Friday, 22nd November 2024

Actor Darshan: ಆಪರೇಷನ್‌ ಬಳಿಕ ದರ್ಶನ್‌ ಮತ್ತೆ ಜೈಲಿಗೆ ಹೋಗಬೇಕು: ಗೃಹ ಸಚಿವ ಪರಮೇಶ್ವರ್‌

Actor Darshan

ಮೈಸೂರು: ತೀವ್ರ ಬೆನ್ನು ನೋವಿನ ಹಿನ್ನೆಲೆಯಲ್ಲಿ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಅವರ ಜಾಮೀನು ಅವಧಿಯ ಆರು ವಾರದಲ್ಲಿ ಮೂರು ವಾರ ಕಳೆದರೂ ಇನ್ನೂ ಶಸ್ತ್ರಚಿಕಿತ್ಸೆ ನಡೆದಿಲ್ಲ. ಈ ಬಗ್ಗೆ ಇದೀಗ ಗೃಹ ಸಚಿವ ಪರಮೇಶ್ವರ್ ಅವರು ಪ್ರತಿಕ್ರಿಯಿಸಿ, ಶಸ್ತ್ರಚಿಕಿತ್ಸೆ ಬಳಿಕ ನಟ ದರ್ಶನ್ (Actor Darshan) ಅವರು ಮತ್ತೆ ಜೈಲಿಗೆ ಹೋಗಬೇಕು ಎಂದು ತಿಳಿಸಿದ್ದಾರೆ.

ಈ ಕುರಿತಾಗಿ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಗೃಹ ಸಚಿವರು, ಸದ್ಯ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಜಾಮೀನು ಬೇಲ್ ಕೇಳಬಹುದು. ಹಾಗಾಗಿ ಅವರಿಗೆ ಬೇಲ್ ನೀಡಬಾರದು ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕುತ್ತೇವೆ. ಕೊಲೆ ಪ್ರಕರಣ ಕುರಿತು ಮತ್ತಷ್ಟು ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣ ಬಳಿಕ ಸಂಪೂರ್ಣ ಸಲ್ಲಿಕೆ ಮಾಡುತ್ತೇವೆ ಎಂದು ತಿಳಿಸಿದರು.

ಚಿಕಿತ್ಸೆಯ ಬಳಿಕ ದರ್ಶನ್‌ ವಾಪಸ್ ಜೈಲಿಗೆ ಹೋಗಬೇಕು. ದರ್ಶನ್‌ಗೆ ಶಸ್ತ್ರಚಿಕಿತ್ಸೆ ದಿನಾಂಕ ನಿಗದಿ ಮಾಡಿಲ್ಲ. ರಕ್ತದೊತ್ತಡದ ಕಾರಣ ಆಪರೇಷನ್‌ ವಿಳಂಬವಾಗಿದೆ. ಚಿಕಿತ್ಸೆಗೆ ದರ್ಶನ್ ಸಿದ್ಧರಿದ್ದಾರೆ ಎಂದು ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಯಾವಾಗ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ ಎಂಬುವುದು ತಿಳಿದಿಲ್ಲ. ಶಸ್ತ್ರಚಿಕಿತ್ಸೆಗೆ ತಯಾರಿ ನಡೆಸುತ್ತಾ ಇದ್ದಾರೆ ಎಂದು ವೈದ್ಯಕೀಯ ವರದಿಯಲ್ಲಿ ದರ್ಶನ್ ಪರ ವಕೀಲರು ಉಲ್ಲೇಖಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ | DK Shivakumar: ಕರಾವಳಿ ಜನರ ವಲಸೆ ತಪ್ಪಿಸಲು ವಿಶೇಷ ಯೋಜನೆ

ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಮುಂದೂಡಿಕೆ

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಆರೋಪಿ ನಟ ದರ್ಶನ್ (Actor Darshan) ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್​ನಲ್ಲಿ (Karnataka High Court) ನಡೆದಿದ್ದು, ಜಾಮೀನು ಅರ್ಜಿಯನ್ನು (Bail plea) ನವೆಂಬರ್ 26 ಕ್ಕೆ ಮುಂದೂಡಲಾಗಿದೆ.

ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಅವರು, ದರ್ಶನ್​ಗೆ ಮಧ್ಯಂತರ ಜಾಮೀನಿನ ನೀಡಿದ ವೇಳೆ ಸೂಚಿಸಲಾಗಿದ್ದ ಕೆಲ ನಿಯಮಗಳನ್ನು ಪಾಲಿಸಿಲ್ಲ ಎಂದರು. ದರ್ಶನ್ ಪರ ವಕೀಲರು ಹೊಸ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಹೆಚ್ಚುವರಿ ಆರೋಪಪಟ್ಟಿಯನ್ನು ವಿಚಾರಣಾ ಕೋರ್ಟ್​ಗೆ ಸಲ್ಲಿಸಲಾಯ್ತು. ಅರ್ಹತೆ ಮೇಲೆ ಮುಂದಿನ ದಿನಾಂಕದಂದು ವಿಚಾರಣೆ ನಡೆಸಬಹುದು ಎಂದು ನ್ಯಾಯಮೂರ್ತಿಗಳು ಸೂಚಿಸಿದರು. ವೈದ್ಯಕೀಯ ವರದಿಯ ಪ್ರತಿ ತಮಗೆ ನೀಡಿಲ್ಲವೆಂದು ಎಸ್​ಪಿಪಿ ಆಕ್ಷೇಪಣೆ ಸಲ್ಲಿಸಿದರು. 6 ವಾರಗಳ ಅವಧಿಗೆ ಷರತ್ತಿನ ಮೇಲೆ ಮಧ್ಯಂತರ ಜಾಮೀನು ನೀಡಲಾಗಿದೆ, ಆದರೆ ಸರ್ಜರಿಯ ದಿನಾಂಕ ಇನ್ನೂ ನಿಗದಿಪಡಿಸಿಲ್ಲವೆಂದು ಎಸ್​ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿದರು.

ಅದೇ ವೇಳೆಗೆ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ಮತ್ತೊಂದು ವೈದ್ಯಕೀಯ ವರದಿಯನ್ನು ಹೈಕೋರ್ಟ್​ಗೆ ಸಲ್ಲಿಕೆ ಮಾಡಿದರು. ಅದೇ ವೈದ್ಯಕೀಯ ವರದಿಯ ಪ್ರತಿಯನ್ನು ಎಸ್​ಪಿಪಿ ಪ್ರಸನ್ನ ಕುಮಾರ್ ಅವರಿಗೆ ನೀಡಲಾಯ್ತು. ವರದಿ ಪರಿಶೀಲಿಸಿ ಪ್ರತಿಕ್ರಿಯಿಸಲು ಸೂಚನೆ ನೀಡಿದ ನ್ಯಾಯಮೂರ್ತಿಗಳು ನವೆಂಬರ್ 26ಕ್ಕೆ ಅರ್ಜಿ ವಿಚಾರಣೆ ಮುಂದೂಡಿದರು.

ದರ್ಶನ್​ಗೆ ವೈದ್ಯಕೀಯ ಕಾರಣಗಳಿಗಾಗಿ ಆರು ವಾರಗಳ ಮಧ್ಯಂತರ ಜಾಮೀನನ್ನು ಹೈಕೋರ್ಟ್ ಈಗಾಗಲೇ ನೀಡಿದೆ. ಮೂರು ವಾರಗಳು ಈಗಾಗಲೇ ಕಳೆದು ಹೋಗಿವೆ. ಆದರೆ ದರ್ಶನ್​ಗೆ ಇನ್ನೂ ಯಾವುದೇ ಸರ್ಜರಿ ಮಾಡಲಾಗಿಲ್ಲ. ಇದರ ನಡುವೆ ಮಧ್ಯಂತರ ಜಾಮೀನು ರದ್ದತಿ ಕೋರಿ ಸುಪ್ರೀಂ ಕೋರ್ಟ್​ಗೆ ಮನವಿ ಸಲ್ಲಿಸಲು ಪೊಲೀಸ್ ಇಲಾಖೆ ನಿರ್ಧರಿಸಿದ್ದು, ಇದನ್ನು ಗೃಹ ಸಚಿವ ಪರಮೇಶ್ವರ್ ಸಹ ಖಾತ್ರಿ ಪಡಿಸಿದ್ದಾರೆ. ದರ್ಶನ್​ಗೆ ಮಧ್ಯಂತರ ಜಾಮೀನು ಮಾತ್ರವೇ ದೊರೆತಿದ್ದು, ನಿಯಮಿತ ಜಾಮೀನು ಕೊಡಿಸುವ ಪ್ರಯತ್ನವನ್ನು ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಮಾಡುತ್ತಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11 ರಂದು ದರ್ಶನ್ ಬಂಧನವಾಗಿತ್ತು. ಐದು ತಿಂಗಳ ಕಾಲ ಜೈಲಿನಲ್ಲಿ ಕಳೆದ ದರ್ಶನ್​ಗೆ ಮೂರು ವಾರಗಳ ಹಿಂದಷ್ಟೆ ಮಧ್ಯಂತರ ಜಾಮೀನು ನೀಡಲಾಗಿದೆ. ಅನಾರೋಗ್ಯದ ಕಾರಣ ನೀಡಿ ದರ್ಶನ್ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Darshan: ಆರೋಪಿ ದರ್ಶನ್‌ಗೆ ಸರ್ಜಿಕಲ್‌ ಚೇರ್‌