ಬೆಂಗಳೂರು: ತೀವ್ರ ಬೆನ್ನು ನೋವಿನ ಹಿನ್ನೆಲೆಯಲ್ಲಿ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ನಟ ದರ್ಶನ್ ಅವರು (Actor Darshan) ಬುಧವಾರ ಮಧ್ಯಾಹ್ನ ಡಿಸ್ಚಾರ್ಜ್ ಆಗಿದ್ದಾರೆ. ಹೈಕೋರ್ಟ್‌ನಿಂದ ಜಾಮೀನು ಸಿಕ್ಕಿರುವುದರಿಂದ ಒಂದೂವರೆ ತಿಂಗಳ ಬಳಿಕ ನಟ ಡಿಸ್ಚಾರ್ಜ್ ಆಗಿದ್ದು, ಪತ್ನಿ ವಿಜಯಲಕ್ಷ್ಮಿ ಅವರ ಹೊಸಕೆರೆಹಳ್ಳಿಯ ನಿವಾಸಕ್ಕೆ ದರ್ಶನ್ ಕಾರಿನಲ್ಲಿ ತೆರಳಿದ್ದಾರೆ.
ನಟನನ್ನು ಕರೆದೊಯ್ಯಲು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಮತ್ತು ನಟ ಧನ್ವೀರ್ ಆಗಮಿಸಿದ್ದರು. ಪುತ್ರ ವಿನೀಶ್ ಕೈಹಿಡಿದುಕೊಂಡು ನಟ ದರ್ಶನ್ ಆಸ್ಪತ್ರೆಯಿಂದ ಹೊರ ಬಂದರು. ಬಳಿಕ ಕಾರು ಹತ್ತಿ ಆಸ್ಪತ್ರೆಯಿಂದ ಪತ್ನಿ ವಿಜಯಲಕ್ಷ್ಮಿ ಅವರ ಹೊಸಕೆರೆಹಳ್ಳಿಯ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನ ನಿವಾಸಕ್ಕೆ ತೆರಳಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ ಅವರಿಗೆ ತೀವ್ರ ಬೆನ್ನು ನೋವಿನ ಕಾರಣದಿಂದ 6 ವಾರಗಳ ಮಧ್ಯಂತರ ಜಾಮೀನು ಸಿಕ್ಕಿತ್ತು. ನಟನಿಗೆ ಸರ್ಜರಿ ಮಾಡುವುದೋ ಅಥವಾ ಫಿಸಿಯೋ ಥೆರಪಿ ಮಾಡುವುದೋ ಎನ್ನುವ ಬಗ್ಗೆ ಸಾಕಷ್ಟು ಗೊಂದಲವಿತ್ತು. ಆದರೆ ಇತ್ತೀಚೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ನಟನಿಗೆ ಬಿಪಿ ಇದೆ, ಆರೋಗ್ಯ ಸ್ಥಿರತೆ ಇಲ್ಲ ಎಂದು ಸರ್ಜರಿ ಮುಂದೂಡಿಕೊಂಡು ಬರಲಾಗಿತ್ತು. ಈ ನಡುವೆ ಷರತ್ತುಬದ್ಧ ಜಾಮೀನು ಮಂಜೂರು ಆಗುತ್ತಲೇ, ಸರ್ಜರಿ ಮಾಡಿಸದೆಯೇ ದರ್ಶನ್ ಡಿಸ್ಚಾರ್ಜ್ ಆಗಿದ್ದಾರೆ.
ಸೋಮವಾರ ಮಧ್ಯಾಹ್ನ ಕೋರ್ಟ್‌ಗೆ ತೆರಳಿ ಜಾಮೀನು ಷರತ್ತು ಪೂರೈಸಿ ಮತ್ತೆ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದರ್ಶನ್ ವಾಪಸ್ ಆಗಿದ್ದರು. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್‌ಗೆ ಜಾಮೀನು ನೀಡಿ ಹೈಕೋರ್ಟ್ ಡಿಸೆಂಬರ್ 13ರಂದು ಆದೇಶಿಸಿತ್ತು. ಒಂದು ಲಕ್ಷ ರೂಪಾಯಿ ಮೊತ್ತಕ್ಕೆ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತಾ ಖಾತರಿ ನೀಡಬೇಕು ಎಂದು ಷರತ್ತು ವಿಧಿಸಿತ್ತು. ಈ ಷರತ್ತು ಪೂರೈಸಲು ಸೋಮವಾರ ನಗರದ 57ನೇ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್ ಅವರ ಮುಂದೆ ದರ್ಶನ್ ಹಾಜರಾಗಿದ್ದರು.
ಈ ಸುದ್ದಿಯನ್ನೂ ಓದಿ | Actor Darshan: ದರ್ಶನ್‌ಗೆ ಮತ್ತೆ ಸಂಕಷ್ಟ; ಜಾಮೀನು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಲು ಪೊಲೀಸರ ನಿರ್ಧಾರ
ಈ ವೇಳೆ ನ್ಯಾಯಾಂಗ ಬಂಧನಕ್ಕೆ ಒಳಗಾದ ವೇಳೆ ನ್ಯಾಯಾಲಯದ ಸುಪರ್ದಿಗೆ ನೀಡಲಾಗಿರುವ ಪಾಸ್‌ಪೋರ್ಟ್ ಅನ್ನು ಹಿಂದಿರುಗಿಸುವಂತೆ ಕೋರಿ ದರ್ಶನ್ ಪರ ವಕೀಲರು ಮನವಿ ಸಲ್ಲಿಸಿದರು. ಆ ಮನವಿಗೆ ಒಪ್ಪಿದ ನ್ಯಾಯಾಲಯವು ದರ್ಶನ್‌ಗೆ ಪಾಸ್‌ಪೋರ್ಟ್ ಹಿಂದಿರುಗಿಸಲು ಆದೇಶಿಸಿತ್ತು.