Saturday, 23rd November 2024

Actor Darshan: ನಟ ದರ್ಶನ್‌ಗೆ ಮತ್ತೆ ನಿರಾಸೆ; ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Actor Darshan

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್‌ ತೂಗುದೀಪ (Actor Darshan) ಅವರಿಗೆ ಕೋರ್ಟ್‌ ಹೋರಾಟದಲ್ಲಿ ಶನಿವಾರ (ಅಕ್ಟೋಬರ್‌ 5) ಮತ್ತೆ ನಿರಾಸೆ ಎದುರಾಗಿದೆ. ಪ್ರಕರಣದ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್‌ 8ಕ್ಕೆ ಮುಂದೂಡಲಾಗಿದೆ. ಹೀಗಾಗಿ ಜಾಮೀನು ಪಡೆದು ಹೊರಕ್ಕೆ ಬರುವ ಅವರ ನಿರೀಕ್ಷೆ ಮತ್ತೊಮ್ಮೆ ಟುಸ್‌ ಎನಿಸಿಕೊಂಡಿದೆ. ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ನಟ ದರ್ಶನ್‌ ಪರ 57ನೇ ಹೆಚ್ಚವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ನಟನ ಪರ ವಕೀಲರಾದ ಸಿ.ವಿ.ನಾಗೇಶ್‌ ವಾದ ಮಂಡಿಸಿದರು. ದರ್ಶನ್‌ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ, ಚಿಕಿತ್ಸೆ ಪಡೆಯಲು ವೈದ್ಯರು ಸೂಚಿಸಿದ್ದಾರೆ ಎಂದು ವಕೀಲರು ಕಾರಣ ನೀಡಿದರು.

ಶುಕ್ರವಾರವೂ ಕೋರ್ಟ್‌ನಲ್ಲಿ ನಟ ದರ್ಶನ್‌ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದರು. ದರ್ಶನ್‌ ತೂಗುದೀಪ ಕುಟುಂಬ ಮನವಿಯಂತೆ ಹಿರಿಯ ವಕೀಲರು ಭಾಗಿಯಾಗಿದ್ದರು. ವಾದ ಮಂಡನೆ ಆರಂಭಿಸಿದ ವಕೀಲರು, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಆ ಆರೋಪಗಳ ಆಧಾರದಲ್ಲಿ ತೀರ್ಪು ನೀಡಬಾರದೆಂದು ಕೋರ್ಟ್‌ಗೆ ಮನವಿ ಮಾಡಿದ್ದರು.

3 ಮಂದಿಗೆ ಜಾಮೀನು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ 3 ಮಂದಿಗೆ ಜಾಮೀನು ಸಿಕ್ಕಿದೆ. ಪ್ರಕರಣದ ಎ15 ಆರೋಪಿ ಕಾರ್ತಿಕ್ ಅಲಿಯಾಸ್ ಕಪ್ಪೆ, ಎ16 ಕೇಶವಮೂರ್ತಿ, ಎ17 ನಿಖಿಲ್ ನಾಯಕ್‌ಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಹೀಗಾಗಿ ನಟ ದರ್ಶನ್‌ಗೆ ಜಾಮೀನು ಸಿಕ್ಕೆ ಸಿಗುತ್ತದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿತ್ತು.

ಜಾಮೀನು ಅರ್ಜಿ ಸಲ್ಲಿಕೆ

ಸೆಪ್ಟೆಂಬರ್ 21ರಂದು ಮೊದಲ ಬಾರಿ ದರ್ಶನ್ ಪರ ಜಾಮೀನು ಅರ್ಜಿ ಸಲ್ಲಿಸಿದಾಗ ಸರ್ಕಾರಿ ವಿಶೇಷ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್ ಆಕ್ಷೇಪಣೆಗೆ ಸಮಯ ಕೇಳಿದ್ದರು. ಹಾಗಾಗಿ ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿತ್ತು. ಆದರೆ ಸೆಪ್ಟೆಂಬರ್ 27ರಂದು ಅರ್ಜಿ ವಿಚಾರಣೆಗೆ ಬಂದಾಗ ದರ್ಶನ್ ಪರ ಹಿರಿಯ ವಕೀಲರು ಹಾಜರಿಲ್ಲ ಎಂದು ಕಾರಣ ಕೊಟ್ಟಿದ್ದ ಕಿರಿಯ ವಕೀಲ ಸುನಿಲ್ ಅರ್ಜಿ ವಿಚಾರಣೆಗೆ ಮತ್ತೆ ಸಮಯ ಕೇಳಿದ್ದರು. ಬಳಿಕ ಜಾಮೀನು ಅರ್ಜಿಯನ್ನು ಮುಂದೂಡಲಾಗಿತ್ತು.

ಸೆಪ್ಟೆಂಬರ್ 30ರಂದು ಜಾಮೀನು ಅರ್ಜಿ ವಿಚಾರಣೆಗೆ ಬಂದಾಗ ವಕೀಲರು ಹಾಜರಿಲ್ಲದ ಕಾರಣ, ಅರ್ಜಿ ವಿಚಾರಣೆ ಮುಂದೂಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಅದರಂತೆ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿತ್ತು. ಶುಕ್ರವಾರ ವಿಚಾರಣೆಯನ್ನು ಇಂದಿಗೆ ನಿಗದಿಪಡಿಸಲಾಗಿತ್ತು. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಒಟ್ಟು 17 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇದರಲ್ಲಿ ಮೂವರಿಗೆ ಮಾತ್ರ ಇತ್ತೀಚೆಗೆ ಜಾಮೀನು ಸಿಕ್ಕಿದೆ. ದರ್ಶನ್‌ ಅವರ ಆಪ್ತೆ, ಎ 1 ಆರೋಪಿ ಪವಿತ್ರಾ ಗೌಡ ಅವರೂ ಜೈಲಿನಲ್ಲೇ ಇದ್ದಾರೆ.

ಈ ಸುದ್ದಿಯನ್ನೂ ಓದಿ: Actor Darshan: ಬಳ್ಳಾರಿ ಜೈಲಿನಲ್ಲಿ ಐಟಿ ಇಲಾಖೆ ಅಧಿಕಾರಿಗಳಿಂದ ದರ್ಶನ್‌ ವಿಚಾರಣೆ