Tuesday, 19th November 2024

Actor Darshan: ದರ್ಶನ್‌ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ: ಕಮಿಷನರ್ ಬಿ.ದಯಾನಂದ್

Actor Darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ (Actor Darshan) ಜಾಮೀನು ರದ್ದು ಕೋರಿ ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಮಿಷನರ್ ದಯಾನಂದ್ ಅವರು, ಮೇಲ್ಮನವಿ ಸಲ್ಲಿಸಲು ಈಗಾಗಲೇ ಸಿದ್ಧತೆ ನಡೆಸಲಾಗುತ್ತಿದೆ. ಕನ್ನಡದಲ್ಲಿರುವ ಮಾಹಿತಿಯನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿದ್ದ ನಟ ದರ್ಶನ್ ಬೆನ್ನು ನೋವು ಕಾರಣಕ್ಕೆ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಚಿಕಿತ್ಸೆಗಾಗಿ ದರ್ಶನ್‌ಗೆ ಹೈಕೋರ್ಟ್ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಸದ್ಯ ದರ್ಶನ್ ಬೆಂಗಳೂರಿನ ಬಿಜಿಎಸ್ ಗ್ಲೋಬಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Vikram Gowda: 20 ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿದ್ದ ನಕ್ಸಲ್; ಯಾರೀತ ವಿಕ್ರಂ ಗೌಡ?

Naxalite Encounter: ಎನ್‌ಕೌಂಟರ್‌ನಲ್ಲಿ ನಕ್ಸಲ್‌ ನಾಯಕ ವಿಕ್ರಂ ಗೌಡ ಹತ

Naxalite Encounter

ಉಡುಪಿ: ಉಡುಪಿ ಜಿಲ್ಲೆಯ (Udupi news) ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದ ಎನ್​ಕೌಂಟರ್​ನಲ್ಲಿ (Naxalite Encounter) ನಕ್ಸಲ್ ನಾಯಕ‌ ವಿಕ್ರಂ ಗೌಡ ಹತನಾಗಿದ್ದಾನೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಸೀತಂಬೈಲು ಎಂಬಲ್ಲಿ ನಕ್ಸಲರ ವಿರುದ್ಡ ನಡೆದ ಭೀಕರ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಹತ್ಯೆ ಮಾಡಲಾಗಿದೆ. ಕೊಪ್ಪ ತಾಲೂಕಿನ ಯಡಗುಂದ ಗ್ರಾಮಕ್ಕೆ ನಕ್ಸಲರು ಭೇಟಿ ನೀಡಿದ್ದ ಬಗ್ಗೆ ಎಎನ್ ಎಫ್ ತಂಡ ಮಾಹಿತಿ ಕಲೆಹಾಕಿತ್ತು. ಸೋಮವಾರ ರಾತ್ರಿ ವೇಳೆ 5 ಮಂದಿ ನಕ್ಸಲರ ತಂಡ ಸೀತಂಬೈಲು ಸಮೀಪ ರೇಷನ್ ಸಂಗ್ರಹಿಸಲು ಬಂದಿದೆ. ಈ ವೇಳೆ ಎಎನ್ ಎಫ್ ತಂಡ ಕಾರ್ಯಾಚರಣೆ ನಡೆಸಿದೆ. ಅದಕ್ಕೆ ಪ್ರತಿಯಾಗಿ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಭೀಕರ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಹತನಾಗಿದ್ದಾನೆ. ಇನ್ನುಳಿದ ನಾಲ್ಕೈದು ನಕ್ಸಲರು ಸ್ಥಳದಿಂದ ಪರಾರಿಯಾಗಿದ್ದಾರೆ.

ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ದಟ್ಟಾರಣ್ಯದಲ್ಲಿ, ಅರಣ್ಯದಂಚಿನ ಗ್ರಾಮಗಳಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿರುವ ಕಾರಣ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿತ್ತು. ಇದೀಗ ಉಡುಪಿ ಜಿಲ್ಲೆಯಲ್ಲಿ ಗುಂಡಿನ ಮೊರೆತ ಕೇಳಿದೆ. ನಕ್ಸಲ್ ನಾಯಕ ವಿಕ್ರಂ ಗೌಡ ಕಬ್ಬಿನಾಲೆ ಮೂಲದವನಾಗಿದ್ದಾನೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ನಕ್ಸಲ್ ಚಟುವಟಿಕೆ ಬಿರುಸುಗೊಂಡಿತ್ತು. ಹೀಗಾಗಿ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಆರಂಭಿಸಿತ್ತು.

ನಕ್ಸಲ್‌ ಚಟುವಟಿಕೆ ಚುರುಕು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೆ ನಕ್ಸಲ್‌ ಚಟುವಟಿಕೆ (Naxal activity) ಚುರುಕುಗೊಂಡಿದ್ದು, ನಕ್ಸಲ್ ನಾಯಕಿ ಮುಂಡಗಾರು ಲತಾ, ಜಯಣ್ಣ ಸೇರಿ ನಾಲ್ವರ ವಿರುದ್ಧ ಕಳೆದ ವಾರ ಎಫ್‌ಐಆರ್‌ ದಾಖಲಾಗಿತ್ತು. ಶೃಂಗೇರಿಯ ಗ್ರಾಮವೊಂದರ ಮನೆಗೆ ಹೋಗಿ ಗನ್ ತೋರಿಸಿ ಊಟ ಮಾಡಿ ಹೋಗಿದ್ದಾರೆಂಬ ಆರೋಪದಡಿ ಜಯಪುರ ಪೊಲೀಸ್ ಠಾಣೆಯಲ್ಲಿ ಯುಎಪಿಎ ಕಾಯ್ದೆಡಿ ಪ್ರಕರಣ ದಾಖಲಾಗಿದೆ.

ನಕ್ಸಲ್ ಚಟುವಟಿಕೆ ಕಂಡು ಬಂದ ಬೆನ್ನಲ್ಲೇ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಡೆಗುಂಡಿ, ಯಡಗುಂದಕ್ಕೆ ಮುಂಡಗಾರು ಲತಾ ತಂಡದವರು ಭೇಟಿ ನೀಡಿದ್ದು, ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮದ ಸುಬ್ಬೇಗೌಡರ ಮನೆಯಲ್ಲಿ ಗನ್ ತೋರಿಸಿ ಊಟ ಮಾಡಿದ್ದಾರೆ. ನಕ್ಸಲರು ಭೇಟಿ ನೀಡಿದ್ದ ಮನೆಯಲ್ಲಿ ಮೂರು ಬಂದೂಕುಗಳು ಪತ್ತೆಯಾಗಿವೆ.

ಚಿಕ್ಕಮಗಳೂರು ಎಸ್‌ಪಿ ವಿಕ್ರಂ ಆಮಟೆ, ಎಎನ್‌ಎಫ್ ಎಸ್‌ಪಿ ಜಿತೇಂದ್ರ ನೇತೃತ್ವದಲ್ಲಿ ಕಡೆಗುಂಡಿ ಗ್ರಾಮದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ನಕ್ಸಲ್ ತುಂಗಾ ತಂಡದ ನಾಯಕತ್ವವನ್ನು ಮುಂಡಗಾರು ಲತಾ ವಹಿಸಿಕೊಂಡಿದ್ದಾರೆ. ಮೋಸ್ಟ್ ವಾಂಟೆಡ್ ನಕ್ಸಲರ ಪಟ್ಟಿಯಲ್ಲಿ ಮುಂಡಗಾರು ಲತಾ ಮತ್ತು ಜಯಣ್ಣ ಇದ್ದಾರೆ.