Sunday, 15th December 2024

300 ಕ್ಕೂ ಹೆಚ್ಚು ವೈದ್ಯರು ರಾಜೀನಾಮೆ ಸಾಧ್ಯತೆ!

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಹೀಗೆ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ರಾಜ್ಯದ 300ಕ್ಕೂ ಹೆಚ್ಚು ಸರಕಾರ ವೈದ್ಯರು ರಾಜೀನಾಮೆ ಕೊಡಲು ಮುಂದಾಗಿದ್ದಾರೆ. ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟರೂ ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸುವ ಭರವಸೆಯನ್ನು ಕೊಟ್ಟಿದ್ದಾರೆ.
ಸೋಂಕಿತರಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರೊಬ್ಬರು ತಮ್ಮಿಂದ ಮನೆಯವರಿಗೆ ತೊಂದರೆ ಆಗಬಾರದು ಎಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಮನೆಗೆ ಹೋಗದೆ ತಮ್ಮ ಕಾರಿನಲ್ಲಿಯೆ ವಾಸ್ತವ್ಯ ಮಾಡಿದ್ದನ್ನು ಗಮನಿಸಬಹುದು. ಇಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಳಗಾವಿಯ ಭೀಮ್ಸ್ ಆಸ್ಪತ್ರೆಯಲ್ಲಿ‌ ಶುಶ್ರೂಷಕಿಯಾಗಿ ಕೊರೊನಾ ವಾರ್ಡ್‌ನಲ್ಲಿ ಸತತ 15 ದಿನ ಮನೆಗೆ ಹೋಗದೆ, ಮಗುವನ್ನು ನೋಡದೆ ಕಾರ್ಯನಿರ್ವಹಿಸಿದ್ದ ಸುನಂದಾ ಅವರಿಗೆ ಧೈರ್ಯ ತುಂಬಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ನಿದರ್ಶನವುಂಟು.
ರಾಜ್ಯದ ಸರಕಾರ ಆಸ್ಪತ್ರೆಗಳಲ್ಲಿ ಶೇಕಡಾ 30 ರಷ್ಟು ವೈದ್ಯರ ಹುದ್ದೆಗಳು ಖಾಲಿಯಿವೆ. ರಾಜ್ಯಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆಸ್ಪತ್ರಗಳ ಐಸಿಯು, ಐಸೊಲೇಶನ್ ವಾರ್ಡ್‌ಗಳಲ್ಲಿ ದಿನ 24 ಗಂಟೆಗಳು ಕೋವಿಡ್ ಶಂಕಿತರ ಹಾಗೂ ಸೋಂಕಿತರ ನಿಗಾವಣೆಗೆ ನೇಮಕ ಮಾಡಿಕೊಳ್ಳಲು ಸೂಚಿಸಿಲಾಗಿತ್ತು.
ಹೊಸದಾಗಿ ನೇಮಕ ಮಾಡಿಕೊಳ್ಳುವ ವೈದ್ಯರಿಗೆ ಮಾಸಿಕ 60 ಸಾವಿರ ರು.ಗಳ ವೇತನ ನಿಗದಿ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾಗೂ ರಾಜ್ಯದ ಇತರ ಜಿಲ್ಲೆಗಳ ಸರಕಾರ ಆಸ್ಪತ್ರೆಗಳಿಗೆ ವೈದ್ಯರ ನೇಮಕಾತಿಗೆ ಅರ್ಜಿ ಕರೆಯಲಾಗಿತ್ತು. ಕಳೆದ 3 ರಿಂದ 7 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ವೈದ್ಯರು ರಾಜೀನಾಮೆಗೆ ಮುಂದಾಗಿದ್ದಾರೆ. ಇದಕ್ಕೆ ಕಾರಣವೂ ಇದೆ.
ಕರೋನಾ ಹೋರಾಟದಲ್ಲಿರುವ ಗುತ್ತಿಗೆ ವೈದ್ಯರ ಕಡೆಗಣನೆ
ಕಳೆದ 3 ರಿಂದ 7 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ವೈದ್ಯರನ್ನು ಸರಕಾರ ಕಡೆಗಣಿಸುತ್ತಿದೆ ಎಂದು ಸುಮಾರು 300ಕ್ಕೂ ಹೆಚ್ಚಿನ ಗುತ್ತಿದೆ ವೈದ್ಯರು ಆರೋಪಿಸಿದ್ದಾರೆ. ಕೊರೊನಾ ಹೋರಾಟದಲ್ಲಿ ಹಗಲು ರಾತ್ರಿ ಎನ್ನದೆ ದುಡಿಯತ್ತಿದ್ದೇವೆ. ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಕಳೆದ 3 ರಿಂದ 7 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 300 ಗುತ್ತಿಗೆ ವೈದ್ಯರನ್ನು ಖಾಯಂ ಮಾಡಿಲ್ಲ. ವೇತನದಲ್ಲಿಯೂ ಸಾಕಷ್ಟು ತಾರತಮ್ಯವಿದೆ. ಇದೀಗ ನೇಮಕ ಮಾಡಿಕೊಳ್ಳುತ್ತಿರುವ ವೈದ್ಯರಿಗೆ 60 ಸಾವಿರ ರೂಪಾಯಿ ವೇತನ ನಿಗದಿ ಮಾಡಲಾಗಿದೆ. ಆದರೆ ಈ ಹಿಂದಿನಿಂದಲೂ ಕೆಲಸ ಮಾಡುತ್ತಿರುವ ವೈದ್ಯರಿಗೆ ಮಾತ್ರ ಪ್ರತಿ ತಿಂಗಳು 45 ಸಾವಿರ ರೂ. ಸಂಬಳ ಕೊಡಲಾಗುತ್ತಿದ್ದು, ಇದು ತಾರತಮ್ಯವಾಗಿದೆ ಎಂದು ವೈದ್ಯರು ಆರೋಪಿಸಿದ್ದಾರೆ. ಹೀಗಾಗಿ ಸರ್ಕಾರಿ ವೈದ್ಯ ಹುದ್ದೆಗೆ ರಾಜೀನಾಮೆ ಕೊಡ್ತೀವಿ, ರಾಜೀನಾಮೆ ಕೊಟ್ಟ ಬಳಿಕವೂ ಕೊರೊನಾ ವಿರುದ್ಧವೂ ಹೋರಾಡುತ್ತೇವೆ ಎಂದು ಗಾಂಧಿಗಿರಿ ಆರಂಭಿಸಿದ್ದಾರೆ.
ಗುತ್ತಿಗೆ ವೈದ್ಯರ ವೈದ್ಯರ ಬೇಡಿಕೆಗಳು
ರಾಜ್ಯದ ಸರಕಾರ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರನ್ನು 3 ವರ್ಷಗಳಿಗೊಮ್ಮೆ ಖಾಯಂ ಮಾಡುವ ಸಂಪ್ರದಾಯವಿದೆ. ಆದರೆ ಕಳೆದ 7 ವರ್ಷಗಳಿಂದ ಗುತ್ತಿಗೆ ವೈದ್ಯರನ್ನು ಖಾಯಂ ಮಾಡಿಲ್ಲ. ಹಳ್ಳಿಗಳಿಗೆ ಹೋಗಿ ಕೆಲಸ ಮಾಡಿ ಎಂದು ಹೇಳುವ ಸರಕಾರದಿಂದ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡುತ್ತಿಲ್ಲ. ಖಾಯಂಗೊಂಡಿರುವ ಸರ್ಕಾರಿ ವೈದ್ಯರಿಗೆ ಮಾಸಿಕ 80 ಸಾವಿರ ರೂಪಾಯಿ. ವೇತನವಿದೆ.
ಹೀಗಾಗಿ ವೇತನ ತಾರತಮ್ಯವನ್ನು ಸರಿಮಾಡಿ ಎಲ್ಲರಿಗೂ ಸಮಾನ ವೇತನ ನಿಗದಿ ಮಾಡಬೇಕು. ಜೊತೆಗೆ ಕಳೆದ ಅನೇಕ ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವೈದ್ಯರನ್ನು ಖಾಯಂ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಪತ್ರ ಬರೆದಿದ್ದಾರೆ.
ಮೊದಲ ಹಂತದಲ್ಲಿ ಸಿಎಂ ಮತ್ತು ಆರೋಗ್ಯ ಸಚಿವರಿಗೆ ಗುತ್ತಿಗೆ ವೈದ್ಯರು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಮುಂದೆ ಎರಡನೇ ಹಂತದಲ್ಲಿ ಎಲ್ಲಾ ವೈದ್ಯರಿಂದ ಸಾಮೂಹಿಕ ರಾಜೀನಾಮೆ ಕೊಡುವ ಮಾಹಿತಿಯಿದೆ. ಅಷ್ಟರೊಳಗೆ ಸರ್ಕಾರ ವೇತನ ತಾರತಮ್ಯ ನೀಗಿಸಿ ಎಲ್ಲರಿಗೂ ಸಮಾನ ವೇತನ ನಿಗದಿ ಮಾಡಬೇಕಿದೆ. ಜೊತೆಗೆ ನಿಯಮದಂತೆ ಗುತ್ತಿಗೆ ವೈದ್ಯರನ್ನು ಖಾಯಂಗೊಳಿಸುವ ಪ್ರಕ್ರಿಯೆ ಆರಂಭಿಸಬೇಕಿದೆ.