ವಿಶ್ವವಾಣಿ ಸುದ್ದಿಮನೆ,
ಬೆಂಗಳೂರು
ಕರೊನಾಘಾತದಿಂದ ತತ್ತರಿಸಿದ್ದ ನಗರದ ಜನತೆ ಮೇಲೆ ವರುಣಾಘಾತವಾಗಿದೆ. ನಿನ್ನೆ ಮಧ್ಯರಾತ್ರಿಯಿಂದ ಸುರಿದ ಧಾರಾಕಾರ ಮಳೆ ಹಲವಾರು ಅವಾಂತರ ಸೃಷ್ಟಿಸಿದ್ದು, ಆರು ಮನೆಗಳು ಅಪಾಯದ ಸ್ಥಿತಿ ತುಲುಪಿವೆ.
ಮುಂಜಾನೆ 3 ಗಂಟೆಗೆ ಆರಂಭವಾದ ಗುಡುಗು-ಸಿಡಿಲು ಸಹಿತ ಮಳೆ ಬೆಳಗ್ಗೆ 9ರ ವರೆಗೂ ಮುಂದುವರಿದ ಪರಿಣಾಮ ಶಾಂತಲಾ ನಗರ ವಾರ್ಡ್ನ ಹೇಯ್ಸ್ ರಸ್ತೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ತೆಗೆದಿದ್ದ ಗುಂಡಿ ನೀರು ಸೇರಿ ಭೂಮಿ ಕುಸಿದು ಬಿದ್ದಿದೆ. ಹೇಯ್ಸ್ ರಸ್ತೆಯಲ್ಲಿ ಭೂಮಿ ಕುಸಿದುಬಿದ್ದಿರುವುದರಿಂದ ಅಕ್ಕಪಕ್ಕದ ಆರು ಮನೆಗಳು ಅಪಾಯದ ಅಂಚಿಗೆ ತಲುಪಿವೆ. ಯಾವುದೇ ಕ್ಷಣದಲ್ಲಿ ಮನೆಗಳು ಕುಸಿದು ಬೀಳುವ ಸಾಧ್ಯತೆ ಇದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಮೇಯರ್ ಗೌತಮ್ಕುಮಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಭಾರೀ ಮಳೆಗೆ ಗೋವಿಂದರಾಜನಗರದ ಪಟ್ಟೇಗಾರ ಪಾಳ್ಯದಲ್ಲಿ ರಸ್ತೆ ಕುಸಿದುಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಪಟ್ಟೆಗಾರಪಾಳ್ಯದಿಂದ ಶ್ರೀನಿವಾಸನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲೇ ರಾಜಕಾಲುವೆ ಹಾದು ಹೋಗಿದ್ದು, ಮಳೆಯ ರಭಸಕ್ಕೆ ರಾಜಕಾಲುವೆ ತಡೆಗೋಡೆ ಸಮೇತ ರಸ್ತೆ ಕುಸಿದುಬಿದ್ದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಕೋರಮಂಗಲದಲ್ಲಿ ಬೃಹತ್ ಮರವೊಂದು ಐದಾರು ಕಾರುಗಳ ಮೇಲೆ ಉರುಳಿಬಿದ್ದಿದ್ದು, ಈ ಘಟನೆಯಲ್ಲೂ ಯಾವುದೇ ಸಾವು-ನೋವಾಗಿಲ್ಲ. ಮರ ಬಿದ್ದ ರಭಸಕ್ಕೆ ಐದು ಕಾರುಗಳು ಸಂಪೂರ್ಣ ಜಖಂಗೊಂಡಿವೆ. ಮಳೆಯ ಆರ್ಭಟದಿಂದ ಹಲವಾರು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಸುಂಕದಕಟ್ಟೆ ಸಮೀಪದ ಹಲವಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅಲ್ಲಿನ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಆಚರಿಸುವಂತಾಯಿತು.
ಚಿಕ್ಕಕಲ್ಲಸಂದ್ರ, ಇಟ್ಟುಮಡು, ಎಚ್ಎಸ್ಆರ್ ಬಡಾವಣೆ ಸೇರಿದಂತೆ ನಗರದ 10ಕ್ಕೂ ಹೆಚ್ಚು ಪ್ರದೇಶಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಎರಡು ಕಡೆ ಬೃಹತ್ ಮರಗಳು ಧರೆಗುರುಳಿವೆ. ಮೆಜಸ್ಟಿಕ್, ಶಾಂತಿನಗರ, ಕೋರಮಂಗಲ, ಬಿಟಿಎಂ ಲೇಔಟ್, ಕೆಆರ್ ಮಾರುಕಟ್ಟೆ, ಕಾಮಾಕ್ಷಿಪಾಳ್ಯ, ವಿಜಯನಗರ ಸೇರಿದಂತೆ ನಗರದ ಹಲವಾರು ಪ್ರದೇಶಗಳಲ್ಲಿ ಗುಡುಗು-ಮಿಂಚು ಸಮೇತ ಭಾರೀ ಮಳೆಯಾಗಿದೆ. ಕೋರಮಂಗಲ ಮತ್ತು ಎಚ್ಎಸ್ಆರ್ ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಅಲ್ಲಿನ ನಿವಾಸಿಗಳು ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ಕೆಲ ರಸ್ತೆಗಳಲ್ಲಿ ಆಳುದ್ದ ನೀರು ನಿಂತಿತ್ತು. ಕೆಲವು ಕಡೆ ಕಾರು, ಬೈಕ್, ಸೈಕಲ್ಗಳು ನೀರಿನಲ್ಲಿ ಸಿಲುಕಿಕೊಂಡಿದ್ದವು. ರಾಜಕಾಲುವೆಗಳು ತುಂಬಿ ಹರಿಯುತ್ತಿದ್ದು, ಕೊಳಚೆ ನೀರು ಹೊರಹರಿದಿದ್ದರಿಂದ ಕೆಲವು ಕಡೆ ರಸ್ತೆಗಳು ದುರ್ನಾತ ಬೀರುತ್ತಿದ್ದವು. ಬೆಂಗಳೂರು ಹೊರವಲಯ, ಆನೇಕಲ್, ಅತ್ತಿಬೆಲೆ, ಎಲೆಕ್ಟ್ರಾನಿಕ್ ಸಿಟಿ, ಕೆಆರ್ ಪುರಂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ವರುಣ ಆರ್ಭಟಿಸಿದ್ದು, ಕೆಲವು ಕಡೆ ಸಂಕಷ್ಟ ಎದುರಾಗಿದೆ. ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗಿಳಿದ ಬಿಬಿಎಂಪಿ ಸಿಬ್ಬಂದಿಗಳು ಧರೆಗುರುಳಿಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡರು.
ತುರ್ತು ಪರಿಸ್ಥಿತಿ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬೆಸ್ಕಾಂ, ಜಲಮಂಡಳಿ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಮೇಯರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇನ್ನೂ ಎರಡು-ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇರುವುದರಿಂದ ಪ್ರತಿನಿತ್ಯ ನಗರ ಪ್ರದಕ್ಷಿಣೆ ಹಾಕುವ ಮೂಲಕ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗೌತಮ್ಕುಮಾರ್ ಭರವಸೆ ನೀಡಿದ್ದಾರೆ.