Friday, 13th December 2024

960 ಕಿ.ಮೀ ಕ್ರಮಿಸಿ ಕ್ಯಾನ್ಸರ್ ರೋಗಿಗೆ ಸ್ಪಂದಿಸಿದ ಪೇದೆಗೆ ಅಭಿನಂದನೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:

ಲಾಕ್ ಡೌನ್ ಪರಿಣಾಮ ಔಷಧ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ಕ್ಯಾನ್ಸರ್ ರೋಗಿಯೊಬ್ಬರ ನೋವಿಗೆ ಸ್ಪಂದಿಸಿದ ನಗರದ ಮುಖ್ಯ ಪೇದೆಯೊಬ್ಬರು 960 ಕಿಮೀ ದೂರದವರೆಗೆ ದ್ವಿಚಕ್ರ ವಾಹನದಲ್ಲಿ ತೆರಳಿ ರೋಗಿಗೆ ಔಷಧಿ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ನಗರವ ಪೋಲಿಸ್ ಆಯುಕ್ತರ ಕಚೇರಿಯ ನಿಯಂತ್ರಣ ಕೊಠಡಿ ಯ ಮುಖ್ಯಪೇದೆ ಎಸ್.ಕುಮಾರಸ್ವಾಮಿ ಅವರು 960 ಕಿಮೀ ದೂರದವರೆಗೆ ದ್ವಿಚಕ್ರ ವಾಹನದಲ್ಲಿ ತೆರಳಿ ರೋಗಿಗೆ ಔಷಧ ತಲುಪಿಸಿ ಮಾಡಿರುವ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.

ಪೋಲಿಸ್ ಆಯುಕ್ತ ಭಾಸ್ಕರ್ ರಾವ್ ಅವರೂ ಕೂಡ ಕುಮಾರಸ್ವಾಮಿ ಯವರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ. ಕಳೆದ ಏ.11 ರಂದು ಖಾಸಗಿ ಸುದ್ದಿ ವಾಹಿನಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿದ್ದ ಧಾರವಾಡದ ಕ್ಯಾನ್ಸರ್ ಪೀಡಿತ ವ್ಯಕ್ತಿ ನನಗೆ ಅಗತ್ಯವಿರುವ ಔಷಧವು ಬೆಂಗಳೂರಿನಲ್ಲಿ ಮಾತ್ರ ಸಿಗಲಿದೆ. ಈಗ ಲಾಕ್ ಡೌನ್ ನಿಂದಾಗಿ ಔಷಧ ತರಿಸಿಕೊಳ್ಳಲು ಕಷ್ಟವಾಗಿದೆ ಎಂದು ಅವರು ನೋವು ಹೇಳಿಕೊಂಡಿದ್ದರು.

ಈ ಕಾರ್ಯಕ್ರಮವನ್ನು ವೀಕ್ಷಿಸಿದ ಕುಮಾರಸ್ವಾಮಿಯವರ ಹೃದಯವು ಕ್ಯಾನ್ಸರ್ ವೇದೆನೆಗೆ ಮಿಡಿದಿದೆ. ಹೀಗಾಗಿ ಹಿರಿಯ ಅಧಿಕಾರಿಗಳ ಅನುಮತಿ ಪಡೆದ ಅವರು ಏ.೧೨ ರಂದು ಬೈಕ್ ನಲ್ಲೇ ಧಾರವಾಡಕ್ಕೆ ತೆರಳಿ ಔಷಧ ತಲುಪಿ ಬೆಂಗಳೂರಿಗೆ ಮರಳಿದ್ದಾರೆ‌.