Sunday, 10th November 2024

ಹೂವು ಬೆಳೆಗಾರರ ಕಷ್ಟ ಆಲಿಸಿದ ಡಿಕೆಶಿ

ಬೆಂಗಳೂರು:

ಬೆಂಗಳೂರು ಗ್ರಾಮಾಂತರ ಲೋಕಭಾ ಕ್ಷೇತ್ರದ ಆನೇಕಲ್ ತಾಲೂಕಿನ ವಿವಿಧ ಭಾಗಗಳ ಹೂವು ಬೆಳೆಗಾರರ ತೋಟಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಭಾನುವಾರ ಖುದ್ದು ಭೇಟಿ ನೀಡಿ ಅಲ್ಲಿನ ರೈತರ ಸಂಕಷ್ಟಗಳನ್ನು ಆಲಿಸಿದರು. ರೈತರ ಉತ್ಪನ್ನಗಳು ಮಾರುಕಟ್ಟೆ ಇಲ್ಲದೇ ಹೊಲ, ತೋಟಗಳಲ್ಲೇ ಹಾಳಾಗುತ್ತಿರುವುದನ್ನು ಸಾಕ್ಷಾತ್ ಕಂಡರು. ಅವರ ಗೋಳು ಕೇಳಿ ಮರುಗಿದರು.
ರಾಜ್ಯ ಸರ್ಕಾರ ಕೂಡಲೇ ಈ ರೈತರ ನೆರವಿಗೆ ಧಾವಿಸಬೇಕು ಎಂದು ಅಲ್ಲಿಂದಲೇ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಸದ ಡಿಕೆ ಸುರೇಶ್ ಹಾಗೂ ಸ್ಥಳೀಯ ಶಾಸಕ ಶಿವಣ್ಣ ಕೂಡ ಕೆಪಿಸಿಸಿ ಅಧ್ಯಕ್ಷರ ಜತೆಗಿದ್ದರು.

ಸಿಎಂ ಯಡಿಯೂರಪ್ಪ ಅವರು ಸಚಿವ ಸಂಪುಟ ಸಭೆ ನಡೆಸಿ, ಯಾವೊಬ್ಬ ರೈತನಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದರು. ಹೀಗೆ ಹೇಳಿ ನಾಲ್ಕೈದು ದಿನಗಳಾದರೂ ಈ ರೈತರಿಗೆ ಆಗುತ್ತಿರುವ ನಷ್ಟವನ್ನು ಪರಿಶೀಲಿಸಲು ಈವರೆಗೂ ಯಾವುದೇ ಅಧಿಕಾರಿ ಇಲ್ಲಿಗೆ ಆಗಮಿಸಿಲ್ಲ. ರೈತರ ಪರಿಸ್ಥಿತಿ ಹೇಗಿದೆ ಅಂತಾ ನೋಡಿಲ್ಲ. ಇದು ನಮ್ಮ ರಾಜ್ಯದಲ್ಲಿ ಆಡಳಿತ ಯಂತ್ರ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಶಿವಕುಮಾರ್ ಟೀಕಿಸಿದರು.

ರೈತರ ಸಂಕಷ್ಟ ವಿಚಾರದಲ್ಲಿ ರಾಜಕೀಯ ಮಾಡಲು ನನಗೆ ಇಷ್ಟವಿಲ್ಲ. ಯಡಿಯೂರಪ್ಪನವರೇ ನಾವು-ನೀವು ರೈತರ ಮಕ್ಕಳು. ನೀವು ರೈತರ ಹೆಸರಿನಲ್ಲಿ ಕೇವಲ ಪ್ರಮಾಣ ವಚನ ತೆಗೆದುಕೊಂಡರೆ ಸಾಲದು. ಅವರ ಕಷ್ಟಕ್ಕೆ ಸ್ಪಂದಿಸಿದರೆ ಮಾತ್ರ ನೀವು ತೆಗೆದುಕೊಂಡ ಪ್ರಮಾಣಕ್ಕೆ ಗೌರವ. ಈ ರೈತನನ್ನು ಉಳಿಸಿ ಎಂದಷ್ಟೇ ನಾನು ಕೇಳುತ್ತೇನೆ ಎಂದರು.

ನಮ್ಮ ತೋಟಗಾರಿಕಾ ಸಚಿವರಲ್ಲಿ ಈ ಸಂದರ್ಭದಲ್ಲಿ ನಾನೊಂದು ಮನವಿ ಮಾಡುತ್ತೇನೆ. ಕೂಡಲೇ ರಾಜ್ಯದ ಎಲ್ಲ ಭಾಗಗಳಲ್ಲಿನ ರೈತರ ಬೆಳೆಯನ್ನು ಮಾರುಕಟ್ಟೆಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಿ. ಅವರ ಬೆಳೆಗೆ ಬೆಂಬಲ ಬೆಲೆ ಘೋಷಿಸಿ. ಆ ಮೂಲಕ ಅವರ ಶ್ರಮ ಮಣ್ಣುಪಾಲಾಗುವುದನ್ನು ತಡೆಯಿರಿ.

ಅಧಿಕಾರಿಗಳನ್ನು ತಕ್ಷಣವೇ ಪ್ರತಿ ಹಳ್ಳಿಗಳಿಗೆ ಕಳುಹಿಸಿ. ಮಾರುಕಟ್ಟೆ ಹಾಗೂ ಬೇಡಿಕೆ ಇಲ್ಲದೆ ರೈತರಿಗೆ ಆಗಿರುವ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿ ಸಂಕಷ್ಟದಲ್ಲಿರುವ ರೈತನಿಗೆ ಪರಿಹಾರ ಕಲ್ಪಿಸಿ ಎಂದು ಹೇಳಿದರು.
ರೈತನಿಗೆ ಯಾವುದೇ ಲಂಚ ಸಿಗಲ್ಲ. ಯಾವುದೇ ಪಿಂಚಣಿ ಇಲ್ಲ. ಅವನು ಬೆಳೆದಿದ್ದರಲ್ಲೇ ಸಂಪಾದನೆ ಮಾಡಿ ಬದುಕಬೇಕು. ಈ ರೈತರನ್ನು ಉಳಿಸಬೇಕು ಎಂದು ಇಲ್ಲಿಂದಲೇ ಕೈಮುಗಿದು ನಮ್ರತೆಯಿಂದ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.