Saturday, 14th December 2024

Actor Darshan: ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Actor Darshan

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯು ನಗರದ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಮಂಗಳವಾರ ನಡೆದಿದ್ದು, ವಾದ- ಪ್ರತಿವಾದ ಆಲಿಸಿದ ಕೋರ್ಟ್‌, ಅರ್ಜಿ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 12.30ಕ್ಕೆ ಮುಂದೂಡಿದೆ.

ಎಸ್‌ಪಿಪಿ ಪ್ರಸನ್ನಕುಮಾರ್‌ ಅವರು ನಾಳೆ ವಾದ ಮುಕ್ತಾಯ ಮಾಡಲು ಪ್ರಯತ್ನಿಸುತ್ತೇನೆ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಅ.9ಕ್ಕೆ ನ್ಯಾಯಾಧೀಶರು ಮುಂದೂಡಿದ್ದಾರೆ. ಪೊಲೀಸರ ಪರ ವಾದ ಮಂಡಿಸಿದ ಎಸ್‌ಪಿಪಿ, ರೇಣುಕಾಸ್ವಾಮಿ ಯಾರು ಎಂಬುವುದು ಆರೋಪಿಗಳಿಗೆ ಗೊತ್ತೇ ಇರಲಿಲ್ಲ ಎಂದು ಆರೋಪಿಗಳ ಪರ ವಕೀಲರು ಹೇಳಿದ್ದಾರೆ. ಆದರೆ, ಎ 3 ಪವನ್ , ಎ1‌ ಪವಿತ್ರಾ, ಎ9 ನಡುವೆ ಮೊಬೈಲ್‌ ಕರೆಗಳು ವಿನಿಮಯ ಆಗಿದೆ. ಈ ಬಗ್ಗೆ ಸಾಕ್ಷಿಯ ಹೇಳಿಕೆಯನ್ನೂ ನಾವು ದಾಖಲಿಸಿದ್ದೇವೆ ಎಂದು ತಿಳಿಸಿದರು.

ಸಾಕ್ಷಿಗಳು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ರೇಣುಕಾಸ್ವಾಮಿ ಎದೆ ಹಾಗೂ ಮರ್ಮಾಂಗಕ್ಕೆ ಒದ್ದು ಹಲ್ಲೆ ನಡೆಸಿದ್ದಾರೆ. ಇದಕ್ಕೆ ಪೂರಕವಾಗಿ ರೇಣುಕಾಸ್ವಾಮಿ ದೇಹದಲ್ಲಿ ಗಾಯಗಳಿವೆ. ದೇಹದ 17 ಕಡೆ ಫ್ರಾಕ್ಚರ್‌ ಆಗಿರುವ ಬಗ್ಗೆ ವರದಿಯಿದ್ದು, ಇದರಲ್ಲಿ ಎದೆಗೂಡಿನ ಮೂಳೆ ಮುರಿದಿರುವ ಮಾಹಿತಿ ಇದೆ. ದರ್ಶನ್‌ ಕೂಡ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದರು.

ಇನ್ನು ಅಕ್ಟೋಬರ್ 5ರಂದು ನಡೆದ ವಿಚಾರಣೆ ವೇಳೆ ವಾದ ಮಂಡಿಸಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು, ನಟ ದರ್ಶನ್‌ ಅವರು ನಿರಪರಾಧಿ ಎಂದು ವಾದಿಸಿದ್ದರು. ಅಲ್ಲದೇ ತನಿಖೆಯಲ್ಲಿ ಪೊಲೀಸರ ಲೋಪದೋಷಗಳ ಬಗ್ಗೆ ಉಲ್ಲೇಖ ಮಾಡಿದ್ದರು.

ಜೂ.10ರಂದೇ ಮೂವರು ಆರೋಪಿಗಳು ಶರಣಾಗಿದ್ದರು. ಅದರೆ, ಜೂ.12ರತನಕ ಪೊಲೀಸರು ಸ್ಥಳ ಮಹಜರು ನಡೆಸಿರಲಿಲ್ಲ. ನಟ ದರ್ಶನ್‌ ಎಲ್ಲೂ ಕೂಡ ಶೂ ಧರಿಸಿದ್ದೇ ಎಂದು ಹೇಳಿಲ್ಲ. ಆದರೆ, ಪೊಲೀಸರು ದರ್ಶನ್‌ ಶೂ ರಿಕವರಿ ಮಾಡಿದ್ದಾರೆ. ದರ್ಶನ್‌ ಇಂತದ್ದೇ ಬಣ್ಣದ ಬಟ್ಟೆ ಧರಿಸಿದ್ದೆ ಎಂದು ಹೇಳಿರಲಿಲ್ಲ. ಆದರೆ, ಪೊಲೀಸರು ಇದೇ ಬಟ್ಟೆ ಧರಿಸಿದ್ದಾರೆ ಎಂದು ಹೇಳಿದ್ದಾರೆ. ಇನ್ನು ದರ್ಶನ್‌ ವಿರುದ್ಧ ಪ್ರಬಲ ಸಾಕ್ಷ್ಯಗಳು ಇಲ್ಲ. ಅಲ್ಲದೇ ಪೋಸ್ಟ್‌ ಮಾರ್ಟಂ ಮಾಡಲು ತಡ ಮಾಡಲಾಗಿದೆ. ಇನ್ನು ಫೋಟೊ ನೋಡಿ ಸಾವಿನ ಸಮಯ ಅಂದಾಜು ಮಾಡಿರುವುದು ತಪ್ಪು. ಹೊಗೆದ ಬಟ್ಟೆಗಳಲ್ಲಿ ಹೇಗೆ ರಕ್ತದ ಕಲೆ ಹೇಗೆ ಪತ್ತೆಯಾಗಿದೆ?, ಇನ್ನು ರಿಮ್ಯಾಂಡ್‌ ಅರ್ಜಿಯಲ್ಲಿ ಸಾಕ್ಷಿ ಹೆಸರು ಮುಚ್ಚಿಟ್ಟಿದ್ದಾರೆ ಎಂದು ದರ್ಶನ್‌ ಪರ ವಕೀಲ ವಾದ ಮಂಡಿಸಿದ್ದರು.

ಈ ಸುದ್ದಿಯನ್ನೂ ಓದಿ | Caste census: ರಾಜಕೀಯಕ್ಕೆ ಜಾತಿಗಣತಿಯನ್ನು ದಾಳವಾಗಿ ಬಳಸಿಕೊಳ್ಳಬೇಡಿ: ಆರ್. ಅಶೋಕ್ ಕಿಡಿ