ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೋರಮಂಗಲದ ಪಿಜಿಯಲ್ಲಿನ ಯುವತಿಯ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಬರೋಬ್ಬರಿ 1,205 ಪುಟಗಳ ಚಾರ್ಜ್‌ಶೀಟ್ (Charge sheet) ಸಲ್ಲಿಸಿದ್ದಾರೆ (PG murder case). ಉಪ ಪೊಲೀಸ್ ಆಯುಕ್ತರಾದ ಸಾರಾ ಫಾತಿಮಾ ಈ ಬಗ್ಗೆ ಮಾಹಿತಿ ನೀಡಿ, ”ಕೋರಮಂಗಲದ ಪಿಜಿಯೊಂದರಲ್ಲಿ ಉತ್ತರ ಭಾರತ ಮೂಲದ ಕೃತಿ ಕುಮಾರಿ ಎಂಬವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ, 23 ವರ್ಷದ ಮಧ್ಯಪ್ರದೇಶ ಮೂಲದ ಅಭಿಷೇಕ್ ಘೋಷಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆʼʼ ಎಂದು ತಿಳಿಸಿದ್ದಾರೆ (Crime News)
ಈ ದೋಷಾರೋಪ ಪಟ್ಟ 85 ಸಾಕ್ಷಿಗಳ ಹೇಳಿಕೆ, ಅಪರಾಧ ಕೃತ್ಯದ ವಿವರಗಳನ್ನು ಒಳಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಜುಲೈ 24ರಂದು ಎಫ್‌ಆರ್‌ಐ ದಾಖಲಿಸಲಾಗಿತ್ತು. ಜುಲೈ 26ರಂದು ಮಧ್ಯಪ್ರದೇಶದಿಂದ ಪ್ರಮುಖ ಆರೋಪಿ ಅಭಿಷೇಕ್‌ನನ್ನು ಬಂಧಿಸಲಾಗಿತ್ತು. ಬಿಹಾರ ಮೂಲದ ಕೃತಿ ಕುಮಾರಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಆಕೆಯ ಗೆಳತಿಯ ಪ್ರಿಯಕರನಾಗಿದ್ದ ಅಭಿಷೇಕ್ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ. ಆತನ ಪ್ರಿಯತಮೆ ಮಹಾರಾಷ್ಟ್ರ ಮೂಲದವಳು.
ಪ್ರಕರಣದ ಹಿನ್ನಲೆ
ಜು. 23ರಂದು ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಕೊಲೆ ನಡೆದಿತ್ತು. ಆರೋಪಿ ಅಭಿಷೇಕ್ ಕೃತಿ ಕುಮಾರಿಯನ್ನು ಎರಡೇ ನಿಮಿಷದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ. ಕತ್ತು, ಎದೆ, ಹೊಟ್ಟೆ ಭಾಗ ಸೇರಿ ಹಲವು ಕಡೆ ಇರಿದಿದ್ದ. ಮೊದಲು ಪಿಜಿ ರೂಮಿನ ಬಾಗಿಲು ಬಡಿದ ಅಭಿಷೇಕ್ ಕೃತಿ ಬಾಗಿಲು ತೆರೆದ ಕೂಡಲೇ ಒಳಹೋಗಿದ್ದ. ನಂತರ ಕೆಲವು ಸೆಕೆಂಡ್‌ನಲ್ಲಿ ಆಕೆ ಆತನಿಂದ ಪಾರಾಗಲು ಹೊರಗೋಡಿ ಬಂದಿದ್ದು, ಆಕೆಯನ್ನು ಕಾರಿಡಾರ್‌ನಲ್ಲೇ ತಡೆದ ಪಾತಕಿ ಮನಬಂದಂತೆ ಇರಿದಿದ್ದ.
ಪ್ರಾಣ ಉಳಿಸಿಕೊಳ್ಳಲು ಕೃತಿ ಕುಮಾರಿ ಒದ್ದಾಡಿದ್ದಳು. ರಕ್ತದ ಮಡುವಿನಲ್ಲಿದ್ದ ಕೃತಿ ಕುಮಾರಿ ಆರ್ತನಾದ ಮಾಡಿದರೂ ಪಿಜಿಯಲ್ಲಿದ್ದ ಮೂವರು ಯುವತಿ ನೋಡಿಯೂ ಸಹಾಯಕ್ಕೆ ಹತ್ತಿರ ಬಂದಿರಲಿಲ್ಲ. ಮಾನವೀಯತೆಯನ್ನೇ ಮರೆತಂತೆ ವರ್ತಿಸಿದ ಇವರು ಕೃತಿ ಕುಮಾರಿಯ ಹತ್ತಿರ ಕೂಡ ಹೋಗಿರಲಿಲ್ಲ. ಕೈಯಲ್ಲಿದ್ದ ಮೊಬೈಲ್ ಫೋನ್ ನೋಡ್ತಾ ಆಚೆ ಹೋಗಿದ್ದರು. ಈ ಎಲ್ಲಾ ದೃಶ್ಯಗಳು ಪಿಜಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್ ಆಗಿತ್ತು. ಯುವತಿಯರ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕಿದ್ದರು.