ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka Swamy murder Case) ಪ್ರಕರಣ ಸಂಬಂಧ ನಟ ದರ್ಶನ್ (Actor Darshan) ಮತ್ತು ನಟಿ ಪವಿತ್ರಾ ಗೌಡ (Pavitra Gowda) ಸೇರಿದಂತೆ ಇತರೆ ಆರೋಪಿಗಳು ಸಲ್ಲಿಸಿರುವ ಜಾಮೀನು (Bail) ಅರ್ಜಿಗಳ ತೀರ್ಪನ್ನು ಹೈಕೋರ್ಟ್ (Karnataka High court) ಶುಕ್ರವಾರ ಮಧ್ಯಾಹ್ನ ಪ್ರಕಟಿಸಲಿದೆ.
ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್, ಎ1 ಆರೋಪಿ ಪವಿತ್ರಾ ಗೌಡ, ಮ್ಯಾನೇಜರ್ ಆರ್.ನಾಗರಾಜು, ದರ್ಶನ್ ಕಾರು ಚಾಲಕ ಎಂ.ಲಕ್ಷ್ಮಣ್, ಆಪ್ತರಾದ ಅನುಕುಮಾರ್, ಜಗದೀಶ್ ಮತ್ತು ಪ್ರದೋಷ್ ರಾವ್ ಅವರ ಜಾಮೀನು ಅರ್ಜಿಗಳ ಅರ್ಜಿಗಳ ವಿಚಾರಣೆಯನ್ನು ಸೋಮವಾರ (ಡಿ.9ರಂದು) ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಪೀಠ, ಶುಕ್ರವಾರ ಮಧ್ಯಾಹ್ನ 2.30ಕ್ಕೆ ತೀರ್ಪು ಪ್ರಕಟಿಸಲಿದೆ.
ದರ್ಶನ್ ಹಾಗೂ ಇತರ ಅರ್ಜಿದಾರರಿಗೆ ಜಾಮೀನು ನಿರಾಕರಿಸಿ ಕಳೆದ ಅ.14ರಂದು ನಗರದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಇದರಿಂದ ಎಲ್ಲಾ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಒಂದೊಮ್ಮೆ ದರ್ಶನ್ ಜಾಮೀನು ಅರ್ಜಿ ವಜಾಗೊಂಡರೆ, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ. ಜಾಮೀನು ದೊರೆತರೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಮನೆಗೆ ಹೋಗಬಹುದು.
ವಿಚಾರಣೆ ವೇಳೆ ದರ್ಶನ್‌ಗೆ ನೀಡಲಾಗಿರುವ ಮಧ್ಯಂತರ ಜಾಮೀನು ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್, ಶಸ್ತ್ರಚಿಕಿತ್ಸೆಗೆ ಒಳಗಾಗಲು ಅ.30ರಂದು ಹೈಕೋರ್ಟ್ ದರ್ಶನ್‌ಗೆ ಆರು ವಾರ ಕಾಲ ಮಧ್ಯಂತರ ಜಾಮೀನು ನೀಡಿದೆ. ಆದರೆ, ಈವರೆಗೂ ದರ್ಶನ್ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿಲ್ಲ. ಈ ನಡೆ ಪರಿಗಣಿಸಿ ಅವರ ಮಧ್ಯಂತರ ಜಾಮೀನು ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು. ಆಗ ದರ್ಶನ್ ಪರ ವಕೀಲ ಹಿರಿಯ ಸಿ.ವಿ. ನಾಗೇಶ್ ಅವರು ಅಂತಿಮ ವೈದ್ಯಕೀಯ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿ, ದರ್ಶನ್ ಯಾವ ದಿನದಂದು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ನಿರ್ಧರಿಸಬೇಕಾದವರು ವೈದ್ಯರು. ಶಸ್ತ್ರ ಚಿಕಿತ್ಸೆಗೆ ಒಳಗಾಗುವಂತೆ ದರ್ಶನ್‌ಗೆ ನಾವು ಒತ್ತಾಯ ಮಾಡಲಾಗದು ಎಂದು ತಿಳಿಸಿದ್ದರು.