Monday, 18th November 2024

40% commission: ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣಕ್ಕೆ ಕ್ಲೀನ್‌ ಚಿಟ್‌ ಸಿಕ್ಕಿಲ್ಲ, ತನಿಖೆ ನಡೆಯುತ್ತಿದೆ: ಸಚಿವ ಪ್ರಿಯಾಂಕ್‌ ಖರ್ಗೆ

40% commission

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆಟದ ಮೈದಾನಕ್ಕೆ ಸಂಬಂಧಿಸಿದ ಕೇವಲ ಒಂದು ಕಾಮಗಾರಿಗೆ ಸಂಬಂಧಿಸಿದಂತೆ ಮಾಡಿರುವ ಲೋಕಾಯುಕ್ತ ತನಿಖೆಯಲ್ಲಿ, ಗುತ್ತಿಗೆದಾರ ದಿವಂಗತ ಆರ್. ಅಂಬಿಕಾಪತಿ ಅವರು ಮಾಡಿರುವ ಆರೋಪಗಳು ಸಾಬೀತಾಗಿಲ್ಲ ಎಂದು ಲೋಕಾಯುಕ್ತ ವರದಿ ಸಲ್ಲಿಸಿದೆ. ಆದರೆ, ಇದು ಬಿಜೆಪಿ ಸರ್ಕಾರದ 40% ಹಗರಣಕ್ಕೆ (40% commission) ಸಿಕ್ಕಿರುವ ಕ್ಲೀನ್ ಚಿಟ್ ಅಲ್ಲ, ಅಥವಾ ಅಕ್ರಮದ ನಿರಾಕರಣೆಯೂ ಅಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧದ 40% ಕಮಿಷನ್‌ ಆರೋಪ ಪ್ರಕರಣದಲ್ಲಿ ಲೋಕಾಯುಕ್ತ ಕ್ಲೀನ್‌ ಚಿಟ್‌ ನೀಡಿದ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವರು, ‌40% ಕಮಿಷನ್ ಆರೋಪಗಳ ಬಗ್ಗೆ ಬಿಜೆಪಿ ಸರ್ಕಾರದಲ್ಲಿ 2023ರ ಮಾರ್ಚ್‌ 27ರಂದು ಲೋಕಾಯುಕ್ತ ತನಿಖೆಗೆ ವಹಿಸಲಾಗಿತ್ತು. ಈ ಸಂದರ್ಭದಲ್ಲಿ ಗುತ್ತಿಗೆದಾರದ NDTVಯಲ್ಲಿ ನೀಡಿದ ಹೇಳಿಕೆಯೊಂದನ್ನು ಆಧರಿಸಿ ತನಿಖೆಗೆ ವಹಿಸಿದ ಬಿಜೆಪಿ ಸರ್ಕಾರ, ಇನ್ನುಳಿದ ಆರೋಪಗಳನ್ನು ತನಿಖೆಗೆ ವಹಿಸಲಿಲ್ಲ ಏಕೆ? ಇದಲ್ಲದೆ 40% ಕಮಿಷನ್ ಗೆ ಸಂಬಂಧಿಸಿದಂತೆ ಇನ್ನೂ ಹಲವು ವಿಷಯಗಳ ಬಗ್ಗೆ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದರೂ ಏಕೆ ತನಿಖೆಗೆ ವಹಿಸಲು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

2022ರ ಆ.30ರಂದು ದಿವಂಗತ ಗುತ್ತಿಗೆದಾರ ಆರ್. ಅಂಬಿಕಾಪತಿ ಹಾಗೂ ಗುತ್ತಿಗೆದಾರರ ಸಂಘದ ಇತರ ಪದಾಧಿಕಾರಿಗಳು NDTV ಗೆ ನೀಡಿದ ಹೇಳಿಕೆಯಲ್ಲಿ, ಪಿಡಬ್ಲ್ಯುಡಿ, ಆರೋಗ್ಯ, ವಸತಿ, ಉನ್ನತ ಶಿಕ್ಷಣ, ಸಣ್ಣ ನೀರಾವರಿ ಹೀಗೆ ಹಲವು ಇಲಾಖೆಗಳಲ್ಲಿನ ಕಮಿಷನ್ ಹಾಗೂ ಕೋಲಾರ ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವರಾದ ಮುನಿರತ್ನ ಅವರ ವಿರುದ್ಧ ಲಂಚದ ಆರೋಪ ಹಾಗೂ ಕರ್ನಾಟಕ ಖಾಸಗಿ ಶಾಲಾ ಮಾಲೀಕರ ಎರಡು ಸಂಘಟನೆಗಳ ಲಂಚದ ಆರೋಪ, ಅಲ್ಲದೆ ಪಾವಗಡ ಆಸ್ಪತ್ರೆ ನಿರ್ಮಾಣ ಕಾಮಗಾರಿಯಲ್ಲಿ ಲಂಚದ ಅಕ್ರಮದ ಬಗ್ಗೆ ಆರೋಪಿಸಿದ್ದರು. ಆದರೆ ಹಿಂದಿನ ಬಿಜೆಪಿ ಸರ್ಕಾರ ಕೇವಲ ಬಿಬಿಎಂಪಿ ಪೂರ್ವ ವಲಯಕ್ಕೆ ಸಂಬಂಧಿಸಿದ ಆಟದ ಮೈದಾನ ಕಾಮಗಾರಿಯ ಒಂದು ಆರೋಪವನ್ನು ಮಾತ್ರ ತನಿಖೆಗೆ ವಹಿಸಿತ್ತು, ಇನ್ನುಳಿದ ಆರೋಪಗಳ ಬಗ್ಗೆ ಯಾಕೆ ತನಿಖೆಯಾಗಲಿಲ್ಲ ಎಂದು ಕಿಡಿಕಾರಿದ್ದಾರೆ.

ಲೋಕಾಯುಕ್ತ ವರದಿಯಲ್ಲಿ ಅಂಬಿಕಾಪತಿಯವರು ಮರಣ ಹೊಂದಿರುವ ಕಾರಣ, ಅವರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ, ಹಾಗಾಗಿ ಅಂಬಿಕಾಪತಿಯವರು ಮಾಡಿರುವ ಆಪಾಧನೆಯು ಮೇಲ್ನೋಟಕ್ಕೆ ಸಾಬೀತಾಗಿರುವುದಿಲ್ಲವೆಂದು ವಿಚಾರಣಾಧಿಕಾರಿಗಳು ವಿಚಾರಣಾ ವರದಿಯನ್ನು ಸಲ್ಲಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ತನಿಖಾಧಿಕಾರಿಯು ತನಿಖೆಯ ವಿಚಾರವಾಗಿ ಅಂಬಿಕಾಪತಿ ಅವರ ಮನೆಗೆ ತೆರಳಿದಾಗ ಅಂಬಿಕಾಪತಿ ಮರಣ ಹೊಂದಿರುತ್ತಾರೆ, ಅವರ ಪುತ್ರನಿಗೆ ತಂದೆ ಮಾಡಿದ್ದ ಆರೋಪದ ಕುರಿತು ಯಾವುದೇ ಮಾಹಿತಿ ಇಲ್ಲ. ತನಿಖಾಧಿಕಾರಿ ಅಂಬಿಕಾಪತಿಯವರ ಮರಣ ಪ್ರಮಾಣಪತ್ರವನ್ನು ಪಡೆದು ಹಿಂತಿರುಗುತ್ತಾರೆ. ಕೇವಲ ಬಿಬಿಎಂಪಿ ವ್ಯಾಪ್ತಿಯ ಆಟದ ಮೈದಾನಕ್ಕೆ ಸಂಬಂಧಿಸಿದ ಕೇವಲ ಒಂದು ಕಾಮಗಾರಿಗೆ ಸಂಬಂಧಿಸಿದಂತೆ ಮಾಡಿರುವ ತನಿಖೆ, ಇದು ಬಿಜೆಪಿಯ 40% ಹಗರಣಕ್ಕೆ ಸಿಕ್ಕಿರುವ ಕ್ಲೀನ್ ಚಿಟ್ ಅಲ್ಲ. ಆರೋಪ ಮಾಡಿದವರು ಅಕಾಲಿಕ ಮರಣದಿಂದಾಗಿ ಸಾಕ್ಷ್ಯಾಧಾರಗಳ ಕೊರತೆ ಉಂಟಾದ್ದರಿಂದ ಆರೋಪವನ್ನು ತನಿಖೆಯಲ್ಲಿ ಸಾಬೀತು ಮಾಡಲು ಸಾಧ್ಯವಾಗಿಲ್ಲ. ಗುತ್ತಿಗೆದಾರರು ಮಾಡಿದ್ದ ಇತರ ಗಂಭೀರ ಆರೋಪಗಳ ಬಗ್ಗೆ ಬಿಜೆಪಿ ಸರ್ಕಾರ ತನಿಖೆ ನಡೆಸಲು ಮುಂದಾಗಲೇ ಇಲ್ಲ ಎಂದು ಹೇಳಿದ್ದಾರೆ.

ಇದು ಬಿಜೆಪಿಯವರ ಜಾಣ ಕುರುಡುತನವಲ್ಲವೇ?

ವಿವಿಧ ಇಲಾಖೆಗಳಲ್ಲಿನ 40% ಕಮಿಷನ್ ಆರೋಪದ ಕುರಿತ ಸಮಗ್ರ ತನಿಖೆಗಾಗಿ ಜಸ್ಟಿಸ್ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಲಾಗಿದ್ದು, ಪ್ರಸ್ತುತ ತನಿಖೆ ನಡೆಯುತ್ತಿದೆ. ಈ ಆಯೋಗವು ನೀಡುವ ವರದಿಯ ಆಧಾರದ ಮೇಲೆ ಬಿಜೆಪಿ ಸರ್ಕಾರದ 40% ಕಮಿಷನ್ ಆರೋಪದ ಕುರಿತ ಸತ್ಯಾಸತ್ಯತೆ ಹೊರಬರಲಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ PSI ಹಗರಣ, ಗಂಗಾಕಲ್ಯಾಣ ಹಗರಣ, KKRDB ಹಗರಣ, ಕೋವಿಡ್ ಹಗರಣ ಹಾಗೂ ಇನ್ನಿತರ ಹಗರಣಗಳು ನಡೆದಿದ್ದರೂ ಅವುಗಳನ್ನು ಬಿಜೆಪಿ ನಿರಾಕರಿಸುತ್ತಲೇ ಬಂದಿತ್ತು. ಆದರೆ ಈಗ ಅವೆಲ್ಲಾ ಹಗರಣಗಳು ನಡೆದಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗುತ್ತಿವೆ.
ಉದಾಹರಣೆಗೆ 545 ಪಿಎಸ್‌ಐ ನೇಮಕಅತಿ ಹಗರಣ ನಡೆದೇ ಇಲ್ಲವೆಂದು ವಾದಿಸುತ್ತಿದ್ದ ಬಿಜೆಪಿಗೆ ಈಗ ಉತ್ತರ ಸಿಕ್ಕಿದೆ. ನಮ್ಮ ಸರ್ಕಾರವು ಮರುಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

ಈ ಸುದ್ದಿಯನ್ನೂ ಓದಿ | Foxconn Company: ಭಾರೀ ಗಮನ ಸೆಳೆದ ಫಾಕ್ಸ್‌ಕಾನ್‌ ಉದ್ಯೋಗ ಜಾಹೀರಾತು! ವಯಸ್ಸು, ಲಿಂಗ ಸೇರಿ ಕೆಲವು ಮಾನದಂಡ ಕೈಬಿಡಲು ಸೂಚನೆ

ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಆಯೋಗದ ಮಧ್ಯಂತರ ವರದಿಯಲ್ಲಿ ಕೋವಿಡ್ ಅವಧಿಯಲ್ಲಿ ನಡೆದಿದ್ದ ಅಕ್ರಮ ಸಾಬೀತಾಗಿದ್ದು, ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಂದಿನ ಆರೋಗ್ಯ ಸಚಿವ ಶ್ರೀ ರಾಮುಲುರವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ಸೆಕ್ಷನ್ 7 ಹಾಗೂ ಸೆಕ್ಷನ್ 11ರ ಅಡಿ ವಿಚಾರಣೆ ನಡೆಸಬಹುದೆಂದು ವರದಿ ಸಲ್ಲಿಸಿರುತ್ತಾರೆ. ಇನ್ನು ಕೆಕೆಆರ್‌ಡಿಬಿಯಲ್ಲಿಯೂ ಹಗರಣ ನಡೆದೇ ಇಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದರು, ಆದರೆ ಈಗ ನಿವೃತ್ತ IAS ಅಧಿಕಾರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ಅಲ್ಲದೇ ಗಂಗಾ ಕಲ್ಯಾಣ ಯೋಜನೆಯಲ್ಲಿನ ಅಕ್ರಮವನ್ನು ನಿರಾಕರಿಸಲಾಗಿತ್ತು, ಆದರೆ ಇಲಾಖಾ ತನಿಖೆಯಲ್ಲಿ ಆರೋಪ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.