Friday, 22nd November 2024

ದೈತ್ಯ ಆನೆಗಿಗೂ ಕರೋನಾ ಭೀತಿ: ಐಸೋಲೇಷನ್ ನಲ್ಲಿ ಮಠದ ಆನೆಗಳು

ಗದಗ:

ದೈತ್ಯ ಆನೆಗೆ ಇರುವೆಯೊಂದು ಕಾಟ ಕೊಡುವ ಕತೆ ಕೇಳಿದ್ದೇವೆ. ಈಗ ಕಣ್ಣಿಗೇ ಕಾಣದ ಕೊರೋನಾ ವೈರಸ್ ಆನೆಗಳಲ್ಲೂ ಭೀತಿ ಹುಟ್ಟಿಸಿದೆ.
ಇದರ ಪರಿಣಾಮವಾಗಿ ಗದಗ ಜಿಲ್ಲೆಯ ಶಿರಹಟ್ಟಿಯ ಫಕೀರೇಶ್ವರ ಮಠದ ಆನೆ ಹಾಗೂ ಲಕ್ಷ್ಮೇಶ್ವರ ಸಮೀಪದ ಮುಕ್ತಿ ಮಂದಿರದ ಆನೆಗಳನ್ನು ಐಸೊಲೇಷನ್‌ನಲ್ಲಿ ಇಡಲಾಗಿದೆ.

ಪ್ರತಿದಿನ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶು ವೈದ್ಯರು ಬಂದು ಎರಡೂ ಆನೆಗಳ ಆರೋಗ್ಯವನ್ನು ಪರೀಕ್ಷೆ ಮಾಡುತ್ತಿದ್ದಾರೆ. ಈ ಮೊದಲು ಎರಡೂ ಆನೆಗಳನ್ನು ಪ್ರತಿದಿನ ನಾಲ್ಕು ಕಿಮೀ ವಾಕಿಂಗ್ ಹಾಗೂ ಆಹಾರಕ್ಕಾಗಿ ಕರೆದುಕೊಂಡು ಹೋಗಲಾಗುತಿತ್ತು, ಆದರೆ ಸರ್ಕಾರದ ಲಾಕ್‌ಡೌನ್ ಆದೇಶದ ನಂತರ ಎರಡು ಆನೆಗಳನ್ನು ಮಠದಲ್ಲೇ ಆರೈಕೆ ಮಾಡಲಾಗುತ್ತಿದೆ.
ಅರಣ್ಯ ಇಲಾಖೆಯವರು ಎರಡು ಆನೆಗಳ ಆರೋಗ್ಯದ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಪ್ರತಿದಿನ ಮಠಗಳಿಗೆ ಭೇಟಿ ನೀಡಿ ಎರಡು ಆನೆಗಳ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ. ಅಷ್ಟೇ ಅಲ್ಲದೇ ಆನೆಗಳನ್ನು ನೋಡಿಕೊಳ್ಳುತ್ತಿರುವ ಮಾವುತರಿಗೆ ಮಾಸ್ಕ್ ಧರಿಸಿಯೇ ಆನೆಗಳ ಆರೈಕೆ ಮಾಡಬೇಕು ಹಾಗೂ ಹೊರಗಿನ ಯಾವುದೇ ವ್ಯಕ್ತಿಗಳನ್ನು ಭೇಟಿ ಮಾಡದಂತೆ ಸೂಚನೆ ನೀಡಿದ್ದಾರೆ.