Thursday, 21st November 2024

Actor Darshan: ದರ್ಶನ್‌, ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್

Actor Darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renuka Swamy Murder Case) ಜೈಲಿನಲ್ಲಿರುವ ನಟ ದರ್ಶನ್ (Actor Darshan), ಪವಿತ್ರಾ ಗೌಡ ಅವರ ಜಾಮೀನು (Bail plea) ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ ಕೋರ್ಟ್, ಇದೀಗ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ದರ್ಶನ್‌ ಜೈಲುವಾಸ ಮುಂದುವರಿಯಲಿದೆ.

ಇನ್ನು ಪ್ರಕರಣದ ಆರೋಪಿಗಳಾದ ಎ8 ರವಿಶಂಕರ್‌, ಎ13 ದೀಪಕ್‌ಗೆ ಜಾಮೀನು ಮಂಜೂರು ಆಗಿದ್ದು, ಎ11 ನಾಗರಾಜು, ಎ12 ಲಕ್ಷ್ಮಣ್‌ ಜಾಮೀನು ಅರ್ಜಿಯೂ ವಜಾಗೊಂಡಿದೆ. ಅದೇ ರೀತಿ ಪ್ರದೂಷ್‌, ವಿನಯ್‌, ಜಗದೀಶ್‌ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯವು ತೀರ್ಪನ್ನು ಅ.16ಕ್ಕೆ ಕಾಯ್ದಿರಿಸಿದೆ.

ನನ್ನ ಕಕ್ಷಿದಾರ ದರ್ಶನ್‌ರನ್ನು ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ. ತನಿಖೆಯಲ್ಲಿ ಕೆಲ ಲೋಪದೋಷಗಳಿವೆ. ಹೀಗಾಗಿ ದರ್ಶನ್‌ಗೆ ಜಾಮೀನು ನೀಡಬೇಕು ಎಂದು ವಕೀಲ ಸಿ.ವಿ.ನಾಗೇಶ್‌ ವಾದ ಮಂಡಿಸಿದ್ದರು. ಆದರೆ, ಆರೋಪಿಗಳಿಗೆ ಬೇಲ್‌ ಕೊಡಬಾರದೆಂದು ಎಸ್‌ಪಿಪಿ ಪ್ರಸನ್ನ ಕುಮಾರ್‌ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿರುವ 57ನೇ ಸಿಸಿಎಚ್‌ ನ್ಯಾಯಾಲಯದ ನ್ಯಾಯಾಧೀಶರು ಇದೀಗ ತೀರ್ಪು ಪ್ರಕಟಿಸಿದ್ದಾರೆ.

ಪೊಲೀಸ್‌ ತನಿಖೆಯಲ್ಲಿ ಲೋಪ ದೋಷಗಳಿವೆ ಎಂದು ಹಲವು ಅಂಶಗಳನ್ನು ಸಿ.ವಿ ನಾಗೇಶ್ ಉಲ್ಲೇಖಿಸಿದ್ದಾರೆ. ಅರೇಬಿಯನ್ ನೈಟ್ಸ್ ಕತೆಯಂತೆ ಇದೆ. ತನಿಖೆ ಅತ್ಯಂತ ಕಳಪೆಯಾಗಿದೆ. ಸ್ಥಳ ಮಹಜರು ಮತ್ತು ಪಂಚನಾಮೆಗೆ ಹೋಲಿಕೆಯಿಲ್ಲ ಎಂದು ವಾದಿಸಿದ್ದರು. ಮತ್ತೊಂದೆಡೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್, ಈ ಕೊಲೆ ಪ್ರಕರಣ ಕ್ರೂರವಾದ ರಕ್ತ ಚರಿತ್ರೆ. ಕೃತ್ಯಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು, ಫೋಟೋಗಳು ಇವೆ. ಆರೋಪಿ ದರ್ಶನ್ ಕೊಲೆಯಲ್ಲಿ ಭಾಗಿಯಾಗಿರುವುದಕ್ಕೆ ಪ್ರಬಲ ಸಾಕ್ಷಿಗಳಿವೆ ಎಂದು ವಾದಿಸಿದ್ದರು.

ದರ್ಶನ್, ಪವಿತ್ರಾ ಗೌಡ ಜಾಮೀನು ಅರ್ಜಿ ತಿರಸ್ಕಾರವಾಗಿದ್ದರಿಂದ ಅವರಿಬ್ಬರೂ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಇದರ ನಡುವೆ, ನಟ ದರ್ಶನ್ ಅವರ ಬೆನ್ನುನೋವಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು, ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಸ್ಕ್ಯಾನ್ ಮಾಡಿಸುವಂತೆ ಬಿಮ್ಸ್‌ ವೈದ್ಯರು ಸೂಚಿಸಿದ್ದಾರೆ. ಬಿಮ್ಸ್‌ನ ನರಶಸ್ತ್ರಚಿಕಿತ್ಸಾ ತಜ್ಞ ಡಾ.ವಿಶ್ವನಾಥ್ ಅವರು ನಟ ದರ್ಶನ್ ಆರೋಗ್ಯ ತಪಾಸಣೆ ಮಾಡಿದ್ದು, ಸ್ಕ್ಯಾನಿಂಗ್ ಮಾಡಿಸಿ, ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ಫಿಜಿಯೋಥೆರಪಿ ಮಾಡಬೇಕು ಎಂದು ಹೇಳಿದ್ದು ಬೆನ್ನುನೋವು ನಿವಾರಣೆಗೆ ಮಾತ್ರೆಗಳನ್ನು ನೀಡಿದ್ದಾರೆ. ಫಿಜಿಯೋಥೆರಪಿಗೆ ನಟ ದರ್ಶನ್ ಒಪ್ಪಿದ್ದು ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಸ್ಕ್ಯಾನ್‌ಗೆ ಒಪ್ಪುತ್ತಿಲ್ಲ.

ಮೂಲಗಳ ಪ್ರಕಾರ ನಟ ದರ್ಶನ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಬೆನ್ನುನೋವು ಹಾಗೂ ಕಾಲುನೋವಿನ ಬಾಧೆ ಮತ್ತಷ್ಟು ಬಿಗಡಾಯಿಸಿದೆ. ಶಸ್ತ್ರಚಿಕಿತ್ಸೆ ಅಗತ್ಯವಿದೆ. ಹೀಗಾಗಿಯೇ ದರ್ಶನ್‌ಗೆ ಮೆಡಿಕಲ್‌ ಬೆಡ್ ಹಾಗೂ ಚೇರ್ ನೀಡುವಂತೆಯೂ ವೈದ್ಯರು ಸೂಚಿಸಿದ್ದಾರೆ. ನಟ ದರ್ಶನ್ ಸ್ಕ್ಯಾನಿಂಗ್‌ಗೆಂದು ಬಿಮ್ಸ್‌ಗೆ ದಾಖಲಾದರೆ ಅಭಿಮಾನಿಗಳು ಬಿಮ್ಸ್‌ಗೆ ಬರುವ ಸಾಧ್ಯತೆಯಿದೆ. ಇದರಿಂದ ಬೇರೆ ರೋಗಿಗಳಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಸ್ಥಳೀಯವಾಗಿ ಸ್ಕ್ಯಾನಿಂಗ್ ಹಾಗೂ ಶಸ್ತ್ರಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತೆ ಮನವೊಲಿಸಲಾಗುತ್ತಿದೆ. ಆದರೆ, ದರ್ಶನ್ ನಿರಾಕರಿಸುತ್ತಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Baba Siddiqui: ಬಿಷ್ಣೋಯ್‌ ಗ್ಯಾಂಗ್‌ ಹಿಟ್‌ ಲಿಸ್ಟ್‌ನಲ್ಲಿ ಬಾಬಾ ಸಿದ್ದಿಕಿ ಪುತ್ರ- ಸ್ಫೋಟಕ ಸಂಗತಿ ಬಾಯ್ಬಿಟ್ಟ ಹಂತಕರು

ರೇಣುಕಾಸ್ವಾಮಿ ಹತ್ಯೆ ಆರೋಪದಲಿ ಜೂನ್‌ 11ರಂದು ದರ್ಶನ್ ಹಾಗೂ ಇತರರನ್ನು ಬಂಧಿಸಲಾಗಿತ್ತು. ಸದ್ಯ ದರ್ಶನ್‌ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸೆ. 21ರಂದು ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಪ್ರಾಸಿಕ್ಯೂಷನ್‌ ಪರ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿ ಪ್ರಸನ್ನಕುಮಾರ್‌ ವಾದ ಮಂಡಿಸಿದ್ದಾರೆ. ದರ್ಶನ್‌ ಪರ ವಕೀಲ ಸಿ.ವಿ.ನಾಗೇಶ್ ಹಾಗೂ ಪವಿತ್ರಾ ಗೌಡ ಪರವಾಗಿ ವಕೀಲ ಟಾಮಿ ಸೆಬಾಸ್ಟಿಯನ್ ವಾದಿಸಿದ್ದರು.