Friday, 13th December 2024

ಕೆ ಎಸ್ ಆರ್ ಟಿ ಸಿ: 7200 ನೌಕರರ ಶಿಸ್ತು ಪ್ರಕರಣ ಮನ್ನಾ‌

ಬೆಂಗಳೂರು: ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿಯೇ, ಕೆ ಎಸ್ ಆರ್ ಟಿ ಸಿ ನಿಗಮದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ 7200 ನೌಕರರ ಶಿಸ್ತು ಪ್ರಕರಣಗಳನ್ನು ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ಮನ್ನಾ‌ ಮಾಡಲಾಗಿದೆ.

ಹತ್ತು ತಿಂಗಳುಗಳ ಅವಧಿಗಿಂತ ಕಡಿಮೆ ಅವಧಿಯ ಒಳಗಿನ ಗೈರುಹಾಜರಿಯನ್ನು ಮನ್ನಿಸಿ, ಕರ್ತವ್ಯಕ್ಕೆ ಹಾಜರಾಗುವ ನೌಕರರ ವಿಚಾರಣೆಯನ್ನು ರದ್ದುಗೊಳಿಸಿ, ಬಸ್ಸನ್ನು ನೀಡಿ ಚಾಲನೆಗೆ ಅನುವು ಮಾಡಿಕೊಡಲಾಗಿದೆ.

ನಿಗಮದ‌ ಎಲ್ಲಾ ವಿಭಾಗಗಳ ವ್ಯಾಪ್ತಿಯಲ್ಲಿ ಕಾರ್ಮಿಕರ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಬೆಂಗಳೂರು ಕೇಂದ್ರಿಯ ವಿಭಾಗದಲ್ಲಿ ಘಟಕ-2 ರಲ್ಲಿ ವಿ.ಅನ್ಬುಕುಮಾರ್ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆ ಎಸ್ ಆರ್ ಟಿ ಸಿ ರವರು ನೌಕರರೊಂದಿಗೆ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಿಗಮದ ಸಮಸ್ತ ಸಿಬ್ಬಂದಿಗಳು 35,000, ಅದರಲ್ಲಿ ಒಟ್ಟು 8,414 ಶಿಸ್ತು ಪ್ರಕರಣಗಳಿದ್ದು, ಕಳೆದ‌ ಮೂರು ದಿನಗಳಿಂದ 7,200 ಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತ ದಂಡ ಅಂದರೆ, ರೂ.100, ರೂ 200, ಗರಿಷ್ಠ ರೂ.500 ಅನ್ನು ವಿಧಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ಈ ಪ್ರಕರಣಗಳಿಗೆ ಕನಿಷ್ಠವೆಂದರೆ ರೂ.25,000 ದಂಡ ವಿಧಿಸಬಹುದಾದ ಪ್ರಕರಣ ಗಳಾಗಿದ್ದವು.

ವ್ಯವಸ್ಥಾಪಕ ನಿರ್ದೇಶಕರು , ಶಿಸ್ತು ಪ್ರಕರಣಗಳನ್ನು ಮುಕ್ತಾಯಗೊಂಡಿರುವ ನೌಕರರಿಗೆ ಆದೇಶ‌ದ‌ ಪ್ರತಿಯನ್ನು ಸಿಹಿಯೊಂದಿಗೆ ವಿತರಿಸಿ ಶುಭ ಕೋರಿದರು.

ಆಡಳಿತ ವರ್ಗ ಅಂದರೆ ಶಿಕ್ಷೆ ಕೊಡುವುದು ಮಾತ್ರವಲ್ಲ, ನೌಕರರ ಶ್ರೇಯೋಭಿವೃದ್ದಿಯಾಗಿ ದುಡಿಯುವುದು‌ ಕೂಡ ನಮ್ಮ ಕರ್ತವ್ಯವಾಗಿರಬೇಕು. ಆದರೆ ನೌಕರರು ಮತ್ತೊಮ್ಮೆ ಅಪರಾಧ/ ಅಪಘಾತ/ ಗೈರು‌ ಹಾಜರಿ ಪ್ರಕರಣಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು.

ನಿಗಮದ ಪ್ರತಿದಿನದ ಸರಾಸರಿ ಆದಾಯ 10 ಕೋಟಿ ಇರಬೇಕು. ಆದರೆ ನಮಗೆ ಸರಾಸರಿ 8 ಕೋಟಿ ಮಾತ್ರ ಬರುತ್ತಿದೆ, ಇದರಲ್ಲಿ 70% ಡೀಸೆಲ್ ಪಾವತಿಗೆ ಸಂದಾಯ ಮಾಡಬೇಕಾಗಿದೆ. ಆದ್ದರಿಂದ ನಿಗಮದ ಆರ್ಥಿಕ ಪರಿಸ್ಥಿತಿಯು ಕ್ಲಿಷ್ಟಕರವಾದ ಸ್ಥಿತಿಯಲ್ಲಿದೆ. ನಮ್ಮ‌ ನೌಕರರು ಸಹ ನಮ್ಮ ಸಾರಿಗೆ ಸೇವೆಯನ್ನು ಬಲಪಡಿಸಿ, ಉತ್ತಮ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ನಮ್ಮೊಡನೆ ಕೈಜೋಡಿಸಬೇಕು, ಆಗ ಮಾತ್ರ ಸಂಸ್ಥೆ ಇನ್ನೂ ಬೆಳವಣಿಗೆ ಕಾಣಲು ಸಾಧ್ಯ ಎಂದು ತಿಳಿಸಿದರು.