ಬೆಂಗಳೂರು: ದ್ವಿತೀಯ ಪಿಯುಸಿ ಲಿಖಿತ ಪರೀಕ್ಷೆಯಲ್ಲಿ (2nd PUC Exam) ಮತ್ತೊಂದು ಪ್ರಯೋಗಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (Karnataka School Examination and Assessment Board) ಮುಂದಾಗಿದೆ. ದ್ವಿತೀಯ ಪಿಯು ಪರೀಕ್ಷೆ ಅವಧಿ ಇಳಿಕೆ ಮಾಡಿ ಸುತ್ತೋಲೆ ಹೊರಡಿಸಿದೆ. ಜೊತೆಗೆ ಒಟ್ಟಾರೆ ಅಂಕಗಳು ಕೂಡ 100 ಇರುವುದಿಲ್ಲ.
ಹೊಸ ನಿಯಮ ಈ ವರ್ಷ ಅನುಷ್ಠಾನಗೊಳಿಸಲು ಮಂಡಳಿ ಸಜ್ಜಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಬರೆಯುವ ಸಮಯದ ಅವಧಿ ಕಡಿತಗೊಳಿಸಲು ಮಂಡಳಿ ಮುಂದಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಯ ಅವಧಿಯನ್ನು 15 ನಿಮಿಷಗಳ ಕಾಲ ಇಳಿಕೆ ಮಾಡುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಘೋಷಿಸಿದೆ. ಇದರಿಂದಾಗಿ, 3 ಗಂಟೆಗಳ ಕಾಲ ಬರೆಯಬೇಕಿದ್ದ ಪರೀಕ್ಷೆ ಅವಧಿ 2 ಗಂಟೆ 45 ನಿಮಿಷಕ್ಕೆ ಇಳಿಕೆಯಾಗಲಿದೆ.
ಆದರೆ, ಪರೀಕ್ಷೆಯ ಅವಧಿ ಕಡಿತವಾದರೂ ವಿದ್ಯಾರ್ಥಿಗಳು ಪರೀಕ್ಷಾ ಹಾಲ್ನಲ್ಲಿ ಮೂರು ಗಂಟೆ ಇರಬೇಕಾಗುತ್ತದೆ. ಅಂದರೆ, ಪರೀಕ್ಷೆಯ ಆರಂಭದ 15 ನಿಮಿಷವನ್ನು ಪ್ರಶ್ನೆಗಳನ್ನು ಓದಿಕೊಳ್ಳಲು ಬಳಸಲು ಅವಕಾಶ ನೀಡಲಾಗುತ್ತದೆ. ಲಿಖಿತ ಬರವಣಿಗೆಗೆ ಮಾತ್ರ 2 ಗಂಟೆ 45 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ 100 ಅಂಕಕ್ಕೆ ಬದಲು 80 ಅಂಕಕ್ಕೆ ಪರೀಕ್ಷೆ ಬರೆಯುವಂತೆ ಮಾಡಲಾಗುತ್ತದೆ. ಇದೇ ಶೈಕ್ಷಣಿಕ ವರ್ಷದಿಂದ ಹೊಸ ನಿಯಮ ಜಾರಿಗೊಳಿಸಲಾಗುವುದು ಎಂದು ಮಂಡಳಿ ಮಾಹಿತಿ ನೀಡಿದೆ.
ಇದನ್ನೂ ಓದಿ: PSI Exam: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆ!