Sunday, 15th December 2024

ಸ್ಪೀಕರ್ ವಿರುದ್ದ ಎಚ್ ಕೆಪಿ ಗರಂ

ಬೆಂಗಳೂರು:
ಕೋವಿಡ್-19 ಸೋಂಕು ಹರಡುತ್ತಿರುವ ಕಾರಣ ವಿಧಾನಸಭೆಯ ಸಮಿತಿಗಳಿಗೆ ಅಧ್ಯಯನ ಪ್ರವಾಸ, ಸ್ಥಳ ಭೇಟಿಗೆ ಅವಕಾಶ ನಿರಾಕರಿಸಿರುವ ಆದೇಶಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯ ಸಮಿತಿಗಳಿಗೆ ಅಧ್ಯಯನ ಪ್ರವಾಸ, ಸ್ಥಳ ಭೇಟಿ ಮಾಡಬಾರದು ಎಂದು ವಿಧಾನಸಭಾ ಅಧ್ಯಕ್ಷರು ಆದೇಶಿಸಿದ್ದರು. ಈ ಬಗ್ಗೆ ಪ್ರತಿಕ್ರಯಿಸಿದ ಹೆಚ್ ಕೆ ಪಾಟೀಲ್,  ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯಿಂದ ಆಸ್ಪತ್ರೆ, ಏರ್ ಪೋರ್ಟ್ ಬಸ್ ನಿಲ್ದಾಣಕ್ಕೆ ಭೇಟಿ ನೀಡಲು ನಿರ್ಧರಿಸಲಾಗಿತ್ತು. ತನಿಖೆ ಮಾಡಿ ನಿರ್ಣಯ ಮಾಡಲು ತೀರ್ಮಾನಿಸಿದ್ದೇವೆ. ನಮ್ಮ ಕರ್ತವ್ಯ ನಿರ್ವಹಿಸುವುದಕ್ಕೆ ಸಭಾಧ್ಯಕ್ಷರು ಯಾವುದಕ್ಕೂ ಅಡ್ಡಿ ಪಡಿಸಬಾರದು. ನಮಗೆ ಪರಿಶೀಲನೆಗೆ ಅಡ್ಡಿ ಪಡಿಸಿದರೆ ಅದು ಜನದ್ರೋಹಿ ನೋಟಿಫಿಕೇಷನ್ ಆಗುತ್ತದೆ ಎಂದಿದ್ದಾರೆ.
ಲೆಕ್ಕಪತ್ರ ಸಮಿತಿ ಸದಸ್ಯರು ಭೇಟಿ ನೀಡಬಾರದು. ಯಾವುದೇ ಸ್ಥಳಗಳಿಗೆ ಹೋಗಬಾರದು ಎಂದು ಆದೇಶ ನೀಡಿದ್ದಾರೆ. ತಪಾಸಣೆ ಅಡ್ಡಿಪಡಿಸುವ ಸ್ಪೀಕರ್ ತೀರ್ಮಾನ ಸರಿಯಲ್ಲ. ಭ್ರಷ್ಟಾಚಾರಕ್ಕೆ ಬೆಂಬಲ ನೀಡಲು ಸ್ಪೀಕರ್ ತೀರ್ಮಾನ ಮಾಡಿದಂತಾಗುತ್ತದೆ ಎಂದಿದ್ದಾರೆ.
ಒಂದು ಕಾಲ ಇತ್ತು ಬರ ಬಂದರೆ ಸಾಕು ಅಂತ ಹೇಳ್ತಿದ್ರು. ಈಗ ಕೋವಿಡ್-19 ಬಂದ್ರೆ ಸಾಕು ಅನ್ನೋ ಕಾಲ ಬಂದಿದೆ. ಈ ಸಂಕಷ್ಟದಲ್ಲೂ ಭ್ರಷ್ಟಾಚಾರದ ವಾಸನೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಲೆಕ್ಕಪತ್ರ ಸಮಿತಿ ಭೇಟಿ ಮಾಡುವುದು ಅಗತ್ಯ. ಅಲ್ಲದೇ ಸಂವಿಧಾನದ ಅಡಿಯಲ್ಲಿ ಸಮಿತಿ ವಿಚಾರದಲ್ಲಿ ಸ್ಪೀಕರ್ ಮಧ್ಯ ಪ್ರವೇಶ ಸರಿಯಲ್ಲ. ಕೂಡಲೇ ಸ್ಪೀಕರ್ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.