೆಯದಾಗಿದ್ದು, ಮಾರುಕಟ್ಟೆಯಲ್ಲಿ ಯಂತ್ರದ ಬಿಡಿಭಾಗಗಳು ಸಿಗದಿರುವ ಹಿನ್ನೆಲೆಯಲ್ಲಿ ಸರಿಯಾಗಿ ನಿರ್ವಹಣೆ ಇಲ್ಲದೆ ದುಸ್ಥಿತಿ ಹಂತಕ್ಕೆ ತಲುಪಿವೆ. ಕರಾರು, ಬಾಡಿಗೆ ಒಪ್ಪಂದ, ಎಲ್‌ಐಸಿ ಬಾಂಡ್‌ಗಳು ಹಾಗೂ ಆಫಿಡವಿಟ್ ಸೇರಿ ಪತ್ರ ವ್ಯವಹಾರಕ್ಕೆ ಜನರು ಕಡ್ಡಾಯವಾಗಿ ಸ್ಟಾೃಂಪ್ ಹಾಕಿಸುತ್ತಾರೆ. ಪ್ರತಿ ಪುಟಕ್ಕೆ ಕನಿಷ್ಠ 50 ರೂ.ನಿಂದ ಗರಿಷ್ಠ 500 ರೂ.ವರೆಗೆ ಸ್ಟಾೃಂಪ್‌ಗಳನ್ನು ಹಾಕಲಾಗುತ್ತಿದೆ. ಒಪ್ಪಂದ ಪತ್ರಗಳಿಗೆ ಮತ್ತು ಬಾಂಡ್‌ಗಳಿಗೆ ತಲಾ 200 ರೂ ಹಾಗೂ ಅಫಿಡೆವಿಟ್‌ಗಳಿಗೆ 20 ರೂ.ಗಳಿಗೆ ಸ್ಟಾೃಂಪ್ ಮಾಡಿಕೊಡಲಾಗುತ್ತದೆ. ಆದರೆ, ಉಬ್ಬಚ್ಚು ಯಂತ್ರಗಳ ಸಮಸ್ಯೆಯಿಂದ ಜನರಿಗೆ ತೊಂದರೆಯಾಗುತ್ತಿದೆ.