Thursday, 12th December 2024

Aamir Khan: ಉಪೇಂದ್ರ ಸಿನಿಮಾದ ಟ್ರೇಲರ್ ನೋಡಿ ʼನಾನು ಉಪೇಂದ್ರ ಅಭಿಮಾನಿʼ ಎಂದ ಆಮೀರ್ ಖಾನ್!

upendra aamir khan

ಮುಂಬಯಿ: ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ (Upendra) ನಟಿಸಿ ನಿರ್ದೇಶಿಸುತ್ತಿರುವ UI ಸಿನಿಮಾದ (UI movie) ಟ್ರೇಲರ್ ನೋಡಿ ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ (Aamir Khan) ಥ್ರಿಲ್ ಆಗಿದ್ದಾರೆ. ವಾಹ್, It’s mind blowing ಎಂದು ಉದ್ಗರಿಸಿದ್ದಾರೆ. ಈ ಕುರಿತ ವಿಡಿಯೊವನ್ನು ಉಪೇಂದ್ರ ಅವರು ಶೇರ್ ಮಾಡಿಕೊಂಡಿದ್ದಾರೆ.

ನಾನು ಉಪೇಂದ್ರ ಅವರ ಅಭಿಮಾನಿ ಎಂದು ಆಮೀರ್ ಖಾನ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಉಪೇಂದ್ರ​ ಅವರ ಚಿತ್ರಕ್ಕೆ ಆಲ್​ ದಿ ಬೆಸ್ಟ್​ ಹೇಳಿದ್ದಾರೆ. ಡಿಸೆಂಬರ್​ 20ರಂದು ನನ್ನ ಬೆಸ್ಟ್ ಫ್ರೆಂಡ್ ಉಪೇಂದ್ರ ಅವರ ಸಿನಿಮಾ ತೆರೆಗೆ ಬರಲಿದೆ. ನೀವೆಲ್ಲರೂ ಮಿಸ್ ಮಾಡದೇ ನೋಡಿ ಎಂದು ಆಮೀರ್ ಹೇಳಿದ್ದಾರೆ.

UI ಚಿತ್ರದ ಟ್ರೇಲರ್ ನೋಡಿದೆ.‌ ವಾಹ್ ಅದ್ಭುತ. ನಿಜಕ್ಕೂ ಇದು ಮೈಂಡ್​ ಬ್ಲೋವಿಂಗ್ ಎಂದಿದ್ದಾರೆ ಆಮೀರ್ ಖಾನ್. ಹಿಂದಿ ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಇಷ್ಟಪಡ್ತಾರೆ ಎಂಬ ವಿಶ್ವಾಸವನ್ನು ಆಮೀರ್ ಖಾನ್ ವ್ಯಕ್ತಪಡಿಸಿದ್ದಾರೆ. ಪಕ್ಕದಲ್ಲೇ ಇದ್ದ ಉಪೇಂದ್ರ ಅವರು ಥ್ಯಾಂಕ್ಯು ಸರ್ ಎನ್ನುತ್ತ ಆಮೀರ್ ಖಾನ್ ಅವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

ಭಾರೀ ನಿರೀಕ್ಷೆ ಹುಟ್ಟಿಸಿರುವ UI ಪ್ಯಾನ್​ ಇಂಡಿಯಾದ ಚಿತ್ರವಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ. ಬೇರೆ ಭಾಷೆಗಳ ಹಕ್ಕುಗಳು ದುಬಾರಿ ಬೆಲೆಗೆ ಸೇಲ್ ಆಗಿವೆ. ಉಪೇಂದ್ರ ಈ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿ UI ನಲ್ಲಿ ಕತೆ ನಿರೂಪಿಸಿದ್ದಾರೆ ಎನ್ನಲಾಗಿದೆ.

ಇಂದ್ರಜಿತ್ ಲಂಕೇಶ್, ಓಂ ಪ್ರಕಾಶ್ ರಾವ್, ನಿಧಿ ಸುಬ್ಬಯ್ಯ, ಮುರಳಿ ಶರ್ಮಾ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಈ ಚಿತ್ರಕ್ಕೆ ಎ ಸಿನಿಮಾ ಖ್ಯಾತಿಯ ಎಚ್.ಸಿ.ವೇಣು ಛಾಯಾಗ್ರಹಣದ ಕೈಚಳಕ ತೋರಿಸಿದ್ದಾರೆ. ಈ ಚಿತ್ರದ ಒಟ್ಟು ಬಜೆಟ್ 100 ಕೋಟಿ ರೂ. ಎನ್ನಲಾಗಿದೆ.