Thursday, 12th December 2024

ಸೋಂಕಿತರು‌ ಹೆಚ್ಚಿರುವ ಪ್ರದೇಶಕ್ಕೆ ದಿಗ್ಬಂಧನ

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು

ನಗರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸೋಂಕಿತರು ಹೆಚ್ಚಿರುವ ಪ್ರದೇಶಗಳಿಗೆ ಸಂಪೂರ್ಣ ದಿಗ್ಬಂಧನ ವಿಧಿಸುವತ್ತ ಬಿಬಿಎಂಪಿ ಚಿತ್ತ ಹರಿಸಿದೆ.

ಸೋಂಕಿತರು ಹೆಚ್ಚಿರುವ ಪ್ರದೇಶಗಳನ್ನು ಕಂಟೈನ್ಮೆಂಟ್ ಜೋನ್‍ಗಳಾಗಿ ಗುರುತಿಸಿ ಅಂತಹ ಪ್ರದೇಶಗಳಲ್ಲಿ ದಿಗ್ಬಂಧನ ವಿಧಿಸಿ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಈಗಾಗಲೇ ಕಂಟೈನ್ಮೆಂಟ್ ಜೋನ್‍ಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಸೋಂಕಿತರು ಹೆಚ್ಚಿರುವ ಸುಮಾರು 30 ವಾರ್ಡ್‍ಗಳನ್ನು ಕಂಟೈನ್ಮೆಂಟ್ ಜೋನ್‍ಗಳನ್ನಾಗಿ ಗುರುತಿಸಲಾಗಿದೆ. ನಗರದಲ್ಲಿ ಮಹಾಮಾರಿ ಕರೊನಾ ಸೋಂಕು ಮರಣಮೃದಂಗ ಬಾರಿಸುವ ಮೊದಲೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ರೋಗ ಹತೋಟಿಗೆ ಮಾಸ್ಟರ್ ಪ್ಲಾನ್ ಸಿದ್ದಪಡಿಸಿದ್ದಾರೆ.

ನಗರದಲ್ಲಿ ಈಗಾಗಲೇ 80 ಪಾಸಿಟಿವ್ ಕೇಸ್‍ಗಳು ಬೆಳಕಿಗೆ ಬಂದಿರುವುದರಿಂದ ಸೋಂಕಿತರು ಹೆಚ್ಚಿರುವ ಪ್ರದೇಶಗಳನ್ನು ಕಂಟೈನ್ಮೆಂಟ್ ಜೋನ್‍ಗಳನ್ನಾಗಿ ಗುರುತಿಸಲಾಗಿದೆ. ಕಂಟೈನ್ಮೆಂಟ್ ಜೋನ್‍ಗಳಲ್ಲಿ ವಾಸಿಸುತ್ತಿರುವವರು ಮನೆಯಿಂದ ಹೊರ ಬರದ ರೀತಿಯಲ್ಲಿ ಮುನ್ನೆಚ್ಚರಿಗೆ ವಹಿಸಿ ಇಡೀ ಪ್ರದೇಶಕ್ಕೆ ಬ್ಯಾರಿಕೇಡ್ ಅಳವಡಿಸಲು ತೀರ್ಮಾನಿಸಲಾಗಿದೆ. ಪಾಸಿಟಿವ್ ಕೇಸ್ ಕಾಣಿಸಿಕೊಂಡ ಮನೆಗಳನ್ನು ಎಪಿಸೆಂಟರ್ ಎಂದು ಗುರುತಿಸಿ ಆ ಮನೆಯ ಸುತ್ತಮುತ್ತಲಿನ ಮೂರು ಕಿ.ಮೀ. ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಲಾಗುವುದು.
ಇನ್ನು ಮೂರು ಕಿ.ಮೀ.ನಂತರದ 5 ಕಿ.ಮೀ. ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಗುರುತಿಸಿ ಕಂಟೈನ್ಮೆಂಟ್ ಜೋನ್‍ನ ಸುಮಾರು 8ಕಿ.ಮೀ. ಸುತ್ತಳತೆ ಪ್ರದೇಶದಲ್ಲಿ ಯಾವುದೇ ಜನ ಅಥವಾ ವಾಹನ ಸಂಚಾರವಿಲ್ಲದಂತೆ ಎಚ್ಚರ ವಹಿಸಲಾಗುವುದು. ತಲಾ 50 ಮನೆಗಳಿರುವ ಪ್ರದೇಶವನ್ನು ಒಂದು ಸೆಕ್ಟರನ್ನಾಗಿ ವಿಭಜಿಸಿ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಸೆಕ್ಟರ್‍ವೈಸ್ ಆರೋಗ್ಯ ತಪಾಸಣೆ ನಡೆಸಲಿದ್ದಾರೆ.

ಕಂಟೈನ್ಮೆಂಟ್ ಜೋನ್‍ಗಳಾಗಿ ಪರಿವರ್ತನೆಗೊಳ್ಳುವ ಪ್ರದೇಶಗಳಲ್ಲಿ ಎಲ್ಲಾ ಅಗತ್ಯ ಸೇವೆಗಳನ್ನು ಬಂದ್ ಮಾಡಲಾಗುವುದು. ಇಡೀ ಪ್ರದೇಶಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಡಲಾಗುವುದು. ಪ್ರತಿಯೊಬ್ಬರ ಚಲನವಲನಗಳ ಮೇಲೆ ನಿಗಾ ವಹಿಸಿ ಯಾರೇ ಆಗಲಿ ಅನುಮತಿ ಇಲ್ಲದೆ ಏರಿಯಾದಿಂದ ಹೊರ ಹೋಗುವಂತಿಲ್ಲ ಹಾಗೂ ಒಳ ಬರುವಂತಿಲ್ಲ.
ಇಡೀ ಪ್ರದೇಶದ ಎಂಟ್ರಿ ಮತ್ತು ಎಕ್ಸ್‍ಟ್‍ಗಳಲ್ಲಿ ಕಡ್ಡಾಯ ತಪಾಸಣೆ ನಡೆಸಿ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ಮಾಡಿಕೊಡಲಾಗುವುದು. ಹಾಟ್‍ಸ್ಪಾಟ್‍ಗಳ ಆಧಾರದ ಮೇಲೆ ಕಂಟೈನ್ಮೆಂಟ್ ಜೋನ್‍ಗಳ ಗಡಿ ಗುರುತಿಸಿ ಕರೊನಾ ಸೋಂಕು ಹೆಚ್ಚಾಗದಂತೆ ಮುನ್ನೆಚ್ಚರಿಕೆ ವಹಿಸುವತ್ತ ಬಿಬಿಎಂಪಿ ಗಮನ ಹರಿಸಲಿದೆ.

ಎಲ್ಲೆಲ್ಲಿ ದಿಗ್ಬಂಧನ.
ಹಗದೂರು, ಗರುಡಾಚಾರ್‍ಪಾಳ್ಯ, ವರ್ತೂರು, ಹೂಡಿ, ಹೊರಮಾವು, ಸಿಂಗಸಂದ್ರ, ಸಿ.ವಿ.ರಾಮನ್‍ನಗರ, ಪಾದರಾಯನಪುರ, ಬಾಪೂಜಿನಗರ, ಅತ್ತಿಗುಪ್ಪೆ
ರಾಜರಾಜೇಶ್ವರಿನಗರ, ಜೆ.ಪಿ.ನಗರ, ಶಾಕಾಂಬರಿನಗರ, ಸಂಪಂಗಿರಾಮನಗರ, ವಸಂತನಗರ, ಸುಧಾಮನಗರ, ಕೆ.ಆರ್.ಮಾರ್ಕೆಟ್, ಬೇಗೂರು
ಕರಿಸಂದ್ರ, ವೈಟ್‍ಫೀಲ್ಡ್, ಹೊಸಹಳ್ಳಿ, ನಾಗರಭಾವಿ, ರಾಮಸ್ವಾಮಿಪಾಳ್ಯ, ಮಾರುತಿಸೇವಾನಗರ, ರಾಮಮೂರ್ತಿನಗರ, ಥಣಿಸಂದ್ರ, ಬ್ಯಾಟರಾಯನಪುರ, ಗಂಗಾನಗರ, ರಾಧಾಕೃಷ್ಣ ಟೆಂಪಲ್, ಅರಮನೆನಗರ, ಲಿಂಗರಾಜಪುರ, ನಾಗಪುರ, ಜೀವನ್‍ಭೀಮಾನಗರ, ಶಿವನಗರ
ಅಜಾದ್‍ನಗರ, ಆಡುಗೋಡಿ, ಸದ್ದುಗುಂಟೆಪಾಳ್ಯ, ಗಿರಿನಗರ, ಗುರ್ರಪ್ಪನಪಾಳ್ಯ, ಮಡಿವಾಳ
*ಕಮಾಂಡರ್ ನೇಮಕ :
ಕಂಟೈನ್ಮೆಂಟ್ ಜೋನ್‍ಗಳಲ್ಲಿ ತಲಾ ಒಬ್ಬೊಬ್ಬ ಕಮಾಂಡರ್ ಗಳನ್ನು ನೇಮಿಸಲಾಗುವುದು. ಅವರ ಕೈ ಕೆಳಗೆ ಹೆಲ್ತ್ ಆಫೀಸರ್, ಇಂಜಿನಿಯರ್ಸ್, ಆಶಾಕಾರ್ಯಕರ್ತೆಯರು ಮತ್ತಿತರ ಬಿಬಿಎಂಪಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ತಿಳಿಸಿದರು.
ಕಮಾಂಡರ್ ಳಿಗೆ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಪವರ್ ಇರುತ್ತದೆ. ಆಯಾ ಜೋನ್‍ಗಳಿಗೆ ಅವರೇ ಜವಾಬ್ದಾರರಾಗಿರುತ್ತಾರೆ. ಅವರ ಉಸ್ತುವಾರಿಯಲ್ಲೇ ಮನೆ ಮನೆಗಳಿಗೆ ತೆರಳಿ ಸರ್ವೆ ನಡೆಸಲಾಗುವುದು ಎಂದು ಅವರು ಹೇಳಿದರು.
ಕಮಾಂಡರ್ ತಂಡದಲ್ಲಿ 6-7 ಮಂದಿ ಕರ್ತವ್ಯ ನಿರ್ವಹಿಸುತ್ತಾರೆ. ಅವರ ಅನುಮತಿ ಇಲ್ಲದೆ ಯಾವುದೇ ವ್ಯಕ್ತಿ ಪ್ರದೇಶ ಬಿಟ್ಟು ಒಳ ಬರುವಂತಿಲ್ಲ ಹಾಗೂ ಹೊರ ಹೋಗುವಂತಿಲ್ಲ. ಅಗತ್ಯ ವಸ್ತುಗಳ ಸರಬರಾಜಿಗೆ ನಿಗದಿತ ವ್ಯಕ್ತಿಗಳೇ ಇರಬೇಕೆಂದು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.