ಚಿತ್ರದುರ್ಗ: ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಆರೋಪಿ ನಟ ದರ್ಶನ್ಗೆ (Actor Darshan) ಆರು ವಾರಗಳ ಕಾಲದ ಮಧ್ಯಂತರ ಜಾಮೀನು (Interim bail) ದೊರೆತಿದೆ. ಈ ಕುರಿತು ರೇಣುಕಾ ಸ್ವಾಮಿಯ ತಂದೆ ಕಾಶೀನಾಥಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ಗೆ ಜಾಮೀನು ಸಿಕ್ಕಿರುವ ಕುರಿತು ಪ್ರತಿಕ್ರಿಯೆ ನೀಡಿರುವ ರೇಣುಕಾ ಸ್ವಾಮಿ ತಂದೆ ಕಾಶೀನಾಥಯ್ಯ, ‘ಮಧ್ಯಂತರ ಜಾಮೀನು ಸಿಕ್ಕಿದೆ, ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಅದು ನ್ಯಾಯಾಲಯ ಕೊಟ್ಟಿರುವ ಆದೇಶ, ದರ್ಶನ್ಗೆ ಜಾಮೀನು ಸಿಕ್ಕಿರುವುದು ಅದೊಂದು ಕಾನೂನು ಕ್ರಮ, ಅದಕ್ಕೆ ಗೌರವ ಕೊಡುತ್ತೇವೆ” ಎಂದಿದ್ದಾರೆ.
‘ನಮಗೆ, ನಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ, ನಾವು ಕಾನೂನು ಹೋರಾಟ ಮಾಡುತ್ತೇವೆ, ತಪ್ಪು ಮಾಡಿದವರಿಗೆ ಶಿಕ್ಷೆ ಆಗುವವರೆಗೆ ನಮ್ಮ ಕಾನೂನು ಹೋರಾಟ ಮುಂದುವರೆಯಲಿದೆ’ ಎಂದಿದ್ದಾರೆ. ಸೊಸೆ, ನವಜಾತ ಮೊಮ್ಮಗನ ಜೊತೆಗೆ ಹರಿಹರಕ್ಕೆ ಅವರು ತೆರಳಿದ್ದು, ಮಗುವಿನ ಅರೋಗ್ಯಕ್ಕಾಗಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.
ಇತ್ತೀಚೆಗಷ್ಟೆ ರೇಣುಕಾ ಸ್ವಾಮಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರೇಣುಕಾ ಸ್ವಾಮಿಯ ಕೊಲೆಯಾದಾಗ ಅವರ ಪತ್ನಿ ಗರ್ಭಿಣಿ ಆಗಿದ್ದರು.
ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ ಆರೋಪ ದರ್ಶನ್, ಪವಿತ್ರಾ ಗೌಡ ಹಾಗೂ ಇತರರ ಮೇಲಿದೆ. ಪ್ರಕರಣದಲ್ಲಿ ದರ್ಶನ್ ಆರೋಪಿ ನಂಬರ್ 2 ಆಗಿದ್ದಾರೆ. ಪವಿತ್ರಾ ಗೌಡ ಪ್ರಕರಣದ ಮೊದಲ ಆರೋಪಿಯಾಗಿದ್ದಾರೆ. ದರ್ಶನ್ರ ಆರೋಗ್ಯ ಸಮಸ್ಯೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಜಾಮೀನು ಮಂಜೂರು ಮಾಡಲಾಗಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಈ ಜಾಮೀನು ನೀಡಲಾಗಿದ್ದು, ದರ್ಶನ್ ತಮ್ಮಿಚ್ಛೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
ಇದನ್ನೂ ಓದಿ: Darshan Thoogudeepa Bail : ದರ್ಶನ್ ಬೇಲ್ ಕುರಿತು ವಕೀಲ ಸುನೀಲ್ ಹೇಳಿದ್ದೇನು?