ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದ ನಟ ದರ್ಶನ್ಗೆ (Actor Darshan) ಹೈಕೋರ್ಟ್ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಅವರು ಯಾವಾಗ ಜೈಲಿನಿಂದ ಬಿಡುಗಡೆಯಾಗಬಹುದು ಎಂದು ಅಭಿಮಾನಿಗಳು ಪ್ರಶ್ನೆ ಮೂಡಿದೆ. ಹೈಕೋರ್ಟ್ ಆದೇಶವು ಇಂದೇ ಬಳ್ಳಾರಿ ಜೈಲು ಅಧಿಕಾರಿಗಳಿಗೆ ತಲುಪಿ ಎಲ್ಲ ಕಾನೂನು ಪ್ರಕ್ರಿಯೆ ಪೂರ್ಣಗೊಂಡರೆ ಅವರು ಇಂದು ಸಂಜೆಯೇ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ನೀಡುವಂತೆ ದರ್ಶನ್ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದ್ದರು. ಹೀಗಾಗಿ 6 ವಾರಗಳ ಕಾಲ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ಅರ್ಜಿ ವಿಚಾರಣೆ ವೇಳೆ ಬೆಂಗಳೂರಿನ ವಿಕ್ಟೋರಿಯಾ ಅಥವಾ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬಹುದಲ್ಲವೇ ಎಂದು ಎಸ್ಪಿಪಿ ಪ್ರಸನ್ನ ಕುಮಾರ್ ಹೇಳಿದ್ದರು. ಆದರೆ, ಈ ವೇಳೆ ಪ್ರತಿಕ್ರಿಯಿಸಿದ್ದ ವಕೀಲ ಸಿ.ವಿ.ನಾಗೇಶ್, ದರ್ಶನ್ ಅವರು ಈ ಹಿಂದೆಯೂ ಹಲವು ಬಾರಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಹೀಗಾಗಿ ಅವರಿಗೆ ಅಲ್ಲೇ ಚಿಕಿತ್ಸೆ ಪಡೆಯಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಹೀಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುವ ಸಾಧ್ಯತೆ ಇದೆ.
ದರ್ಶನ್ಗೆ ಮಧ್ಯಂತರ ಜಾಮೀನು ಲಭಿಸಿರುವ ಬಗ್ಗೆ ದರ್ಶನ್ ಪರ ವಕೀಲ ಸುನಿಲ್ ಪ್ರತಿಕ್ರಿಯಿಸಿ, ದರ್ಶನ್ಗೆ ಇರುವ ಆರೋಗ್ಯ ಸಮಸ್ಯೆ ಪರಿಗಣಿಸಿ ಹೈಕೋರ್ಟ್ ಮಧ್ಯಂತರ ಜಾಮೀನು ಕೊಟ್ಟಿದೆ. ಕಾನೂನು ಪ್ರಕ್ರಿಯೆಗಳು ಇಂದೇ ಮುಗಿದು ಇಂದೇ ದರ್ಶನ್ ಜೈಲಿನಿಂದ ಹೊರಬರುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.
ನಾವು ದರ್ಶನ್ರ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ಮಧ್ಯಂತರ ಜಾಮೀನು ನೀಡಬೇಕೆಂದು ನ್ಯಾಯಪೀಠದ ಮುಂದೆ ಮನವಿ ಮಾಡಿದ್ದೆವು. ದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಇದ್ದು, ತುರ್ತು ಚಿಕಿತ್ಸೆ ಅಗತ್ಯವಿದೆ ಎಂದು ಹೇಳಿದ್ದೇವೆ. ಬೆನ್ನು ನೋವಿನ ಸಮಸ್ಯೆ ದರ್ಶನ್ಗೆ ಹಿಂದೆಯೂ ಇತ್ತು. ಪ್ರಕರಣ ದಾಖಲಾದ ಬಳಿಕ ಬೆನ್ನು ನೋವು ಬಂದಿದೆ ಎಂಬುದು ಸುಳ್ಳು. ಈ ಸಮಸ್ಯೆ 2022-23 ರಿಂದಲೂ ಇದೆ. ಅದಕ್ಕೆ ಅವರು ಚಿಕಿತ್ಸೆ ಪಡೆದಿದ್ದಾರೆ. ಆದರೆ ಸಮಸ್ಯೆ ಸರಿ ಹೋಗಿರಲಿಲ್ಲ. ಅದರ ವರದಿಗಳನ್ನು ನಾವು ನ್ಯಾಯಾಲಯಕ್ಕೆ ಸಲ್ಲಿಸಿದ್ದೆವು ಎಂದು ಹೇಳಿದ್ದಾರೆ.
ದರ್ಶನ್ ಅವರನ್ನು ವೈದ್ಯಕೀಯ ತಪಾಸಣೆ ಮಾಡಿರುವ ವೈದ್ಯರು ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದ್ದರು. ಅವೆಲ್ಲವನ್ನೂ ಪರಿಗಣಿಸಿ ಈಗ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ದರ್ಶನ್ಗೆ ಮೈಸೂರಿನ ಅಪೋಲೋ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಅನುಮತಿ ಕೇಳಲಾಗಿದೆ. ದರ್ಶನ್ ಅವರು ರಿಲೀಸ್ ಆದ ಮೇಲೆ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂಬುದನ್ನು ಅವರು ಮತ್ತು ಅವರ ಕುಟುಂಬದವರು ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಈಗ ದರ್ಶನ್ಗೆ ಮಧ್ಯಂತರ ಜಾಮೀನು ಮಾತ್ರವೇ ಮಂಜೂರಾಗಿದೆ. ಆದರೆ ನಿಯಮಿತ ಜಾಮೀನು ಮಂಜೂರಾಗಿಲ್ಲ. ಮಧ್ಯಂತರ ಜಾಮೀನು ಅವಧಿ ಮುಗಿದ ಬಳಿಕ ನಿಯಮಿತ ಜಾಮೀನಿಗೆ ನಾವು ಅರ್ಜಿ ಹಾಕಲಿದ್ದೇವೆ. ಅದು ನಮ್ಮ ಜವಾಬ್ದಾರಿಯಾಗಿದ್ದು, ದರ್ಶನ್ಗೆ ನಿಯಮಿತ ಜಾಮೀನು ಕೊಡಿಸುವ ಪ್ರಯತ್ನವನ್ನು ನಾವು ಮಾಡಲಿದ್ದೇವೆ’ ಎಂದು ವಕೀಲ ಸುನಿಲ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Actor Darshan: ದರ್ಶನ್ಗೆ ಜಾಮೀನು: ರೇಣುಕಾ ಸ್ವಾಮಿ ಮನೆಯವರು ಏನಂದ್ರು?