Saturday, 14th December 2024

ನಾಳೆಯಿಂದ ತರಗತಿಗಳಲ್ಲಿ ಶೇ.100 ಹಾಜರಾತಿ : ಸಚಿವ ಬಿ.ಸಿ.ನಾಗೇಶ್

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅ.4ರಿಂದ ಶೇ.100 ಹಾಜರಾತಿ ಜತೆಗೆ ಪೂರ್ಣ ಪ್ರಮಾಣದಲ್ಲಿ ಭೌತಿಕ ತರಗತಿ ನಡೆಸಲು ಅವಕಾಶ ಕಲ್ಪಿಸಿದೆ.

ಅ.1ರಿಂದಲೇ ಶೇ.100 ಹಾಜರಾತಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಈ ಹಿಂದೆ ಸೂಚನೆ ನೀಡಿದ್ದರು. ಆದರೆ, ಇಲಾಖೆಯಿಂದ ಅಧಿಕೃತ ಆದೇಶ ಹೊರಬಿದ್ದಿರಲಿಲ್ಲ. ಅ.1ರಂದು ಶಿಕ್ಷಣ ಇಲಾಖೆ ಶೇ.100 ಹಾಜರಾತಿಗೆ ಅವಕಾಶ ಕಲ್ಪಿಸಿ ಆದೇಶ ನೀಡಿದೆ.

ಭೌತಿಕ ತರಗತಿ ಆರಂಭವಾದ ಮೇಲೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ನಿತ್ಯ ಅರ್ಧದಿನ ಮಾತ್ರ ನಾಲ್ಕರಿಂದ ಐದು ಪೀರಿಯಡ್ ನಡೆಸಲು ಅವಕಾಶ ನೀಡಿತ್ತು. ಅಲ್ಲದೆ, ಪಿಯು ವಿದ್ಯಾರ್ಥಿಗಳಿಗೆ ಶೇ.50 ಮಕ್ಕಳಿಗೆ ವಾರದ ಮೊದಲ ಮೂರುದಿನ, ಉಳಿದ ಮೂರು ದಿನ ಇನ್ನುಳಿದ ಮಕ್ಕಳಿಗೆ ಭೌತಿಕ ತರಗತಿ ನಡೆಸಬೇಕಿತ್ತು.

ಹೊಸ ಸುತ್ತೋಲೆ ಪ್ರಕಾರ ಎಲ್ಲ ಸರ್ಕಾರಿ ಅನುದಾನಿತ, ಅನುದಾನರಹಿತ ಖಾಸಗಿ ಶಾಲೆಗಳೂ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಅ.4ರಿಂದ ಬೆಳಗ್ಗೆಯಿಂದ ಸಂಜೆವರೆಗೂ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸಬೇಕು.

ಶಾಲಾ ಮಕ್ಕಳ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ ಬಿಎಂಟಿಸಿ ಹೆಚ್ಚುವರಿಯಾಗಿ 100 ಬಸ್‌ಗಳನ್ನು ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ. ಅ.4ರಿಂದಲೇ ಹೆಚ್ಚುವರಿ ಬಸ್‌ಗಳ ಸಂಚಾರ ಆರಂಭವಾಗಲಿದೆ. ಸದ್ಯಕ್ಕೆ 4,953 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದು, 100 ಬಸ್ ಸೇರ್ಪಡೆ ಆಗುವು ದರಿಂದ ಒಟ್ಟಾರೆಯಾಗಿ 5,053 ಬಸ್‌ಗಳು ಸಂಚರಿಸಲಿವೆ.