Wednesday, 23rd October 2024

31ನೇ ಜಿಲ್ಲೆಯಾಗಿ ವಿಜಯನಗರ ಉದಯ

ರಾಜ್ಯ ಸರಕಾರದಿಂದ ಅಧಿಕೃತ ಘೋಷಣೆ

ಸಚಿವ ಆನಂದ್ ಸಿಂಗ್ ಬೇಡಿಕೆ ಈಡೇರಿಸಿದ ಸಿಎಂ ಯಡಿಯೂರಪ್ಪ

ವಿಶೇಷ ವರದಿ: ಅನಂತ ಪದ್ಮನಾಭ ರಾವ್

ಬಳ್ಳಾರಿ: ರಾಜ್ಯ ಸರಕಾರವು ಅಧಿಕೃತವಾಗಿ 31ನೇ ಜಿಲ್ಲೆೆಯಾಗಿ ಹೊಸಪೇಟೆ ಕೇಂದ್ರವನ್ನಾಗಿಸಿ ವಿಜಯನಗರ ಜಿಲ್ಲೆಯನ್ನು ಘೋಷಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ಬೇಡಿಕೆಯನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಪರ, ವಿರೋಧದ ನಡುವೆಯೇ ಘೋಷಿಸುವ ಮೂಲಕ ಈಡೇರಿಸಿದ್ದಾರೆ. ಬಳ್ಳಾರಿ ಜಿಲ್ಲೆ ವಿಭಜನೆಗೆ ಅಂತಿಮ ಒಪ್ಪಿಗೆ ನೀಡಿದ ಬಳಿಕ, ಈಗ ವಿಜಯ ನಗರ ಜಿಲ್ಲೆಗೆ 6 ತಾಲೂಕುಗಳಿದ್ದು ಬಳ್ಳಾರಿ ಜಿಲ್ಲೆಯಲ್ಲಿ 5 ತಾಲೂಕುಗಳು ಮಾತ್ರ ಉಳಿದಿವೆ. 11ರಿಂದ 5 ತಾಲೂಕುಗಳಿಗೆ ಇಳಿದು ವಿಜಯನಗರ ಜಿಲ್ಲೆಗಿಂತಲೂ ಕ್ಷೇತ್ರ ಮತ್ತು ವಿಸ್ತೀರ್ಣದಲ್ಲಿ ಬಳ್ಳಾರಿ ಜಿಲ್ಲೆ ಕಿರಿದಾಗಿದೆ.

ಬಳ್ಳಾರಿ ಹಿನ್ನೆಲೆ: ರಾಜರ ಆಡಳಿತ ಮುಗಿದು, ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ ಬಳಿಕ ಬಳ್ಳಾರಿ ಜಿಲ್ಲೆಯಲ್ಲಿ 15 ತಾಲೂಕು ಗಳಿದ್ದವು. ಪ್ರಸ್ತುತ 5ಕ್ಕೆ ಇಳಿಯುವವರೆಗೆ ತನ್ನ ವ್ಯಾಪ್ತಿಯ ತಾಲೂಕುಗಳನ್ನು ಆಡಳಿತದ ಅನುಕೂಲಕ್ಕಾಗಿ ಬಿಟ್ಟುಕೊಡುತ್ತಾ ಬಳ್ಳಾರಿಯು ಹಲವು ಬಾರಿ ವಿಭಜನೆಗೊಂಡ ಚರಿತ್ರೆಯೂ ದಾಖಲಾಗಿದೆ.

ಸರ್ ಥಾಮಸ್ ಮನ್ರೋ ಮದ್ರಾಸ್ ಪ್ರಾಂತ್ಯದ ಗವರ್ನರ್ ಆಗಿದ್ದ ಸಂದರ್ಭದಲ್ಲಿ, 1808ರಲ್ಲಿ ಕಡಪ ಮತ್ತು ಬಳ್ಳಾರಿ ಜಿಲ್ಲೆ ಗಳನ್ನು ಪ್ರತ್ಯೇಕಗೊಳಿಸಲಾಗಿತ್ತು. ಬಳ್ಳಾರಿಯಲ್ಲಿ ಆಗ ಧರ್ಮಾವರಂ, ಪೆನುಕೊಂಡ, ಹಿಂದೂ ಪುರ, ಮಡಕಶಿರ, ಗುತ್ತಿ, ತಾಡ ಪತ್ರಿ, ಅನಂತಪುರ, ಬಳ್ಳಾರಿ, ಹೊಸಪೇಟೆ, ಕೂಡ್ಲಿಗಿ, ಹಡಗಲಿ, ಹರಪ ನಹಳ್ಳಿ, ರಾಯ ದುರ್ಗ, ಆಲೂರು ಮತ್ತು ಆದೋನಿ ತಾಲೂಕುಗಳು ಸೇರ್ಪಡೆ ಯಾಗಿದ್ದವು ಎಂದು ಬಳ್ಳಾರಿ ಜಿಲ್ಲಾ ಗೆಜೆಟಿಯರ್‌ನಲ್ಲಿ ದಾಖಲಾಗಿದೆ.

1882ರಲ್ಲಿ ವಿಭಜನೆ: ಗೆಜೆಟಿಯರ್ ಪ್ರಕಾರ 1882ರಲ್ಲಿ ಮತ್ತೆ ಬಳ್ಳಾರಿಯನ್ನು ವಿಭಜಿಸಿ ಧರ್ಮಾವರಂ, ಪೆನುಕೊಂಡ, ಹಿಂದೂ ಪುರ, ಮಡಕಶಿರ, ಗುತ್ತಿ, ತಾಡಪತ್ರಿ, ಅನಂತಪುರವನ್ನು ಸೇರಿಸಿ ಅನಂತಪುರ ಜಿಲ್ಲೆಯನ್ನು ರಚಿಸಲಾಗಿತ್ತು. ಉಳಿದ 8 ತಾಲೂಕು ಗಳನ್ನು ಬಳ್ಳಾರಿಯಲ್ಲಿ ಉಳಿಸಲಾಗಿತ್ತು. ಆಗ ರಾಯದುರ್ಗ, ಬಳ್ಳಾರಿ, ಆದೋನಿ, ಹೊಸಪೇಟೆ ಉಪವಿ ಭಾಗಗಳನ್ನು ರಚಿಸ ಲಾಗಿತ್ತು. 1910ರಲ್ಲಿ ಸಿರುಗುಪ್ಪ, ಬಳ್ಳಾರಿ ತಾಲೂಕಿನ 46 ಗ್ರಾಮ, ಆಲೂರಿನ 29, ಆದೋನಿಯ 23 ಗ್ರಾಮಗಳನ್ನು ಬೇರ್ಪಡಿಸಿ 1919ರ ಅ.1ರಂದು ಸಿರುಗುಪ್ಪ ತಾಲೂಕನ್ನು ರಚಿಸಲಾಯಿತು.

ಆ ಮೂಲಕ 9 ತಾಲೂಕುಗಳು ಆಗ ಅಸ್ತಿತ್ವದಲ್ಲಿದ್ದವು. ಮತ್ತೆ 1923ರ ಏಪ್ರಿಲ್ 1ರಂದು ಸಿರುಗುಪ್ಪ ತಾಲೂಕನ್ನು ರದ್ದುಗೊಳಿಸಿ ಬಳ್ಳಾರಿಗೆ 46 ಗ್ರಾಮ, ಆದೋನಿಗೆ 42 ಗ್ರಾಮ ಮತ್ತು ಆಲೂರಿಗೆ 6 ಗ್ರಾಮಗಳನ್ನು ವಾಪಸ್ ನೀಡಲಾಗಿತ್ತು. ಅದೇ ಸಮಯದಲ್ಲೇ ಬಳ್ಳಾರಿಯ 10 ಗ್ರಾಮಗಳನ್ನು ರಾಯದುರ್ಗ ತಾಲೂಕಿಗೆ ವರ್ಗಾಯಿಸಲಾಗಿತ್ತು. 1929ರ ಏಪ್ರಿಲ್ 15ರಂದು ಮತ್ತೆ, ಬಳ್ಳಾರಿ, ಆದೋನಿ, ಆಲೂರಿನ ಹಲವು ಗ್ರಾಮಗಳನ್ನು ಸೇರಿಸಿ ಸಿರುಗುಪ್ಪ ತಾಲೂಕನ್ನು ರಚಿಸಲಾಯಿತು.

ಹಡಗಲಿಯ 24 ಗ್ರಾಮಗಳನ್ನು ಹರಪನ ಹಳ್ಳಿಗೆ ವರ್ಗಾಯಿಸಿ 1931ರಲ್ಲಿ ಹಡಗಲಿಯನ್ನು ಉಪ ತಾಲೂಕಾಗಿ ಪರಿವರ್ತಿಸ ಲಾಯಿತು. ಒಂದು ದಶಕದ ಬಳಿಕ ಮತ್ತೆ ಅದೇ ಗ್ರಾಮಗಳನ್ನು ಸೇರಿಸಿ ಹಡಗಲಿ ತಾಲೂಕನ್ನು ಮತ್ತೆ ರಚಿಸಲಾಯಿತು. ತುಂಗ
ಭದ್ರಾ ಜಲಾಶಯದಿಂದ ಮುಳುಗಡೆ ಭೀತಿಯಲ್ಲಿದ್ದ ಹೊಸಪೇಟೆ ಮತ್ತು ಹಡಗಲಿಯ ಗ್ರಾಮಗಳನ್ನು ಸೇರಿಸಿ ಮಲ್ಲಾಪುರ ಉಪ
ತಾಲೂಕು ರಚಿಸಲಾಗಿತ್ತು. ಆ ಅವಧಿಯಲ್ಲಿ ಜಿಲ್ಲೆಯಲ್ಲಿ (ಬಳ್ಳಾರಿ, ಸಿರುಗುಪ್ಪ, ಸಂಡೂರು, ಹೊಸಪೇಟೆ, ಹರಪನಹಳ್ಳಿ,
ಹಡಗಲಿ, ಕೂಡ್ಲಿಗಿ, ಆದೋನಿ, ಆಲೂರು ಮತ್ತು ರಾಯದುರ್ಗ) 10 ತಾಲೂಕುಗಳಿದ್ದವು ಎಂದು ಗೆಜೆಟಿಯರ್ ಹೇಳುತ್ತದೆ.

1950ರಲ್ಲಿ ಸಂಡೂರು ಅಸ್ತಿತ್ವಕ್ಕೆ ದೇಶಕ್ಕೆ ಸ್ವಾತಂತ್ರ್ಯ ದೊರಕುವವರೆಗೂ ಸಂಡೂರು ರಾಜಸಂಸ್ಥಾನಕ್ಕೆೆ ಸೇರಿತ್ತು. ರಾಜವಂಶ ಸ್ಥರು 1950ರಲ್ಲಿ ಸೇರ್ಪಡೆ ಕೇಂದ್ರ ಸರಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, ಕೂಡ್ಲಿಗಿಯ ಚೋರನೂರು ಹಾಗೂ ಹೊಸ ಪೇಟೆಯ ತೋರಣಗಲ್ ಹೋಬಳಿಯನ್ನು ಸೇರಿಸಿ ಸಂಡೂರನ್ನು ಬಳ್ಳಾರಿ ಜಿಲ್ಲೆಯ 10ನೇ ತಾಲೂಕಾಗಿ ರಚಿಸಲಾಯಿತು.

ಬಳ್ಳಾರಿ ತಾಲೂಕುಗಳು : ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಸಂಡೂರು, ಕಂಪ್ಲಿ.

ವಿಜಯನಗರದ ತಾಲೂಕುಗಳು: ಹೊಸಪೇಟೆ(ವಿಜಯನಗರ ಜಿಲ್ಲಾ ಕೇಂದ್ರ), ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ,
ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರು.

ವಿಜಯನಗರ ವಿಜಯೋತ್ಸವವನ್ನಾಗಿ ಆಚರಣೆ

ಹೊಸಪೇಟೆ: ನೂತನ ವಿಜಯನಗರ ಜಿಲ್ಲೆ ಸಂಭ್ರಮವನ್ನು ವಿಜಯನಗರ ವಿಜಯೋತ್ಸವವನ್ನಾಗಿ ಆಚರಿಸಲಾಗುವುದು. ಈ ವಿಜಯೋತ್ಸವದ ಕಾರ್ಯಕ್ರಮವನ್ನು ಬೃಹತ್ ವೇದಿಕೆಯಲ್ಲಿ ನಡೆಸುವ ಚಿಂತನೆ ಇದೆ. ಇದಕ್ಕೆ ಕನಿಷ್ಠ ಎರಡು ತಿಂಗಳು ಬೇಕು.
ಇಡೀ ದೇಶ ವಿಜಯನಗರದ ವೈಭವ ನೋಡುವ ರೀತಿಯಲ್ಲಿ ಕಾರ್ಯಕ್ರಮ ಸಂಘಟಿಸಲಾಗುವುದು ಎಂದು ಸಚಿವ ಆನಂದ್ ಸಿಂಗ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯನಗರ ಜಿಲ್ಲೆ ರಚನೆಯಾದ ತಕ್ಷಣ ಬಳ್ಳಾರಿಯೊಂದಿಗಿನ ಸಂಬಂಧ ಕೆಡುವುದಿಲ್ಲ. ವಿಜಯನಗರ ಜಿಲ್ಲೆ ಈ ಭಾಗದ, ಅದರಲ್ಲಿಯೂ ಪಶ್ಚಿಮ ಭಾಗದ ತಾಲೂಕಿನವರ ಬಹು ವರ್ಷಗಳ ಕನಸಾಗಿದೆ. ಬಳ್ಳಾರಿಯಿಂದ ಬೇರೆ ಆದ ಮಾತ್ರಕ್ಕೆ ಬಳ್ಳಾರಿ ಜಿಲ್ಲೆಯ ಸಂಬಂಧ ಮುಗಿಯುತ್ತೆ ಎಂಬ ಕಲ್ಪನೆ ಬೇಡ. ಬಳ್ಳಾರಿ, ಆಂಧ್ರಕ್ಕೆ ಸೇರುತ್ತೆ ಎಂಬ ತಪ್ಪು ಗ್ರಹಿಕೆ ಬೇಡ, ಹಲವು ಜಿಲ್ಲೆಗಳು ಗಡಿ ಭಾಗದಲ್ಲಿವೆ. ವಿಜಯನಗರ ಜಿಲ್ಲೆ ರಚನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುವೆ ಎಂದರು.

ಜಿಲ್ಲೆ ವಿಭಜನೆಗೆ ಆಕ್ರೋಶ
ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆಯನ್ನು ಎರಡು ಭಾಗಗಳಾಗಿ ವಿಭಜಿಸಿ ಅಧಿಕೃತವಾಗಿ ಆದೇಶ ಹೊರಡಿಸಿದ ಸಿಎಂ ಯಡಿಯೂ ರಪ್ಪ ಸರಕಾರದ ವಿರುದ್ಧ ಕರ್ನಾಟಕ ಜನಸೈನ್ಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಗಡಿಗಿ ಚನ್ನಪ್ಪ ವೃತ್ತದಲ್ಲಿ
ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ರಸ್ತೆಗಿಳಿದು ಹೋರಾಟಗಳನ್ನು ಮಾಡುತ್ತಿದ್ದರೂ, ಇದ್ಯಾವುದನ್ನೂ
ಲೆಕ್ಕಿಸದೇ ವಿಜಯನಗರ ಜಿಲ್ಲೆಯ ಆದೇಶವನ್ನು ಹೊರಡಿಸಿ ರಾಜ್ಯ ಸರಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಮಾಡಲಾಗಿದೆ ಎಂದು ಕಿಡಿಕಾರಿದರು. ವಿಜಯನಗರ ಜಿಲ್ಲೆಯ ಅಧಿಕೃತ ಆದೇಶವನ್ನು ಕೂಡಲೇ ಹಿಂಪಡೆಯಬೇಕು,
ಇಲ್ಲದಿದ್ದಲ್ಲಿ ಇಡೀ ಜಿಲ್ಲೆಯಲ್ಲಿ ಅಗು-ಹೋಗುಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.