ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ
ಬೆಂಗಳೂರು: 2017 ರಲ್ಲಿ ನಡೆದ ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆಯಲ್ಲಿ 1812 ಮಂದಿ ಉತ್ತೀರ್ಣ ರಾಗಿದ್ದು, ಇದರಲ್ಲಿ ಒಂದಷ್ಟು ಮಂದಿಗೆ ನೇಮಕಾತಿ ಆದೇಶ ನೀಡಲಾಗಿದ್ದು, ಒಂದಷ್ಟು ಮಂದಿಯನ್ನು ಕಳೆದ 3 ವರ್ಷಗಳಿಂದ ಬೀದಿ ಪಾಲು ಮಾಡಲಾಗಿದೆ ಈ ಕೂಡಲೇ ಮಿಕ್ಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಬೀಡಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಆಗ್ರಹಿಸಿದರು.
ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, 60 ಲಕ್ಷ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಎಲ್ಲಾ ಕಡೆ ಹೇಳಿಕೊಂಡು ಅಲೆಯುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಮೊದಲು 1800 ಮಂದಿಗೆ ಕೆಲಸ ಕೊಡಿ ವ್ಯಂಗ್ಯವಾಡಿದರು.
ಇಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆದಿದ್ದು, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹತ್ತಿರ ಇರುವ ಅಭ್ಯರ್ಥಿಗಳಿಗೆ ಮಾತ್ರ ಕೆಲಸ ನೀಡಲಾಗಿದೆ, ಪ್ರಮಾಣಿಕ ಅಭ್ಯರ್ಥಿಗಳನ್ನು ಹಣಿಯಲಾಗುತ್ತಿದೆ ಎಂದರು.
ಮಾಜಿ ಸೈನಿಕ ಹಾಗೂ ನೊಂದ ಅಭ್ಯರ್ಥಿಗಳ ಸಂಘದ ಅಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿ, ಕೊವಿಡ್-19 ಕಾರಣ ಮುಂದಿ ಟ್ಟುಕೊಂಡು ಹಣಕಾಸು ಇಲಾಖೆ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದಂತೆ ಇಲಾಖೆಗಳಿಗೆ ಆದೇಶ ನೀಡಿದೆ ಎಂದು ಹೇಳಲಾಗುತ್ತಿದೆ ಆದರೆ ಕೆಲವು ಇಲಾಖೆಗಳು ಅಭ್ಯರ್ಥಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಂಡಿವೆ ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.
ಈಗಾಗಲೇ ನಮ್ಮ ಜೊತೆಗಾರರು ಕೆಲಸ ಮಾಡುತ್ತಿದ್ದಾರೆ, ಇದ್ದ ಕೆಲಸವನ್ನು ಬಿಟ್ಟು ಉಪವಾಸ ಮಲಗುವಂತಾಗಿದೆ. ನಮ್ಮ ಸಹಪಾಠಿಗಳು ಈಗಾಗಲೇ ಸೇವಾ ಹಿರಿತನದಲ್ಲಿ ಮುಂದಿದ್ದು ನಮಗೆ ಅನ್ಯಾಯ ಎಸಗಲಾಗಿದೆ ಹಾಗೂ ಈ ಅನ್ಯಾಯದ ವಿರುದ್ದ ದನಿ ಎತ್ತದಂತೆ ಸಾಕಷ್ಟು ಒತ್ತಡ ಹೇರಲಾಗುತ್ತಿದೆ.
ಈ ಅನ್ಯಾಯವನ್ನು ಖಂಡಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶಾಂತಿಯುತ ಪ್ರತಿಭಟನೆಗ ನಡೆಸಲು ಪೋಲೀಸ್ ಹಾಗೂ ಗೃಹ ಇಲಾಖೆಗೆ ಅನುಮತಿ ಕೇಳಿದರೂ ನೀಡುತ್ತಿಲ್ಲ. ತಮಗೆ ಬೇಕಾದ ಇಲಾಖೆಗಳಿಗೆ ಬೇಕಾದಷ್ಟು ದುಡ್ಡು ಬಿಡುಗಡೆ ಮಾಡುತ್ತಿರುವ ಮುಖ್ಯಮಂತ್ರಿಗಳಿಗೆ ಬಡ ಅಭ್ಯರ್ಥಿಗಳ ಕೂಗು ಕೇಳಿಸುತ್ತಿಲ್ಲವೇ ಎಂದರು.
ಮತ್ತೋರ್ವ ಅಭ್ಯರ್ಥಿ ಆಶಾ ಮಾತನಾಡಿ, ನಮ್ಮ ಮೂಲ ದಾಖಲೆಗಳನ್ನು ಇಲಾಖೆಗಳಿಗೆ ಕೊಟ್ಟಿದ್ದು ಈ ದಾಖಲಾತಿಗಳು ಇಲ್ಲದೆ ನಮಗೆ ಹೊರಗೂ ಕೆಲಸ ಸಿಗುತ್ತಿಲ್ಲ ಎಂದು ಹೇಳಿದರು.
ಕೆಪಿಎಸ್‌ಸಿಯಿಂದ 01-09-2017 ರಂದು 507 ಎಫ್‌ಡಿಎ ಹಾಗು 551 ಎಸ್‌ಡಿಎ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. 24-11-2017ರಂದು 454 ಎಫ್‌ಡಿಎ, 300 ಎಸ್‌ಡಿಎ ಹೆಚ್ಚುವರಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಒಟ್ಟಾರೆ 1812 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.11.03.2018ರಿಂದ 25.02.2018ರವರೆಗೆ ಸದರಿ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. 2019ಫೆಬ್ರವರಿಯಿಂದ 2019 ಏಪ್ರಿಲ್‌ವರೆಗೆ 1:5 ಆಧಾರದಲ್ಲಿ ದಾಖಲಾತಿ ಪರಿಶೀಲನೆ ನಡೆಸಿ, ನಂತರ 2020 ಜನವರಿಯಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿ ಯನ್ನು ಕೆಪಿಎಸ್‌ಸಿಯಿಂದ ಬಿಡುಗಡೆ ಗೊಳಿಸಲಾಗಿತ್ತು.