Friday, 27th September 2024

Actor Darshan: ಬಳ್ಳಾರಿ ಜೈಲಿನಲ್ಲಿ ಐಟಿ ಇಲಾಖೆ ಅಧಿಕಾರಿಗಳಿಂದ ದರ್ಶನ್‌ ವಿಚಾರಣೆ

actor darshan

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka Swamy Murder Case) ಪ್ರಕರಣದಲ್ಲಿ ತನ್ನ ಪಾತ್ರ ಮುಚ್ಚಿಹಾಕಲು 85 ಲಕ್ಷ ರೂ. ಬಳಸಿದ್ದ ನಟ ದರ್ಶನ್‌ನನ್ನು (Actor Darshan) ಈ ಹಣದ ಮೂಲದ ಬಗ್ಗೆ ಐಟಿ ಅಧಿಕಾರಿಗಳು (Income tax Officers) ಎರಡು ದಿನಗಳಿಂದ ಸತತ ವಿಚಾರಣೆಗೆ ಒಳಪಡಿಸಿದ್ದಾರೆ. ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ (Bellary jail) ವಿಚಾರಣೆ ನಡೆದಿದೆ.

ಐವರು ಅಧಿಕಾರಿಗಳ ಐಟಿ ತಂಡ ಜೈಲಿಗೆ ಆಗಮಿಸಿದೆ. ಹೈಸೆಕ್ಯೂರಿಟಿ ಸೆಲ್‌ನಲ್ಲಿದ್ದ ದರ್ಶನ್‌ನನ್ನು ಕಾರಾಗೃಹದ ಅಧೀಕ್ಷಕರ ಕಚೇರಿ ಪಕ್ಕದ ಕೊಠಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಗುರುವಾರ ಸಂಜೆ 7.15ರವರೆಗೆ ವಿಚಾರಣೆ ನಡೆಯಿತು. ದರ್ಶನ್‌ ಪರ ಆಡಿಟರ್‌ ಎಂ.ಆರ್‌.ರಾವ್‌, ಸಹಾಯಕ ವಕೀಲ ರಾಮಸಿಂದ್‌ ಸಹ ಈ ವೇಳೆ ಜತೆಗಿದ್ದರು. ತಮ್ಮ ಆಪ್ತ ವಲಯಕ್ಕೆ ಅಪಾರ ಹಣ ನೀಡಿದ ಆರೋಪ ಕುರಿತು ಪ್ರಶ್ನೆಗಳನ್ನು ಕೇಳಿದ ಐಟಿ ಅಧಿಕಾರಿಗಳು ದರ್ಶನ್‌ ಹೇಳಿಕೆ ದಾಖಲಿಸಿಕೊಂಡರು. ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲು ದರ್ಶನ್‌ ಪರದಾಡಿದ್ದಾನೆ.

ಜೈಲಿನಲ್ಲಿ ಹೆಚ್ಚಿನ ಅವಧಿಯನ್ನು ನಿದ್ದೆ ಹಾಗೂ ಪುಸ್ತಕ ಓದುವುದರಲ್ಲಿ ದರ್ಶನ್‌ ಕಳೆಯುತ್ತಿದ್ದಾನೆ. ಐಟಿ ಅಧಿಕಾರಿಗಳ ವಿಚಾರಣೆ ಮಧ್ಯೆಯೂ ದರ್ಶನ್‌ನನ್ನು ಕಾಣಲು ‘ಡೆವಿಲ್‌’ ಸಿನಿಮಾ ನಿರ್ಮಾಪಕ ಜೆ.ವಿ ಪ್ರಕಾಶ್‌, ಆಪ್ತರಾದ ಸುನಿಲ್‌ ಕುಮಾರ್‌ ಮತ್ತು ಶ್ರೀನಿವಾಸ ಜೈಲಿಗೆ ಆಗಮಿಸಿದ್ದು, 20 ನಿಮಿಷ ಮಾತುಕತೆಗೆ ಅವಕಾಶ ನೀಡಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌, ರೌಡಿಶೀಟರ್‌ ಶ್ರೀನಿವಾಸ್‌ ಜೊತೆ ರಾಜಾತಿಥ್ಯ ಪಡೆದ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ ಶ್ರೀನಿವಾಸ್‌ ವಿರುದ್ಧದ ವಿಚಾರಣೆ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ ನೀಡಿದೆ. ಶ್ರೀನಿವಾಸ್‌ ಅಲಿಯಾಸ್‌ ಕುಳ್ಳ ಸೀನ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ಕುರಿತು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯಪೀಠ ಗುರುವಾರ ವಿಚಾರಣೆ ನಡೆಸಿತು.

ಇದನ್ನೂ ಓದಿ: Actor darshan: 85 ಲಕ್ಷ ರೂ.ಗೆ ದರ್ಶನ್‌ ಬೆನ್ನು ಬಿದ್ದ ಐಟಿ ಇಲಾಖೆ; ಜೈಲಿಗೆ ಬಂದ ವಕೀಲರು