ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು 20 ಕೋಟಿ ಅನುದಾನ ಘೋಷಿಸಿದ್ದಾರೆ.
ಶುಕ್ರವಾರ ಚೊಚ್ಚಲ ಬಜೆಟ್ ಮಂಡಿಸಿದ ಸಿಎಂ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು 20 ಕೋಟಿ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ ರಾಜ್ಯಮಟ್ಟದಲ್ಲಿ ಯಕ್ಷಗಾನ ಸಮ್ಮೇಳನ ಆಯೋಜಿ ಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ವಿಶಿಷ್ಟ ಕಲೆಗಳ ಉತ್ತೇಜನಕ್ಕೆ ಸಾಂಸ್ಕೃತಿಕ ಶಿಬಿರವನ್ನು ನಡೆಸಲಾಗುವುದು. ಪ್ರತೀ ವಿಭಾಗ ಮಟ್ಟದಲ್ಲಿ ಒಟ್ಟು 4 ಸಾಂಸ್ಕೃತಿಕ ಶಿಬಿರ ಆಯೋಜಿಸ ಲಾಗುತ್ತದೆ. ಕರ್ನಾಟಕದ ಹೆಸರಾಂತ ಸಾಹಿತಿಗಳ ಸಾಹಿತ್ಯ ಪ್ರಚಾರಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಡಾ.ಸಿದ್ದಲಿಂಗಯ್ಯ, ಡಾ.ಎಂ.ಚಿದಾನಂದ ಮೂರ್ತಿ, ಚನ್ನವೀರ ಕಣವಿ, ಡಾ.ಚಂದ್ರಶೇಖರ ಪಾಟೀಲ್ ಅವರ ಸಾಹಿತ್ಯ ಪ್ರಚಾರಕ್ಕಾಗಿ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.
ಕರ್ನಾಟಕದ ಗಡಿಯಲ್ಲಿರುವ ಕಾಸರಗೋಡು, ಅಕ್ಕಲಕೋಟೆ ಮತ್ತು ಗೋವಾದಲ್ಲಿ ಕನ್ನಡ ಭವನ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಹಾವೇರಿಯಲ್ಲಿ ಈ ಬಾರಿ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೊಡ್ಡರಂಗೇಗೌಡರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.