Thursday, 12th December 2024

Actor Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 3991 ಪುಟದ ಚಾರ್ಜ್​ಶೀಟ್ ಸಲ್ಲಿಕೆ; ಪವಿತ್ರ ಗೌಡ A1, ದರ್ಶನ್ A2 ಆರೋಪಿ

darshan crime news

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renukaswamy murder) ಕೇಸ್​ನಲ್ಲಿ ಪೊಲೀಸರು ನ್ಯಾಯಾಲಯಕ್ಕೆ 3991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಪವಿತ್ರ ಗೌಡ (Pavithra Gowda) ಮೊದಲ ಆರೋಪಿ, ದರ್ಶನ್ (Actor darshan) ಎ2 ಆರೋಪಿ ಆಗಿ ಮುಂದುವರಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಪೊಲೀಸರು ಸುಮಾರು ನಾಲ್ಕು ಸಾವಿರ ಪುಟಗಳ ಚಾರ್ಜ್​ಶೀಟ್​​ ಸಲ್ಲಿಕೆ ಮಾಡಿದ್ದಾರೆ. ಇಂದು (ಸೆಪ್ಟೆಂಬರ್ 4) ಬೆಳಿಗ್ಗೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್​ಗೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದರು. ಈ ಮೊದಲು ಎಫ್​ಐಆರ್​ ಹಾಕುವಾಗ ದರ್ಶನ್ ಎ2 ಆರೋಪಿ ಆಗಿದ್ದರೆ, ಪವಿತ್ರಾ ಗೌಡ ಎ1 ಆರೋಪಿ ಆಗಿದ್ದರು. ಇದನ್ನು ಚಾರ್ಜ್​ಶೀಟ್​ನಲ್ಲಿ ಬದಲಿಸಬಹುದು ಎಂದು ಊಹಿಸಲಾಗಿತ್ತು. ಆದರೆ ಹಾಗಾಗಿಲ್ಲ.

ಎಸಿಪಿ ಚಂದನ್​​ ಕುಮಾರ್ ಹಾಗೂ ತನಿಖಾ ತಂಡ ದರ್ಶನ್ ಅವರನ್ನು ಎರಡನೇ ಆರೋಪಿಯಾಗಿ ಉಲ್ಲೇಖ ಮಾಡಿದೆ. ಇದರಿಂದ ಪವಿತ್ರಾ ಅವರು ಎ1 ಆರೋಪಿ ಆಗಿ ಮುಂದುವರಿದಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಭಾಗಿಯಾದ 17 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. 3 ಪ್ರತ್ಯಕ್ಷ ಸಾಕ್ಷಿಗಳು ಇವೆ. ಎಫ್​ಎಸ್​ಎಲ್​ ಮತ್ತು ಸಿಎಫ್​ಎಸ್​ಎಲ್​ನಿಂದ 8 ವರದಿಗಳು ಇವೆ. ಈ ಪ್ರಕರಣದಲ್ಲಿ ಒಟ್ಟು 231 ಸಾಕ್ಷಿಗಳು ಇವೆ. ಕೊಲೆ ಕೇಸ್​ನಲ್ಲಿ ಇನ್ನೂ ತನಿಖೆ ಪೂರ್ಣಗೊಂಡಿಲ್ಲ. ಹೀಗಾಗಿ ಸಿಆರ್​ಪಿಸಿ 173(8) ಅಡಿಯಲ್ಲಿ ಪ್ರಿಲಿಮಿನರಿ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗಿದೆ. ವಿಶೇಷ ಕೋರ್ಟ್​ಗೆ ಪೊಲೀಸರು ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ.

ಕಿಡ್ನಾಪ್ ಮಾಡಿಸಿದ್ದು, ಹಲ್ಲೆ ಮಾಡಿದ್ದು, ಕೊಲೆ ನಂತರ ಮುಚ್ಚಿಹಾಕಲು ಹಣ ನೀಡಿದ್ದು ದರ್ಶನ್ ಎಂಬುದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಆಗಿದೆ. ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆ ಆಗಿದೆ. ಇದರಿಂದ ದರ್ಶನ್ ಹಲ್ಲೆ ಮಾಡಿರುವ ಬಗ್ಗೆ ಮತ್ತು ಕೊಲೆಯಲ್ಲಿ ಭಾಗಿಯಾದ ಬಗ್ಗೆ ಸಾಕ್ಷಿ ದೊರೆತಂತೆ ಆಗಿದೆ.

ಕೊಲೆಗೆ ಕಾರಣವಾಗಿ ಪವಿತ್ರಾ ಗೌಡ ಇದ್ದಾರೆ. ಹಲ್ಲೆ ನಡೆಯುವ ಸ್ಥಳದಲ್ಲಿ ಅವರು ಹಾಜರಿದ್ದರು. ಚಪ್ಪಲಿಯಲ್ಲಿ ಅವರು ಹೊಡೆದಿದ್ದಾರೆ. ಕೃತ್ಯ ನಡೆದ ಸಮಯದಲ್ಲಿ ಪವಿತ್ರ ಗೌಡ ಅಲ್ಲೇ ಇರುವುದಕ್ಕೆ ಸಾಕ್ಷಿ ಸಿಕ್ಕಿದೆ. ಪವಿತ್ರ ಗೌಡ ಮೊಬೈಲ್ ಕೃತ್ಯದ ಸ್ಥಳದಲ್ಲಿ ಆಕ್ಟೀವ್ ಆಗಿತ್ತು. ಹೀಗಾಗಿ ಅವರನ್ನು ಎ1 ಆಗಿ ಉಳಿಸಿಕೊಳ್ಳಲಾಗಿದೆ.

ದರ್ಶನ್‌ಗೆ ಬಂತು ದೂರದರ್ಶನ; ಬಳ್ಳಾರಿ ಜೈಲಿನಲ್ಲಿ ಟಿವಿ ಒದಗಿಸಿದ ಅಧಿಕಾರಿಗಳು

ಬಳ್ಳಾರಿ: ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಇದೀಗ ಅವರ ಬೇಡಿಕೆಯಂತೆ ಟಿವಿ ಒದಗಿಸಲು ಕಾರಾಗೃಹ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಕಳೆದ ವಾರ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್‌ನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಯ ಜೈಲಿಗೆ ವರ್ಗಾಯಿಸಲಾಗಿತ್ತು. ರೌಡಿ ಸೀಟರ್‌ ವಿಲ್ಸನ್‌ ಗಾರ್ಡನ್‌ ನಾಗನ ಜೊತೆಗೆ ರಾಜಾತಿಥ್ಯ ಅನುಭವಿಸುತ್ತಿದ್ದ ದರ್ಶನ್‌ ಮೇಲೆ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದ್ದು, ಬಳ್ಳಾರಿಗೆ ಆರೋಪಿಯನ್ನು ಸ್ಥಳಾಂತರಿಸಿತ್ತು.

ಆ ಬಳಿಕ ದರ್ಶನ್‌, ತಮಗೆ ಜೈಲಿನಲ್ಲಿ ಟಿವಿ ಒದಗಿಸುವಂತೆ ಮನವಿ ಮಾಡಿದ್ದರು. ಬಳ್ಳಾರಿಯಲ್ಲಿರುವ ತನ್ನನ್ನು ಬೆಂಗಳೂರಿನಂತೆ ಯಾರೂ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಹೊರಜಗತ್ತಿನ ಮಾಹಿತಿ ದೊರೆಯುತ್ತಿಲ್ಲ. ಹೀಗಾಗಿ ತನಗೆ ಟಿವಿ ಒದಗಿಸುವಂತೆ ಅವರು ಕೋರಿದ್ದರು. ಈ ಕೋರಿಕೆಯನ್ನು ಮಾನ್ಯ ಮಾಡಲಾಗಿದ್ದು, ಇನ್ನೆರಡು ದಿನಗಳಲ್ಲಿ ಅವರಿಗೆ ಟಿವಿ ದೊರೆಯಲಿದೆ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಜೊತೆಗೆ, ಕಾರಾಗೃಹ ಆವರಣದಲ್ಲಿ ಇನ್ನೂ ಹತ್ತು ಹೆಚ್ಚುವರಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.