Friday, 22nd November 2024

7th Pay Commission: ನಗರ ಸ್ಥಳೀಯ ಸಂಸ್ಥೆಗಳ ನೌಕರರಿಗೆ ಗುಡ್‌ ನ್ಯೂಸ್‌; ಪರಿಷ್ಕೃತ ವೇತನ ಶ್ರೇಣಿ ಜಾರಿಗೆ ಸರ್ಕಾರ ಆದೇಶ

7th Pay Commission

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಖಾಯಂ ನೌಕರರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ನಗರಸಭೆಯ ಕಾಯಂ ನೌಕರರಿಗೆ 7ನೇ ರಾಜ್ಯ ವೇತನ ಆಯೋಗದ (7th Pay Commission) ವರದಿ ಅನ್ವಯ ಪರಿಷ್ಕೃತ ವೇತನ ಶ್ರೇಣಿ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್‌ ಅವರು ಆದೇಶ ಹೊರಡಿಸಿದ್ದಾರೆ. 7ನೇ ರಾಜ್ಯ ವೇತನ ಆಯೋಗ ಶಿಫಾರಸು ಮಾಡಿರುವಂತೆ ಪರಿಷ್ಕೃತ ವೇತನ ಶ್ರೇಣಿ ಮತ್ತು ಸೌಲಭ್ಯಗಳನ್ನು ಯಥಾವತ್ತಾಗಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ (ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ) ಕಾಯಂ ನೌಕರರುಗಳಿಗೂ ಜಾರಿಗೊಳಿಸಬೇಕು. ಇದಕ್ಕೆ ತಗಲುವ ವೆಚ್ಚವನ್ನು ರಾಜ್ಯ ಸಂಚಿತ ನಿಧಿಯಿಂದ ಭರಿಸಬೇಕು ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು 2024ರ ಜು.22ರ ಆದೇಶದಲ್ಲಿ 7ನೇ ರಾಜ್ಯ ವೇತನ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಿ, ಅದರಂತೆ ರಾಜ್ಯ ಸರ್ಕಾರಿ ನೌಕರರ ಮುಖ್ಯವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳನ್ನು ಹಾಗೂ ಪಿಂಚಣಿಯನ್ನು 2022ರ ಜುಲೈ 1ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲು ಆದೇಶ ಹೊರಡಿಸಿತ್ತು. ಈ ಆದೇಶದ ಅನ್ವಯ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಹಾಗೂ ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗೂ ಯಥಾವತ್ತಾಗಿ ವಿಸ್ತರಿಸಿ ಆದೇಶಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

ಸರ್ಕಾರದ ಆದೇಶ ಸಂಖ್ಯೆ: ಆಇ / ಪಿಇಎನ್ / 262 / 2024, ದಿನಾಂಕ: 28.08.2024 ರಲ್ಲಿ ರಾಜ್ಯ ಸರ್ಕಾರಿ ನಿವೃತ್ತಿದಾರರಿಗೆ ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿರುತ್ತದೆ. ಆದ್ದರಿಂದ, 7ನೇ ವೇತನ ಆಯೋಗದ ಶಿಫಾರಸಿನಂತೆ 2024ರ ಪರಿಷ್ಕೃತ ಪಿಂಚಣಿ ಶ್ರೇಣಿಯನ್ನು ಪೌರಸೇವಾ ವೃಂದದ ಪಿಂಚಣಿದಾರರಿಗೆ ಯಥಾವತ್ತಾಗಿ ವಿಸ್ತರಿಸಲು ಆದೇಶ ಹೊರಡಿಸುವಂತೆ ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕರು (ಹಣಕಾಸು) ಕೋರಿದ್ದರು. ಇವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಈ ಆದೇಶವನ್ನು ಹೊರಡಿಸಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ವೈದ್ಯಕೀಯ ಭತ್ಯೆ ಹೆಚ್ಚಳ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ (Government Employees) ನೀಡಲಾಗುವ ವೈದ್ಯಕೀಯ ಭತ್ಯೆ (Medical allowances) ದರಗಳನ್ನು ಪರಿಷ್ಕರಿಸಿ (Good News) ರಾಜ್ಯ ಸರ್ಕಾರ (Karnataka Government) ಆದೇಶ ಹೊರಡಿಸಿದೆ. ನಗದುರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (Karnataka Arogya Sanjeevini Scheme) ಅನುಷ್ಠಾನಗೊಳಿಸಲಾಗುತ್ತಿದೆ.

ಈಗಾಗಲೇ 7ನೇ ವೇತನ ಆಯೋಗದ ವೇತನ ಶ್ರೇಣಿಯಂತೆ ವೇತನ ಜಾರಿಗೊಳಿಸಲಾಗಿದೆ. ಎನ್ ಪಿ ಎಸ್ ರದ್ದುಗೊಳಿಸಿ, ಓಪಿಎಸ್ ಜಾರಿಗೊಳಿಸುವ ಬಗ್ಗೆಯೂ ಸಮಿತಿಯನ್ನು ರಚಿಸಲಾಗಿದೆ. ಇದಾದ ಬೆನ್ನಲ್ಲೇ ನೌಕರರಿಗೆ ಮತ್ತೊಂದು ಸಿಹಿಸುದ್ದಿಯಿದು. ಈ ಕುರಿತು ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ರಾಜ್ಯ ಸರ್ಕಾರದ ನೀತಿ ನಿರ್ಣಯದಂತೆ 05-09-2022ರ ಸರ್ಕಾರಿ ಆದೇಶದಲ್ಲಿ ನಗದುರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (ಕೆ.ಎ.ಎಸ್.ಎಸ್) ಅನುಷ್ಠಾನಗೊಳಿಸಲು ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಅದರಂತೆ, ಸರ್ಕಾರದ ನೀತಿಯಲ್ಲಿ ವಿವರಿಸಿರುವಂತೆ ಸದರಿ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಸ್ತೃತವಾದ ಮಾರ್ಗಸೂಚಿಗಳನ್ನು ಸಹ ಹೊರಡಿಸಲಾಗಿರುತ್ತದೆ ಎಂದಿದ್ದಾರೆ.

ದಿನಾಂಕ 22-07-2024ರ ಸರ್ಕಾರಿ ಆದೇಶದಲ್ಲಿ ವೇತನ ಶ್ರೇಣಿಗಳ ಮತ್ತು ವೇತನಕ್ಕೆ ಹೊಂದಿಕೊಂಡಿರುವ ನಿರ್ದಿಷ್ಟ ಭತ್ಯೆಗಳ ಪರಿಷ್ಕರಣೆ ಮತ್ತು ಪಿಂಚಣಿ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಅದರಂತೆ ದಿನಾಂಕ 23-08-2024ರ ಸರ್ಕಾರಿ ಆದೇಶದಲ್ಲಿ ಪರಿಷ್ಕೃತ ವೇತನ ಶ್ರೇಣಿಗಳನ್ನು ಅನುಷ್ಠಾನಗೊಳಿಸಿ ವಿಸ್ತೃತವಾದ ಆದೇಶಗಳನ್ನು ಹೊರಡಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಗ್ರೂಪ್ -ಸಿ ಮತ್ತು ಗ್ರೂಪ್-ಡಿ ವೃಂದದ ರಾಜ್ಯ ಸರ್ಕಾರಿ ನೌಕರರುಗಳಿಗೆ ಲಭ್ಯವಿರುವ ವೈದ್ಯಕೀಯ ಭತ್ಯೆ ದರಗಳ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಸರ್ಕಾರವು ಅಂಗೀಕರಿಸಿರುತ್ತದೆ. ಅದರಂತೆ, ಈ ಕೆಳಕಂಡ ಆದೇಶವನ್ನು ಹೊರಡಿಸಿದೆ ಎಂದು ಹೇಳಿದ್ದಾರೆ.

ಗ್ರೂಪ್-‘ಸಿ’ ಮತ್ತು ಗ್ರೂಪ್-‘ಡಿ’ ವೃಂದದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ ಲಭ್ಯವಿರುವ ವೈದ್ಯಕೀಯ ಭತ್ಯೆಯ ದರಗಳನ್ನು ಮಾಸಿಕ 200 ರೂಪಾಯಿಗಳಿಂದ ಮಾಸಿಕ 500 ರೂಪಾಯಿಗಳಿಗೆ 1ನೇ ಆಗಸ್ಟ್ 2024ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲು ಸರ್ಕಾರವು ಹರ್ಷಿಸುತ್ತದೆ ಎಂದಿದ್ದಾರೆ.

ಈ ಸುದ್ದಿ ಓದಿ: Money Talk: ಆರೋಗ್ಯ ವಿಮೆ ಖರೀದಿಸುವ ಯೋಜನೆಯಲ್ಲಿದ್ದೀರಾ? ಈ ಅಂಶಗಳು ನಿಮ್ಮ ಗಮನದಲ್ಲಿರಲಿ

ನಗದುರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ (ಕೆ.ಎ.ಎಸ್.ಎಸ್) ಸೌಲಭ್ಯವು ಅನುಷ್ಠಾನಗೊಳ್ಳುವವರೆಗೆ ಈ ವೈದ್ಯಕೀಯ ಸೌಲಭ್ಯವು ಲಭ್ಯವಿರುತ್ತದೆ. ಹಾಗೆಯೇ, ನಗದುರಹಿತ ವೈದ್ಯಕೀಯ ಸೌಲಭ್ಯ ಯೋಜನೆಯು ಅನುಷ್ಠಾನಗೊಂಡ ನಂತರದಲ್ಲಿ ವೈದ್ಯಕೀಯ ಭತ್ಯೆಯ ಮಂಜೂರಾತಿಯ ಈ ಆದೇಶವು ಜಾರಿಯಲ್ಲಿರುವುದು ಕೊನೆಗೊಳ್ಳುತ್ತದೆ ಮತ್ತು ನಗದುರಹಿತ (ಕೆ.ಎ.ಎಸ್.ಎಸ್) ಯೋಜನೆಯು ಅನುಷ್ಠಾನಗೊಂಡ ಬಳಿಕ ಯಾವುದೇ ಸರ್ಕಾರಿ ನೌಕರನು ಈ ಸೌಲಭ್ಯವನ್ನು ಪಡೆಯಲು ಅರ್ಹನಿರುವುದಿಲ್ಲ. ಈ ಭತ್ಯೆಯನ್ನು ಕ್ರಮಬದ್ಧಗೊಳಿಸಲು ವಿಧಿಸಿರುವ ಇತರೆ ಷರತ್ತುಗಳು ಅನ್ವಯಿಸುತ್ತವೆ ಎಂದು ತಿಳಿಸಿದ್ದಾರೆ.