Thursday, 12th December 2024

Actor Darshan: ದರ್ಶನ್ ಜಾಮೀನು ಅರ್ಜಿ ಇಂದು ವಿಚಾರಣೆ; ಜಾಮೀನಿಗೆ ಕಾರಣಗಳು ಇಲ್ಲಿವೆ

actor darshan

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ (Renuka Swamy Murder case) ಪ್ರಕರಣದಲ್ಲಿ ನಟ ದರ್ಶನ್‌ (Actor Darshan) ಸಲ್ಲಿಸಿದ ಜಾಮೀನು ಅರ್ಜಿ (Bail plea) ಇಂದು ವಿಚಾರಣೆಗೆ ಬರುತ್ತಿದೆ. ಬೆಂಗಳೂರಿನ ಸೆಷನ್ಸ್ ಕೋರ್ಟ್ ಸಿಸಿಹೆಚ್ 57ರಲ್ಲಿ ದರ್ಶನ್, ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.

ನಟ ದರ್ಶನ್ ಶುಕ್ರವಾರ (ಸೆ.27) ಜಾಮೀನು ಸಿಗುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಪರ ವಕೀಲರು ಸಮಯ ಕೇಳಿದ್ದರಿಂದ ಅರ್ಜಿ ವಿಚಾರಣೆ ಸೆಪ್ಟೆಂಬರ್ 30ಕ್ಕೆ ಮುಂದೂಡಿಕೆ ಆಗಿದೆ. ದರ್ಶನ್ ಪರ ವಕೀಲ ಸುನೀಲ್​ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಅವರು ಹಲವು ವಾದಗಳನ್ನು ಕೋರ್ಟ್ ಮುಂದೆ ಇಟ್ಟಿದ್ದಾರೆ.

ದರ್ಶನ್‌ ಪರ ವಕೀಲರು ಮಂಡಿಸಿದ ವಾದಗಳು ಹೀಗಿವೆ:

  • ದರ್ಶನ್ ಹೇಳಿಕೆ ಆಧರಿಸಿ ಸಾಕ್ಷ್ಯ ಸಂಗ್ರಹಿಸಿದ್ದಾಗಿ ಹೇಳಲಾಗಿದೆ. ಆದರೆ ಸಾಕ್ಷ್ಯಗಳನ್ನು ಗಮನಿಸಿದರೆ ಸಾಕ್ಷ್ಯಾಧಾರಗಳನ್ನು ಸೃಷ್ಟಿಸುವ ಕೆಲಸವಾಗಿರುವುದು ಕಂಡುಬರುತ್ತಿದೆ.
  • ಇತರೆ ಆರೋಪಿಗಳೊಂದಿಗೆ ದರ್ಶನ್ ದೂರವಾಣಿ ಕರೆ ವಿವರ ಸಂಗ್ರಹ ಮಾಡಿದ್ದಾರೆ. ರೇಣುಕಾಸ್ವಾಮಿ ಮೇಲಿನ ಹಲ್ಲೆ ದರ್ಶನ್​ಗೆ ತಿಳಿದಿತ್ತೆಂಬಂತೆ ಬಿಂಬಿಸಲಾಗಿದೆ. ದರ್ಶನ್ ಕರೆ ಮಾಡಿರುವುದು ತಮ್ಮ ಸ್ನೇಹಿತರು, ಉದ್ಯೋಗಿಗಳು ಮತ್ತಿತರರಿಗೆ. ಎಂದಿನಂತೆ ದರ್ಶನ್ ಅವರೊಂದಿಗೆ ಸಹಜವಾಗೇ ಮಾತನಾಡಿದ್ದಾರೆ.
  • ಕೃತ್ಯದ ನಾಲ್ಕು ದಿನದ ಬಳಿಕ ಪೋಸ್ಟ್​ಮಾರ್ಟಮ್ ಮಾಡಲಾಗಿದೆ. ನಾಲ್ಕು ದಿನದ ಬಳಿಕವೇ ಶವದ ಪಂಚನಾಮೆ ನಡೆದಿದೆ. ಈ ವಿಳಂಬಕ್ಕೆ ತನಿಖಾಧಿಕಾರಿ ಯಾವುದೇ ವಿವರಣೆ ನೀಡಿಲ್ಲ. ರೇಣುಕಾ ಸ್ವಾಮಿ ತಲೆಯ ಮೇಲೆ 2.5X1 ಸೆಂಟಿ ಮೀಟರ್​ನ ಒಂದು ಆಳವಾದ ಗಾಯವಿದೆ. ಮೃತದೇಹದ ಕೆಲವೆಡೆ ಏಟುಗಳ ಗುರುತುಗಳಿವೆ. ಶವಪರೀಕ್ಷೆ ನಡೆಸಿದ ವೈದ್ಯರ ವರದಿಯಲ್ಲಿ ಸ್ಪಷ್ಟತೆಯಿಲ್ಲ. ಸಾವಿಗೆ ಕಾರಣ ಹಾಗೂ ಸಾವಿನ ಸಮಯದ ಬಗ್ಗೆ ಸ್ಪಷ್ಟತೆ ಇಲ್ಲ.
  • ಸಹ ಆರೋಪಿಗಳ ಮೊಬೈಲ್​ ಸಂದೇಶಕ್ಕೂ ದರ್ಶನ್​ಗೂ ಸಂಬಂಧವಿಲ್ಲ. ಕೃತ್ಯಕ್ಕೂ ಮೊಬೈಲ್ ಸಂದೇಶಗಳಿಗೂ ಯಾವುದೇ ಸಂಬಂಧವಿಲ್ಲ.
  • ಸಿಸಿಟಿವಿ ದೃಶ್ಯಾವಳಿ ಸತ್ಯವೆಂದು ನಂಬಿದರೂ ದರ್ಶನ್ ಪಾತ್ರ ಸಾಬೀತಾಗುತ್ತಿಲ್ಲ. ಸಿಸಿಟಿವಿಯಲ್ಲಿ ದರ್ಶನ್ ಹಾಜರಿ, ಕೃತ್ಯದಲ್ಲಿ ಭಾಗಿ ಬಗ್ಗೆ ಕಂಡುಬಂದಿಲ್ಲ.
  • ಸಿಆರ್‌ಪಿಸಿ 164 ಹೇಳಿಕೆಗೂ ವೈದ್ಯಕೀಯ ವರದಿಗೂ ವ್ಯತ್ಯಾಸಗಳಿವೆ. ವೈಜ್ಞಾನಿಕ ಸಾಕ್ಷಿಗೂ, ಪ್ರತ್ಯಕ್ಷದರ್ಶಿಗಳ ಹೇಳಿಕೆಗೂ ಸಾಮ್ಯತೆ ಇಲ್ಲ. ಸಾಕ್ಷ್ಯಗಳಿಂದಲೇ ಕೃತ್ಯದಲ್ಲಿ ದರ್ಶನ್ ಪಾತ್ರವಿಲ್ಲದ್ದು ಕಂಡುಬರುತ್ತಿದೆ. ದರ್ಶನ್ ಮುಗ್ಧನಾಗಿದ್ದರೂ ಈ ಕೇಸ್​ನಲ್ಲಿ ಎಳೆತರಲಾಗಿದೆ.

ಇದನ್ನೂ ಓದಿ: Actor Darshan: ಬಳ್ಳಾರಿ ಜೈಲಿನಲ್ಲಿ ಐಟಿ ಇಲಾಖೆ ಅಧಿಕಾರಿಗಳಿಂದ ದರ್ಶನ್‌ ವಿಚಾರಣೆ