Sunday, 27th October 2024

24 ಗಂಟೆಗಳಲ್ಲಿ ಹೊಸ 24 ರೊನಾ ವೈರಸ್‌ ಪ್ರಕರಣ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ರಾಜ್ಯದಲ್ಲಿ ಕರೋನಾ ಅಬ್ಬರ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ಹೊಸ 24 ಕರೋನಾ ವೈರಸ್‌ ಪ್ರಕರಣಗಳು ಕಂಡುಬಂದಿವೆ. ರಾಜ್ಯದಲ್ಲಿ ಕರೋನಾ ಕಡಿಮೆಯಾಗುತ್ತಿದೆ ಎನ್ನುತ್ತಿರುವಾಗಲೇ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಕಾಣಿಸಿಕೊಳ್ಳುತ್ತಿದ್ದು ಆತಂಕ ಸೃಷ್ಟಿಸಿದೆ.
 24 ಪ್ರಕರಣಗಳು ಸೇರಿ ಕರ್ನಾಟಕದಲ್ಲಿ ಇದುವರೆಗೂ 589 ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ 251 ಜನ ಗುಣಮುಖರಾಗಿದ್ದರೆ, 22 ಜನ ಸಾವನ್ನಪ್ಪಿದ್ದಾರೆ.  ಶುಕ್ರವಾರ ಮಂಡ್ಯ ಜಿಲ್ಲೆ ಒಂದರಲ್ಲಿಯೇ 8 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದ್ದು, ದಾವಣಗೆರೆಯಲ್ಲಿ ಮತ್ತೆ 6 ಸೋಂಕಿತರು ಪತ್ತೆಯಾಗಿದ್ದರೆ, ಬೆಳಗಾವಿಯಲ್ಲಿ ಮೂರು, ದಕ್ಷಿಣ ಕನ್ನಡ ಹಾಗೂ ಕಲಬುರಗಿಯಲ್ಲಿ ತಲಾ 2, ಧಾರವಾಡ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ ಒಂದು ಕೊರೊನಾ ಪಾಸಿಟಿವ್‌ ಕೇಸ್‌ ಶುಕ್ರವಾರ ಪತ್ತೆಯಾಗಿದೆ. ಇನ್ನು, ರಾಜ್ಯದ 3 ಜಿಲ್ಲೆಗಳನ್ನು ರೆಡ್‌ ಝೋನ್‌ನಲ್ಲಿ ಕೇಂದ್ರ ಸರಕಾರ ಹೆಸರಿಸಿದ್ದು, 13 ಜಿಲ್ಲೆಗಳು ಆರೆಂಜ್‌ ಝೋನ್‌ ಹಾಗೂ 14 ಜಿಲ್ಲೆಗಳು ಗ್ರೀನ್‌ ಜೋನ್‌ನಲ್ಲಿವೆ ಎಂದು ಕೇಂದ್ರ ತಿಳಿಸಿದೆ.
 ಶುಕ್ರವಾರ ಒಂದೇ ದಿನ 8 ಕರೋನಾ ಪಾಸಿಟಿವ್‌ ಪ್ರಕರಣಗಳು ಮಂಡ್ಯದಲ್ಲಿ ಪತ್ತೆಯಾಗಿದ್ದು, ಸಕ್ಕರೆ ನಾಡಿನ ಜನರನ್ನು ಆತಂಕಕ್ಕೆ ತಳ್ಳಿದೆ. ಮಂಡ್ಯದ 8 ಹೊಸ ಪ್ರಕರಣಗಳ ಪೈಕಿ ಮಂಬೈನಿಂದ ಸುಳ್ಳು ದಾಖಲೆ ಸೃಷ್ಟಿಸಿ ಶವ ತಂದವರ ಸಂಬಂಧಿಕರೇ ಮೂವರಿದ್ದಾರೆ. ಈ ಮೂವರೂ ಕೂಡ ಕ್ವಾರಂಟೈನ್‌ನಲ್ಲಿ ಇರಲಿಲ್ಲ ಎನ್ನಲಾಗಿದೆ. ಏ.23ರಂದು ಮಂಡ್ಯದ ಕೊಡಗಹಳ್ಳಿಗೆ ಮುಂಬೈನಿಂದ ಶವ ತರಲಾಗಿತ್ತು. ಈಗ ಮೃತ ವ್ಯಕ್ತಿಯ ಮಗ, ಮಗಳು, ಮೊಮ್ಮಗಳಿಗೆ ಕೊರೊನಾ ಸೋಂಕು ದೃಢವಾಗಿದೆ. ಕೆ.ಆರ್‌.ಪೇಟೆಯಲ್ಲಿರುವ ಮತ್ತೊಬ್ಬ ಮಹಿಳೆಗೂ ಸೋಂಕು ದೃಢಪಟ್ಟಿದೆ. ಇನ್ನು, ಜಿಲ್ಲೆಯ ಮಳವಳ್ಳಿಯಲ್ಲಿ ಒಟ್ಟು ನಾಲ್ವರಲ್ಲಿ ಸೋಂಕು ಪತ್ತೆಯಾಗಿದ್ದು, ಇವರೆಲ್ಲರೂ ತಗ್ಲಿಘಿಗಳ ಜತೆ ಸಂಪರ್ಕ ಹೊಂದಿವರೇ ಆಗಿದ್ದಾರೆ. ಮಳವಳಿಯಲ್ಲಿ ಒಬ್ಬನಿಂದಲೇ 4 ಜನಕ್ಕೆ ಸೋಂಕು ತಗುಲಿದೆ.
 ಮಂಡ್ಯದಲ್ಲಿ 8 ಕರೋನ ಪಾಸಿಟಿವ್‌ ಕಂಡುಬಂದಿದ್ದರೆ. ಗ್ರೀನ್‌ ಜೋನ್‌ಗೆ ಹೋಗಿದ್ದ ದಾವಣಗೆರೆಯಲ್ಲಿ ಮತ್ತೆ 6 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, ಕಳೆದ ಒಂದು ತಿಂಗಳಿಂದ ದಾವಣಗೆರೆಯಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡಿದ್ದಿಲ್ಲ. ಆದರೆ, ಬುಧವಾರ ಹಾಗೂ ಗುರುವಾರ ತಲಾ ಒಂದು ಪ್ರಕರಣ ಕಂಡುಬಂದಿದ್ದವು. ಬುಧವಾರ ಸೋಂಕು ದೃಢಪಟ್ಟಿದ್ದ ನರ್ಸ್‌ ಪುತ್ರನಿಗೆ ಕೊರೊನಾ ದೃಢವಾಗಿದೆ.
 ಗುರುವಾರ ಸೋಂಕಿಗೆ ತುತ್ತಾಗಿದ್ದ ವೃದ್ಧನ ಕುಟುಂಬದಲ್ಲಿ ಐವರಿಗೆ ಸೋಂಕು ತಗುಲಿದ್ದು, ಒಂದು ವರ್ಷದ ಮಗು, ಮೂವರು ಸೊಸೆಯಂದಿರು ಹಾಗೂ ಆತನ ಮಗನಿಗೆ ಕೊರೊನಾ ಇರುವುದು ಖಚಿತವಾಗಿದೆ. ಆದರೆ, ಈ ಸೋಂಕಿನ ಮೂಲ ಹುಡುಕುವುದೇ ಜಿಲ್ಲಾಡಳಿತಕ್ಕೆ ದೊಡ್ಡ ಕೆಲಸವಾಗಿದ್ದು, ಎಲ್ಲಿಂದ ಇವರಿಗೆ ಸೋಂಕು ಬಂತು ಎಂಬುದೇ ಗೊತ್ತಾಗುತ್ತಿಲ್ಲ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಮೂರು ಪ್ರಕರಣಗಳು ಕಂಡುಬಂದಿದ್ದು, ಮೂವರಿಗೂ ಒಬ್ಬರಿಂದಲೇ ಸೋಂಕು ಬಂದಿರುವುದು ದೃಢವಾಗಿದೆ. ಇನ್ನು, ಕಲಬುರಗಿಯಲ್ಲಿ 2 ಪ್ರಕರಣಗಳು ಕಂಡುಬಂದಿದ್ದರೆ, ದಕ್ಷಿಣ ಕನ್ನಡದಲ್ಲಿಯೂ ಎರಡು ಪಾಸಿಟಿವ್‌ ಕೇಸ್‌ಗಳು ದೃಢವಾಗಿವೆ. ಇನ್ನು, ವಿಜಯಪುರ, ಚಿಕ್ಕಬಳ್ಳಾಪುರ ಹಾಗೂ ಹುಬ್ಬಳ್ಳಿಯಲ್ಲಿ ತಲಾ ಒಂದು ಪ್ರಕರಣ ಕಂಡುಬಂದಿದ್ದು, ಸೋಂಕು ಕಡಿಮೆಯಾಗುವ ಯಾವುದೇ ಲಕ್ಷಣಗಳು ಈ ಜಿಲ್ಲೆಗಳಲ್ಲಿ ಕಂಡುಬರುತ್ತಿಲ್ಲ.
ಹೆಚ್ಚು ಕರೋನಾ ಸೋಂಕಿತ ಜಿಲ್ಲೆಗಳು 
ಬೆಂಗಳೂರು ನಗರ 141
ಮೈಸೂರು 88
ಬೆಳಗಾವಿ 70
ಕಲಬುರಗಿ 55
ವಿಜಯಪುರ 44
 ಬಾಗಲಕೋಟೆ 29
ಚಿಕ್ಕಬಳ್ಳಾಪುರ 19
ಬೀದರ್‌ 14
ದಕ್ಷಿಣ ಕನ್ನಡ 18
ಬಳ್ಳಾರಿ 13
ಬೆಂಗಳೂರು ಗ್ರಾಮಾಂತರ 06
ಮಂಡ್ಯ 26
ಉತ್ತರ ಕನ್ನಡ 11
 ಧಾರವಾಡ  10