Saturday, 14th December 2024

ಹೈಕೋರ್ಟ್ ನ್ಯಾಯಮೂರ್ತಿ ಪ್ರಮಾಣ ವಚನ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ದೆಹಲಿ:

ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಕಿರಿಯ ನ್ಯಾಯಾಂಗ ಅಧಿಕಾರಿಯ ನೇಮಕಾತಿ ಪ್ರಶ್ನಿಸಿ ಜಿಲ್ಲಾ ನ್ಯಾಯಮೂರ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ಬೆಳಗ್ಗೆ ವಜಾಗೊಳಿಸಿದೆ.

ಹೈಕೋರ್ಟ್‌ನ ಅಪರ ನ್ಯಾಯಾಧೀಶರಾಗಿ ಪದ್ಮರಾಜ್ ಎನ್.ದೇಸಾಯಿ ಅವರು ಪ್ರಮಾಣ ಸ್ವೀಕರಿಸುವುದಕ್ಕೆ ಅರ್ಧಗಂಟೆ ಮುನ್ನ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ. ಶಿವಮೊಗ್ಗದ ಪ್ರಧಾನ ಜಿಲ್ಲಾ ನ್ಯಾಯಾಧೀಶ ಆರ್‌ಜಿಎಂಎಂ ಮಹಾಸ್ವಾಮೀಜಿ ಈ ಸಂಬಂಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕಿರಿಯ ನ್ಯಾಯಾಂಗ ಅಧಿಕಾರಿಯಾದ ಪದ್ಮರಾಜ್ ಎನ್.ದೇಸಾಯಿ ಅವರನ್ನು ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ ಮಾಡುವ ಮೂಲಕ ಹಿರಿತನದ ನಿಯಮವನ್ನು ಉಲ್ಲಂಸಲಾಗಿದೆ. ಅವರ ಪ್ರಮಾಣ ವಚನ ಸ್ವೀಕಾರಕ್ಕೆ ತಡೆಯಾಜ್ಞೆ ನೀಡಬೇಕೆಂದು ಜಿಲ್ಲಾ ನ್ಯಾಯಾಧೀಶ ಮಹಾಸ್ವಾಮೀಜಿ ಕೋರಿದ್ದರು.

ನ್ಯಾಯಮೂರ್ತಿ ದೀಪಕ್ ಗುಪ್ತ ಮತ್ತು ಅನಿರುಧ್‌ ಬೋಸ್ ಅವರನ್ನು ಒಳಗೊಂಡ ನ್ಯಾಯಪೀಠವು ಸೋಮವಾರ ಬೆಳಗ್ಗೆ 10 ಗಂಟೆಗೆ ವಿಡಿಯೋ ಕಾನ್ಫೆನ್‌ಸ್‌  ಮೂಲಕ ವಿಚಾರಣೆ ನಡೆಸಿತು. ಕೊನೆ ಗಳಿಗೆಯಲ್ಲಿ ಈ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ. ಅಲ್ಲದೇ ನ್ಯಾಯಾಧೀಶರ ನೇಮಕ ಕುರಿತು ರಾಷ್ಟ್ರಪತಿ ಅವರು ನೀಡಿದರುವ ಆದೇಶದ ವಿಷಯದಲ್ಲಿ ಕೊನೆಗಳಿಗೆಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ.

ಬೆಳಗ್ಗೆೆ 10.30ರಲ್ಲಿ ನಿಗದಿಯಾಗಿದ್ದ ಪ್ರಮಾಣ ವಚನ ಸ್ವೀಕಾರಕ್ಕೆ ಅರ್ಧ ತಾಸಿಗೆ ಮುನ್ನ ಈ ಅರ್ಜಿ ವಜಾಗೊಂಡಿದ್ದರಿಂದ ಪದ್ಮರಾಜ್ ದೇಸಾಯಿ ಅವರು ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪ್ರತಿಜ್ಞೆ ವಿಧಿ ಸ್ವೀಕಾರ ಅಬಾಧಿತವಾಯಿತು.
ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ಹೊರಡಿಸಿರುವ ಅಧಿಸೂಚನೆ ಪ್ರಕಾರ  ಸೋಮವಾರ ಬೆಳಗ್ಗೆ 10.30ಕ್ಕೆ ನ್ಯಾಯಮೂರ್ತಿಗಳಾದ ಶಿವಶಂಕರ್ ಅಮರಣ್ಣನವರ್, ಮಕ್ಕಿಮನೆ ಜಿ. ಉಮಾ, ವೇದವ್ಯಾಸಚಾರ್ ಶ್ರೀಶನಂದ, ಹಂಚಟೆ ಸಂಜೀವ್ ಕುಮಾರ್ ಮತ್ತು ಪದ್ಮರಾಜ್ ಎನ್. ದೇಸಾಯಿ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು