Sunday, 8th September 2024

ಸನ್ನಡತೆ: 81 ಮಂದಿ ಅಲ್ಪಾವಧಿ ಶಿಕ್ಷಾ ಬಂಧಿಗಳ ಬಿಡುಗಡೆ

ಮೈಸೂರು: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದಲ್ಲಿ 81 ಮಂದಿ ಅಲ್ಪಾವಧಿ ಶಿಕ್ಷಾ ಬಂಧಿಗಳನ್ನು ಬಿಡುಗಡೆಗೊಳಿಸಲಾಗಿದೆ. ಸನ್ನಡತೆಯ ಆಧಾರದ ಮೇಲೆ ರಾಜ್ಯ ಸರ್ಕಾರದ ಆದೇಶದಂತೆ ಮೈಸೂರಿನಲ್ಲಿ 20 ಅರ್ಹ ಅಲ್ಪಾವಧಿ ಶಿಕ್ಷಾ ಬಂದಿಗಳನ್ನು ಮೊದಲ ಹಂತದಲ್ಲಿ ಬಿಡುಗಡೆಗೊಳಿಸಲಾಯಿತು.

ಅಲ್ಪಾವಧಿ ಶಿಕ್ಷಾ ಬಂಧಿಗಳಾಗಿದ್ದ 20 ಪುರುಷರನ್ನು ಬಿಡುಗಡೆಗೊಳಿಸಲಾಗಿದೆ. ಕುಮಾರ್ ಅಲಿಯಾಸ್‌ ಸೀನಾ, ಮಾದೆಯಾಂಡ ಸಿ.ರಾಜೇಶ್, ಶಾಂತರಾಜು, ಕುಮಾರ್‌, ಕೃಷ್ಣ, ಮಾದವನ್, ಜಯರಾಮ, ಮಹೇಶ್, ನಂಜುಂಡ, ಪಿ.ಜಿ.ಪುಟ್ಟ, ವಿ.ಜೆ.ಹರೀಶ್, ಚಂದ್ರೇಗೌಡ, ಮಂಜು, ಶಿವಣ್ಣ, ಜಗದೀಶ್, ಅಬ್ದುಲ್ ಫಾರೂಕ್, ಕೃಷ್ಣ, ಜೇನುಕುರುಬರ ಗಣೇಶ್, ಬೆಟ್ಟಪಟ್ಟಿ, ಆರ್.ಸದಾನಂದ ಎಂಬುವರನ್ನು ಬಿಡುಗಡೆಗೊಳಿಸಲಾಗಿದೆ. ಮೈಸೂರು ಜಿಲ್ಲೆಯ ಕಾನೂನು ಸೇವಾ ಪ್ರಾಧಿಕಾರ ಬಿಡುಗಡೆ ಪತ್ರವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ ಮತ್ತೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ತೊಡಗದೇ ಉತ್ತಮ ಬದುಕು ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು. ಈ ಸಂದರ್ಭ ದಲ್ಲಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಕೆ.ಸಿ.ದಿವ್ಯಶ್ರೀ ಉಪಸ್ಥಿತರಿದ್ದರು.

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಾಜ್ಯದ 9 ಕೇಂದ್ರ ಕಾರಾಗೃಹಗಳಲ್ಲಿ ಅಲ್ಪಾವಧಿ ಶಿಕ್ಷಾ ಬಂಧಿಗಳಿಗಾಗಿರುವ ಮೂವರು ಮಹಿಳೆಯರು ಸೇರಿ 81 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರು 14, ಬೆಳಗಾವಿ 3, ಬಳ್ಳಾ ರಿ 8, ವಿಜಯಪುರ ಇಬ್ಬರು ಮಹಿಳೆಯರು ಸೇರಿ 10, ಧಾರವಾಡ 6, ಕಲಬುರಗಿ 10, ಮೈಸೂರು 20, ಶಿವಮೊಗ್ಗ 9, ಶಿವಮೊಗ್ಗ ಮಹಿಳಾ ಕಾರಾಗೃಹ ಒಬ್ಬ ಮಹಿಳೆ ಸೇರಿದಂತೆ ಒಟ್ಟು 81 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.

ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದಿಂದ ಒಂದೇ ಕುಟುಂಬದ ನಾಲ್ವರು ಸೇರಿ 10 ಕೈದಿಗಳು ಬಿಡುಗಡೆಗೆ ಆಗಿದ್ದಾರೆ. 10 ಕೈದಿಗಳಲ್ಲಿ ಮೂವರು ಸಹೋದರರು ಮತ್ತು ಅವರ ತಂದೆ ಸೇರಿ ಒಂದೇ ಕುಟುಂಬದ ನಾಲ್ವರು ಬಿಡುಗಡೆ ಆಗಿರುವುದು ಗಮನಾರ್ಹವಾಗಿದೆ.

error: Content is protected !!