ಬೆಂಗಳೂರು: ಕಾನೂನುಬದ್ಧವಾಗಿಯೇ ಕೆಲಸದ ಸಮಯವನ್ನು 14 ಗಂಟೆಗೆ (14 Hours Work) ವಿಸ್ತರಿಸಬೇಕು ಎನ್ನುವ ಐಟಿ ಕಂಪನಿಗಳ ಪ್ರಸ್ತಾವನೆಯನ್ನು ಪರಿಗಣಿಸಿ 1961ರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆಗೆ ತಿದ್ದುಪಡಿ ತರಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಈ ಮಧ್ಯೆ ಐಟಿ ಉದ್ಯೋಗಿಗಳು ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಕಾರ್ಮಿಕ ಇಲಾಖೆ ಎಚ್ಚೆತ್ತುಕೊಂಡು ಈ ಬಗ್ಗೆ ಕಾರ್ಮಿಕ ಸಂಘಟನೆಗಳ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ.
ಸರ್ಕಾರದ ಸೂಚನೆಯಂತೆ ಕಾರ್ಮಿಕ ಇಲಾಖೆಯು ಐಟಿ, ಬಿಟಿ ಕಂಪನಿಗಳಷ್ಟೇ ಅಲ್ಲ, ಇತರ ಖಾಸಗಿ ಸಂಸ್ಥೆಗಳ ಕಾರ್ಮಿಕ ಸಂಘಟನೆಗಳು, ಉದ್ಯೋಗದಾತರ ಅಭಿಪ್ರಾಯವನ್ನು ಕೇಳಲು ತೀರ್ಮಾನಿಸಿದೆ.
ಭಾರಿ ವಿರೋಧ
ಕೆಲಸದ ಅವಧಿ ಹೆಚ್ಚಳ ಮಾಡುವುದಕ್ಕೆ ಈಗಾಗಲೇ ಕಾರ್ಮಿಕ ಸಂಘಟನೆಗಳಿಂದ ಭಾರಿ ವಿರೋಧ
ವ್ಯಕ್ತವಾಗಿದೆ. ”ಕೆಲಸದ ಅವಧಿಯನ್ನು12 ಗಂಟೆಗೆ ಹೆಚ್ಚಿಸಿರುವುದೇ ಕಾರ್ಮಿಕ ವಿರೋಧಿ
ನೀತಿಯಾಗಿದೆ. ಅದನ್ನು ಮತ್ತೆ 2 ತಾಸು ಹೆಚ್ಚಳ ಮಾಡಿದ್ದಲ್ಲಿ ಜೀವ ವಿರೋಧಿ ನೀತಿಯಾಗುತ್ತದೆ.
ಹೆಚ್ಚುತ್ತಿರುವ ಕೆಲಸದ ಅವಧಿ, ಒತ್ತಡ, ದೈಹಿಕ ಚಟುವಟಿಕೆ ಕೊರತೆಯಿಂದ ಯುವ ಜನಾಂಗ
ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆʼʼ ಎಂದು ಕಾರ್ಮಿಕ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.
14 ಗಂಟೆ ಕಾರ್ಯ ನಿರ್ವಹಿಸಿ ವಾರದಲ್ಲಿ 3 ದಿನ ರಜೆ ಲಭಿಸುವುದರಿಂದ ಉದ್ಯೋಗಿಗಳು ಕುಟುಂಬದೊಂದಿಗೆ ಕಾಲ ಕಳೆಯಬಹುದು. ಇದರಿಂದ ಉದ್ಯೋಗಿಗಳಿಗೆ ಪ್ರಯಾಣ ವೆಚ್ಚ, ಸಮಯ ಉಳಿತಾಯವಾಗುತ್ತದೆ ಎಂಬುದು ಉದ್ಯಮಿಗಳ ಸಮಜಾಯಿಷಿ. ಹೀಗಾಗಿ ಕೆಲಸದ ಅವಧಿ ವಿಸ್ತರಿಸುವ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ಕಾರ್ಮಿಕ ಇಲಾಖೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಸಮೀಪದ ಸಂಭ್ರಮ ಸಭಾಂಗಣದಲ್ಲಿ ಅಕ್ಟೋಬರ್ 8ರಂದು ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ವೇಳೆ ಕೆಲಸದ ಅವಧಿ ವಿಸ್ತರಣೆ ಸಂಬಂಧ ಅಭಿಪ್ರಾಯ ಸಂಗ್ರಹಿಸಿ ಅದರ ಆಧಾರದಲ್ಲಿ ಸರ್ಕಾರ ನಿಯಮಾವಳಿ ರೂಪಿಸಲಿದೆ ಎಂದು ಮೂಲಗಳು ತಿಳಿಸಿವೆ.
ಆರೋಗ್ಯದ ಮೇಲೆ ಪರಿಣಾಮ
ಐಟಿ ಉದ್ಯೋಗಿಗಳ ಕೆಲಸದ ಸಮಯವನ್ನು 14 ಗಂಟೆಗೆ ಏರಿಸಬೇಕು ಎನ್ನುವ ಚಿಂತನೆಯನ್ನು ಸರ್ಕಾರ ಪ್ರಕಟಿಸಿದಾಗಲೇ ವೈದ್ಯರು ಆತಂಕ ವ್ಯಕ್ತಪಡಿಸಿದ್ದರು. ಅತಿಯಾದ ಕೆಲಸದಿಂದ ಉಂಟಾಗುವ ಅಸಂಖ್ಯಾತ ಅಡ್ಡಪರಿಣಾಮಗಳ ಬಗ್ಗೆ ತಜ್ಞರು ಎಚ್ಚರಿಸಿದ್ದರು. ಕೇವಲ 24 ಗಂಟೆಗಳಿರುವ ದಿನದಲ್ಲಿ ನೌಕರರು 14 ಗಂಟೆಗಳ ಕಾಲ ಕೆಲಸ ಮಾಡಿದರೆ ಹೆಚ್ಚುವರಿ 1-2 ಗಂಟೆಗಳ ಸಮಯವನ್ನು ಪ್ರಯಾಣಕ್ಕಾಗಿ ಮೀಸಲಿಡುತ್ತಾರೆ. ಇದರಿಂದ ಅವರು ನಿದ್ರೆ ಮತ್ತು ವ್ಯಾಯಾಮಕ್ಕೆ ಸಮಯವನ್ನು ಹೇಗೆ ಹೊಂದಿಸಿಕೊಳ್ಳುವುದು, ಕುಟುಂಬಕ್ಕೆ ಸಮಯವನ್ನು ಹೇಗೆ ಕೊಡುವುದು ಎಂದು ಪ್ರಶ್ನಿಸಿದ್ದರು.
ಈ ಸುದ್ದಿಯನ್ನೂ ಓದಿ: Kasturirangan Report: ಒತ್ತುವರಿ ತೆರವಿಗೆ ಶೃಂಗೇರಿ ಕ್ಷೇತ್ರದ ಶಾಸಕರ ರಹಸ್ಯ ಸಹಕಾರ? ಅರಣ್ಯ ಸಚಿವರಿಂದ ಬಹಿರಂಗ!
ಆರೋಗ್ಯಕರ ಜೀವನಕ್ಕೆ ಪ್ರತಿ ರಾತ್ರಿ 7-8 ಗಂಟೆಗಳ ನಿದ್ದೆ ಅಗತ್ಯವಿರುತ್ತದೆ. 6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಜನರು ಅಧಿಕ ತೂಕ, ಬೊಜ್ಜು, ಟೈಪ್ 2 ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್, ಮಾನಸಿಕ ಅಸ್ವಸ್ಥತೆ ಮತ್ತು ಅಕಾಲಿಕ ಮರಣದ ಅಪಾಯವನ್ನು ಹೊಂದಿರುತ್ತಾರೆ. ದಿನಕ್ಕೆ 14 ಗಂಟೆಗಳ ಕಾಲ ಕೆಲಸ ಮಾಡುವುದು ಅನಿವಾರ್ಯವಾಗಿ ನಿದ್ರೆಯ ತೀವ್ರ ಅಭಾವ ಮತ್ತು ಈ ಸಂಬಂಧಿತ ಆರೋಗ್ಯದ ಅಪಾಯಗಳಿಗೆ ಕಾರಣವಾಗುತ್ತದೆ ಎನ್ನುವುದು ಅವರ ವಾದ.